ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳ ಹೋರಾಟದಿಂದ ಸಮಾಜಕ್ಕೆ ಶಕ್ತಿ: ಎಂ.ಎಸ್.ರುದ್ರಗೌಡ

ಪಂಚಮಸಾಲಿ ಸಮಾಜ ಮೀಸಲಾತಿ ಹೋರಾಟ ಸಮಿತಿ ಸಮರ್ಥನೆ
Last Updated 11 ಮೇ 2022, 15:25 IST
ಅಕ್ಷರ ಗಾತ್ರ

ವಿಜಯಪುರ:ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಷಯದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ನಿಸ್ವಾರ್ಥ ಬೆಂಬಲದಿಂದಾಗಿ ಸಮಾಜಕ್ಕೆ ದೊಡ್ಡ ಶಕ್ತಿ, ಹೆಸರು ಬಂದಿದೆಯೇ ಹೊರತು, ಯತ್ನಾಳರ ರಾಜಕೀಯ ಬದುಕಿಗೆ ಅಲ್ಲ ಎಂಬುದನ್ನು ಅವರ ರಾಜಕೀಯ ವಿರೋಧಿಗಳು ಅರ್ಥಮಾಡಿಕೊಳ್ಳಬೇಕು ಎಂದು ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ರುದ್ರಗೌಡ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕೂಡಲಸಂಗಮ ಜಗದ್ಗುರುಗಳ ಮನವಿಗೆ ಹಾಗೂ ಸಮಾಜದ ಒತ್ತಡಕ್ಕೆ ಮಣಿದು ಬಡಮಕ್ಕಳಿಗಳ ಅಭಿವೃದ್ಧಿ ದೃಷ್ಟಿಯಿಂದ ಯತ್ನಾಳ ಅವರು ಮೀಸಲಾತಿ ಹೋರಾಟಕ್ಕೆ ತನು, ಮನ ಹಾಗೂ ಧನ ಸಹಕಾರ ನೀಡಿದ್ದಾರೆಯೇ ಹೊರತು ತಮ್ಮ ರಾಜಕೀಯ ಏಳಿಗೆಗಾಗಿ ಅಲ್ಲ ಎಂದರು.

ಹಿಂದುತ್ವವಾದಿಯಾಗಿರುವ ಯತ್ನಾಳ ಅವರು ಯಾವಾಗಲೂ ಸ್ವಜಾತಿ ಸಂಘಟನೆಗೆ ಬಂದವರಲ್ಲ. ನಮ್ಮೆಲ್ಲರ ಒತ್ತಡಕ್ಕೆ ಮಣಿದು ಹಾಗೂ ಯಾವುದೇ ಆಮಿಷ, ಒತ್ತಡಕ್ಕೆ ಮಣಿಯದೆ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಮೀಸಲಾತಿ ಹೋರಾಟಕ್ಕೆ ಅನೆ ಬಲ ಬಂದಿದೆ ಎಂದು ತಿಳಿಸಿದರು.

ಕಳೆದ 16 ತಿಂಗಳಿನಿಂದ ನಡೆಯುತ್ತಿರುವ ಪಂಚಮಸಾಲಿಗಳ ಮೀಸಲಾತಿ ಚಳವಳಿ ಇಂದಿಗೂ ಜೀವಂತ ಇದೆ ಎನ್ನಲಿಕ್ಕೆ ಯತ್ನಾಳ ಗೌಡರ ನಿಸ್ವಾರ್ಥ ಹೋರಾಟ ಎಂಬುದನ್ನು ಟೀಕಾಕಾರರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

2004ರಲ್ಲಿ ಕೇಂದ್ರದ ಒಬಿಸಿ ಮೀಸಲಾತಿಗಾಗಿ ಸಮಾಜದ ಮುಖಂಡರನ್ನು ದೆಹಲಿಗೆ ಬರಮಾಡಿಕೊಂಡು ಪ್ರಧಾನಿ ವಾಜಪೇಯಿ ಅವರಿಗೆ ಮನವಿ ಅರ್ಪಿಸಿದ್ದಾರೆ. ಅಲ್ಲದೇ,ಸಂಸತ್‌ ಮುಂಭಾಗದಲ್ಲಿ ಕಿತ್ತೂರು ಚನ್ನಮ್ಮನ ಪ್ರತಿಮೆ ಸ್ಥಾಪನೆಗಾಗಿ ಪ್ರಧಾನಿಗಳ ಮನವೊಲಿಸಿ, ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ವಿಧಾನಮಂಡಲ ಅಧಿವೇಶನದಲ್ಲಿ ಪಂಚಮಸಾಲಿ ಹಾಗೂ ಕುರುಬ, ವಾಲ್ಮೀಕಿ, ಕೋಳಿ ಇತರ ಸಮುದಾಯಗಳ ಪರ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದಿದ್ದಾರೆ ಎಂದು ಹೇಳಿದರು.

ಸಚಿವ ಸ್ಥಾನ ಬೇಡ, ಸಮಾಜಕ್ಕೆ ಮೀಸಲಾತಿ ಕೊಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳುವ ಮೂಲಕ ಯತ್ನಾಳ ಅವರು ಸಮಾಜಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದು ಅವರು ಸಮರ್ಥಿಸಿಕೊಂಡರು.

ಮೀಸಲಾತಿ ಹೋರಾಟವನ್ನು ಯತ್ನಾಳ ಅವರು ಬೇರೆ ರಾಜಕಾರಣಿಗಳಂತೆ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದರೇ ಇಷ್ಟರಲ್ಲೇ ರಾಜ್ಯದ ಮುಖ್ಯಮಂತ್ರಿ, ಸಚಿವ ಅಥವಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗುತ್ತಿದ್ದರು ಎಂದರು.

ಸುರೇಶ ಬಿರಾದಾರ ಹಾಗೂ ಭೀಮಾಶಂಕರ ಹದನೂರ ಅವರು ಯಾವಾಗಲು ಯತ್ನಾಳರ ರಾಜಕೀಯ ವಿರೋಧಿಗಳು ಎಂಬುದು ಎಲ್ಲರಿಗೂ ಗೊತ್ತಿದೆ. ರಾಜಕೀಯ ದುರುದ್ದೇಶ ಕಾರಣಕ್ಕೆ ಯತ್ನಾಳರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯತ್ನಾಳರನ್ನು ತುಳಿಯಲು ನಿರಾಣಿ ನೇತೃತ್ವದಲ್ಲಿ ಬಬಲೇಶ್ವರದ ಮುಗ್ಧ ಸ್ವಾಮೀಜಿಯನ್ನು ಬಳಸಿಕೊಂಡು, ಮತ್ತೊಂದು ಪೀಠ ಮಾಡಿ ಸಮಾಜವನ್ನು ಒಡೆಯಲು ಪ್ರಯತ್ನಿಸಿ ಮೂರಬಿಟ್ಟಿಯಾಗಿದ್ದೀರಿ ಎಂದು ಹೇಳಿದರು.

ಮೀಸಲಾತಿ ಹೋರಾಟದ ಹೆಸರಲ್ಲಿ ಯತ್ನಾಳ ಅವರನ್ನು ಹಾಗೂ ಮೀಸಲಾತಿಯ ಯಾವುದೇ ಹೋರಾಟಗಾರರನ್ನು ಟೀಕಿಸಿದರೆ ನಾವು ಸುಮ್ಮನಿರುವುದಿಲ್ಲ.ನಿಮ್ಮ ವಿರುದ್ಧ ಉಗ್ರ ಹೋರಾಟ ಮಾಡಬೇಕಾದಿತು. ಸಮಾಜದಿಂದ ಹೊರಹಾಕಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಮಸಾಲಿ ಮಹಾಸಭಾದ ಅಧ್ಯಕ್ಷ ಬಿ.ಎಂ. ಪಾಟೀಲ, ಶಂಕರಗೌಡ ಬಿರಾದಾರ, ನಿಂಗನಗೌಡ ಸೋಲಾಪೂರ, ಸಂಜು ಬಿರಾದಾರ, ಈರಣ್ಣ ಸಿರಮಗೊಂಡ, ಮಲ್ಲಿಕಾರ್ಜುನ ಹಂಗರಗಿ,ಸೋಮಶೇಖರ ದೇವರ, ಶೋಭಾ ಬಿರಾದಾರ, ಕಾವೇರಿ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT