ವಿಜಯಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೀಡುವ 2023-24 ಹಾಗೂ 2024-25ನೇ ಸಾಲಿನ 'ಗಡಿನಾಡ ಚೇತನ' ಪ್ರಶಸ್ತಿಗೆ ಮೂವರು ಮಹನೀಯರು ಮತ್ತು ನಾಲ್ಕು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.
2023-24ನೇ ಸಾಲಿನ ಡಾ. ಚನ್ನಬಸವ ಪಟ್ಟದ್ದೇವರು 'ಗಡಿನಾಡಿನ ಚೇತನ' ಪ್ರಶಸ್ತಿಗೆ ಕಾಸರಗೋಡಿನ ರಾಧಾಕೃಷ್ಣ ಕೆ. ಉಳಿಯತ್ತಡ, ಡಾ. ಜಯದೇವಿ ತಾಯಿ ಲಿಗಾಡೆ 'ಗಡಿನಾಡ ಚೇತನ' ಪ್ರಶಸ್ತಿಗೆ ಬೀದರಿನ ಪಂಚಾಕ್ಷರಿ ಪುಣ್ಯಶೆಟ್ಟಿ, ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ 'ಗಡಿನಾಡ ಚೇತನ' ಪ್ರಶಸ್ತಿಗೆ ಬೆಳಗಾವಿಯ ಬಿ.ಎಸ್. ಗವಿಮಠ ಆಯ್ಕೆಯಾಗಿದ್ದಾರೆ.
2024-25ನೇ ಸಾಲಿನ ಡಾ. ಚನ್ನಬಸವ ಪಟ್ಟದ್ದೇವರು 'ಗಡಿನಾಡ ಚೇತನ' ಪ್ರಶಸ್ತಿಗೆ ಗುಜರಾತಿನ ಅಹ್ಮದಬಾದ್ ಕರ್ನಾಟಕ ಸಂಘ, ಜಯದೇವಿ ತಾಯಿ ಲಿಗಾಡೆ 'ಗಡಿನಾಡ ಚೇತನ' ಪ್ರಶಸ್ತಿಗೆ ಮಹಾರಾಷ್ಟ್ರ ರಾಜ್ಯದ ಸಂಖದ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಉಮದಿಯ ಸರ್ವೋದಯ ಶಿಕ್ಷಣ ಸಂಸ್ಥೆ ಮತ್ತು ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ 'ಗಡಿನಾಡ ಚೇತನ' ಪ್ರಶಸ್ತಿಗೆ ಕಾಸರಗೋಡಿನ ಪೆರಡಾಲ ನೀರ್ಚಾಲು, ಕುಂಬಳೆ (ದಾರಿ) ಮಹಾಜನ ವಿದ್ಯಾಭಿವರ್ಧಕ ಸಂಘವನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿಯು ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದೆ ಎಂದು ತಿಳಿಸಿದರು. ಪ್ರಶಸ್ತಿಯು ಹಲ್ಮಿಡಿ ಶಾಸನದ ಮಾದರಿಯ ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ ತಲಾ ₹1 ಲಕ್ಷ ನಗದು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.
ಮಹಾರಾಷ್ಟ್ರ ರಾಜ್ಯದ ಜತ್ತ ತಾಲ್ಲೂಕಿನ ಗುಡ್ಡಾಪುರದ ಶ್ರೀ ದಾನಮ್ಮ ದೇವಿ ಸುಕ್ಷೇತ್ರದಲ್ಲಿ ಸೆಪ್ಟೆಂಬರ್ 30 ರಂದು ನಡೆಯಲಿರುವ ಕರ್ನಾಟಕ ಸಂಭ್ರಮ-50' ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಹಾಗೂ ಹೊರನಾಡ ಗಡಿ ಕನ್ನಡಿಗರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಹಾಗೂ ಮಹಾರಾಷ್ಟ್ರ ರಾಜ್ಯದ ಕನ್ನಡ ಶಾಲೆಗಳಿಗೆ ಕನ್ನಡ ಭಾಷೆಯ 'ನಲಿ-ಕಲಿ' ಕಲಿಕಾ ಸಾಮಗ್ರಿಗಳು ವಿತರಣೆ ಮಾಡಲಿದ್ದಾರೆ.
ಸಮಾರಂಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಲಾಂಛನವನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಬಿಡುಗಡೆ ಮಾಡಲಿದ್ದಾರೆ. ಸಚಿವ ಎಂ.ಬಿ.ಪಾಟೀಲ ಅವರು ಗಡಿ ಪ್ರಾಧಿಕಾರದ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಪರಿಚಯಾತ್ಮಕ ಕೈಪಿಡಿಯನ್ನು ಸಚಿವ ಶಿವಾನಂದ ಪಾಟೀಲ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.
ಮಹಾರಾಷ್ಟ್ರದ ಕಾರ್ಮಿಕ ಸಚಿವರೂ ಆದ ಸಾಂಗ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ ಖಾಡೆ ಪಾಲ್ಗೊಳ್ಳಲಿದ್ದಾರೆ ಎಂದರು.
ಸಮಾರಂಭದಲ್ಲಿ ಗಾಯಕಿ ಸಂಗೀತಾ ಕಟ್ಟಿ ಹಾಗೂ ವಿವಿಧ ಜಾನಪದ ನೃತ್ಯ ಕಲಾವಿದರು ನಾಡಿನ ಕಲೆಯ ಕುರಿತು ಹೊರನಾಡ ಕನ್ನಡಿಗರನ್ನು ರಂಜಿಸಲಿದ್ದಾರೆ.
ಅಂದು ಸಂಜೆ 7ಕ್ಕೆ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯಪುರ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಗಡಿ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಗಡಿ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಎಂ.ಎಸ್. ಮದಭಾವಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ್ ವಾಲಿಕಾರ ಉಪಸ್ಥಿತರಿದ್ದರು.
ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಕಾಸರಗೋಡು
ಪಂಚಾಕ್ಷರಿ ಪುಣ್ಯಶೆಟ್ಟಿ, ಬೀದರ್
ಬಿ.ಎಸ್. ಗವಿಮಠ, ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.