ವಿಜಯಪುರ: ‘ಮೈಸೂರು ಹುಲಿ’ ಎಂದು ಪ್ರಸಿದ್ಧವಾದ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬ ಎಂದು ಘೋಷಣೆ ಮಾಡಬೇಕು ಹಾಗೂ ಪ್ರತಿ ವರ್ಷ ಟಿಪ್ಪು ಜಯಂತಿಯಂದು ಸಾರ್ವತ್ರಿಕ ರಜೆ ನೀಡಬೇಕು ಎಂದು ಸಮಾಜ ಸೇವಕ ಫಯಾಜ್ ಕಲಾದಗಿ ಒತ್ತಾಯಿಸಿದರು.
ಇಲ್ಲಿನ ಸಂಜಯಗಾಂಧಿ ಯುವಕರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಟಿಪ್ಪು ಜಯಂತಿಯಲ್ಲಿ ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ದೇಶ ಭಕ್ತ. ಭಾರತಕ್ಕಾಗಿ ಹೋರಾಟ ಮಾಡಿ ಹುತಾತ್ಮನಾದ ಧೀಮಂತ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಟಿಪ್ಪುವಿನ ದೇಶ ಭಕ್ತಿಯನ್ನು ನಿರ್ಲಕ್ಷಿಸಿವೆ. ಟಿಪ್ಪುವಿಗೆ ಸೇರಿದ ಹಲವಾರು ಐತಿಹಾಸಿಕ ಸ್ಥಳಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅವುಗಳ ಸಂರಕ್ಷಣೆಗೆ ಸರ್ಕಾರ ಒತ್ತು ನೀಡಬೇಕು. ಟಿಪ್ಪು ಸುಲ್ತಾನ್ ಪ್ರತಿಮೆಯನ್ನು ಸಂಸತ್ ಮತ್ತು ವಿಧಾನಸೌಧ ಎದುರು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಅಕ್ರಮ ಮಾಶ್ಯಾಳಕರ ಮಾತನಾಡಿ, ರಾಜಕೀಯ ಕಾರಣಗಳಿಗೆ ಟಿಪ್ಪು ಸುಲ್ತಾನ್ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಟಿಪ್ಪು ಹಿಂದೂ ವಿರೋಧಿಯಾಗಿರಲಿಲ್ಲ. ಅಪ್ಪಟ ದೇಶಭಕ್ತರಾಗಿದ್ದರು. ಯಾರನ್ನೂ ಬಲವಂತವಾಗಿ ಮತಾಂತರ ಮಾಡಿದವರಲ್ಲ. ರಾಜಕೀಯ ವಿರೋಧಿಗಳನ್ನು ಟಿಪ್ಪು ಒಬ್ಬ ರಾಜನಾಗಿ ಹಿಂಸಿಸಿರಬಹುದು. ಅದು ಅಂದಿನ ರಾಜಕೀಯ ಕಾಲಘಟ್ಟದಲ್ಲಿ ಅನಿವಾರ್ಯವಾಗಿರಬಹುದು. ಆದರೆ, ಧರ್ಮದ ಹೆಸರಿನಲ್ಲಿ ಎಂದೂ ಟಿಪ್ಪು ಸುಲ್ತಾನ್ ಯಾರನ್ನೂ ಬೆದರಿಸಿರಲಿಲ್ಲ ಎಂಬುದು ಅನೇಕ ದಾಖಲೆಗಳಿಂದ ತಿಳಿದುಬರುತ್ತದೆ ಎಂದರು.
ದಸ್ತಗೀರ ಸಾಲೋಟಗಿ, ರಜಾಕ್ ಕಾಖಂಡಕಿ, ಮಂಜುನಾಥ ದೊಡಮನಿ, ಶ್ರೀಕಾಂತ ಆಳೂರ, ಮೋಹನ ಶಿಂಧೆ, ನಶೀಮ ರೋಜಿನದಾರ, ದಾದಾಪೀರ ಮುಜಾವರ, ಬುಡನ್ ಉಕ್ಕಲಿ, ಭಾಷಾ ಪಾಂಡುಗೋಳ, ಅಬು ಬೆದ್ರಕರ್, ಮೌಲಾಸಾಬ ಕಾಖಂಡಕಿ, ನಬಿ ಉಕ್ಕಲಿ, ಪೈಗಂಬರ ಕಾಖಂಡಕಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.