ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ: ಎಲ್ಲರ ಚಿತ್ತ ಮೂವತ್ತರತ್ತ

ಎರಡನೇ ಹಂತ ಶಾಂತಿಯುತ; ಶೇ 69.75 ಮತದಾನ
Last Updated 27 ಡಿಸೆಂಬರ್ 2020, 14:01 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ 212 ಗ್ರಾಮ ಪಂಚಾಯ್ತಿಗಳ ಪೈಕಿ 199 ಗ್ರಾಮ ಪಂಚಾಯ್ತಿಗಳಿಗೆ ಶಾಂತಿಯುತವಾಗಿ ಚುನಾವಣೆ ನಡೆದಿದ್ದು, ಈಗ ಎಲ್ಲರ ಚಿತ್ತಡಿ.30 ರಂದು ನಡೆಯಲಿರುವ ಮತ ಎಣಿಕೆಯತ್ತ ನೆಟ್ಟಿದೆ.

ಡಿ.22 ರಂದು ಮೊದಲ ಹಂತದಲ್ಲಿ 111 ಮತ್ತು ಡಿ.27ರಂದು ಎರಡನೇ ಹಂತದಲ್ಲಿ 88 ಗ್ರಾಮ ಪಂಚಾಯ್ತಿಗಳ ಒಟ್ಟು 3754 ಸ್ಥಾನಗಳಿಗೆ ಸ್ಪರ್ಧಿಸಿದ್ದ 9247 ಅಭ್ಯರ್ಥಿಗಳ ಹಣೆ ಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಜಿಲ್ಲಾಡಳಿತ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ತುರುಸಿನ ಪೈಪೋಟಿ ಒಡ್ಡಿದ್ದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಇದೀಗ ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಈಗಾಗಲೇ 369 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿವಿಧ ಕಾರಣಕ್ಕೆ 13 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆದಿಲ್ಲ. ಉಳಿದಂತೆ ಐದು ಸ್ಥಾನಗಳಿಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣೆ ನಡೆದಿಲ್ಲ.

ಶೇ 69.75ರಷ್ಟು ಮತದಾನ:ಜಿಲ್ಲೆಯ ಇಂಡಿ ಉಪ ವಿಭಾಗದ 88 ಗ್ರಾಮ ಪಂಚಾಯ್ತಿಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಮಾಹಿತಿ ಪ್ರಕಾರ ಶೇ 69.75ರಷ್ಟು ಮತದಾನವಾಗಿದೆ.

ಚಳಿಯನ್ನು ಲೆಕ್ಕಿಸದೇ ಮತದಾರರು ಬೆಳಿಗ್ಗೆಯೇ ಮತಗಟ್ಟೆಗೆ ಧಾವಿಸಿ ತಮ್ಮ ಹಕ್ಕು ಚಲಾಯಿಸಿದರು. ರೈತರು, ಮಹಿಳೆಯರು ಹೆಚ್ಚಿನ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ, ಸರದಿ ಸಾಲಿನಲ್ಲಿ ನಿಂತು ಮತ ಹಾಕಿದರು.

ಬೆಳಿಗ್ಗೆ 7ರಿಂದ 9ರ ವರೆಗೆ ಶೇ 14.48, ಬೆಳಿಗ್ಗೆ 11ರ ವರೆಗೆ ಶೇ 21.19, ಮಧ್ಯಾಹ್ನ 1ರ ವರೆಗೆ ಶೇ 34.53, ಮಧ್ಯಾಹ್ನ 3ರ ವರೆಗೆ ಶೇ 58.33 ಹಾಗೂ ಸಂಜೆ 5ರ ವರೆಗೆ ಶೇ 69.75ರಷ್ಟು ಮತದಾನವಾಯಿತು.

ಸಣ್ಣಪುಟ್ಟ ವಾಗ್ವಾದಗಳನ್ನು ಹೊರತು ಪಡಿಸಿದರೆ ಜಿಲ್ಲೆಯಾದ್ಯಂತ ಮತದಾನವು ಶಾಂತಿಯುತವಾಗಿ ನಡೆಯಿತು.

ಕೋವಿಡ್‌ ಹಿನ್ನೆಲೆಯಲ್ಲಿ ಪ್ರತಿ ಮತಟಗಟ್ಟೆಯಲ್ಲೂ ಮತದಾರರಿಗೆ ಹ್ಯಾಂಡ್‌ ಸ್ಯಾನಿಟೈಸ್‌ ಸಿಂಪಡಿಸಿ, ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ ಒಳ ಬಿಡಲಾಯಿತು.

ಹಕ್ಕು ಚಲಾಯಿಸಿದ ಕೋವಿಡ್‌ ಮತದಾರರು:ದೇವರ ಹಿಪ್ಪರಗಿ ತಾಲ್ಲೂಕಿನ ದೇವೂರು ಬೂತ್‌ನಲ್ಲಿಕೋವಿಡ್‌ ಪಾಸಿಟಿವ್‌ ಮತದಾರರು ಪಿಪಿ ಕಿಟ್‌ ಧರಿಸಿ, ಕೋವಿಡ್‌ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು. ಕೋವಿಡ್‌ ಪಾಸಿಟಿವ್‌ ಮತದಾರರಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾಧಿಕಾರಿ ಪರಿಶೀಲನೆ:ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಅವರು ಸೂಕ್ಷ್ಮ ಮತಗಟ್ಟೆಗಳಾದ ದೇವರ ಹಿಪ್ಪರಗಿ ತಾಲ್ಲೂಕಿನ ಪಡಗಾನೂರ, ಸಿಂದಗಿ ತಾಲ್ಲೂಕಿನ ಕೋರಹಳ್ಳಿ, ಇಂಡಿ ತಾಲ್ಲೂಕಿನ ನಾದ ಬಿ.ಕೆ., ಸಾಲೊಟಗಿ, ಚವಡಿಹಾಳ, ಬಬಲಾದಿ, ಹಲಗುಣಕಿ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಆರತಿ‌ ತಟ್ಟೆಯೊಂದಿಗೆ ಮತಗಟ್ಟೆಗೆ ಬಂದ ಮಹಿಳೆಯರು!

ವಿಜಯಪುರ: ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದ ಮತಗಟ್ಟೆಯಲ್ಲಿ ಮಹಿಳಾ ಮತದಾರರು ಮತಪೆಟ್ಟಿಗೆಗೆ ಆರತಿ ಬೆಳಗಿ ಮತ ಹಾಕಲು ಮುಂದಾದ ಕುತೂಹಲಕರ ಘಟನೆ ನಡೆದಿದೆ. ಆದರೆ, ಚುನಾವಣಾ ಸಿಬ್ಬಂದಿಆರತಿ ತಟ್ಟೆಯನ್ನು ಮತದಾನ ಕೊಠಡಿಯೊಳಗೆ ಬಿಡದೆ ತಡೆದರು. ಬಳಿಕ ಮತಗಟ್ಟೆ ಹೊರಗಡೆಯೇ ಅರತಿ ಬೆಳಗಿದ ಮಹಿಳೆಯರು, ನಂತರ ಮತ ಚಲಾಯಿಸಿದರು.

ಮೊದಲ ಮತ ಚಲಾಯಿಸಿದಖುಷಿ

ವಿಜಯಪುರ: ಜಿಲ್ಲೆಯ ಮುಳಸಾವಳಗಿ ಗ್ರಾಮದ ಕಾವೇರಿ ಬಸಕೋಡ ಮೊದಲ ಬಾರಿಗೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತಚಲಾಯಿಸಿದ ಖುಷಿಯಲ್ಲಿದ್ದರು.

‘ಅಭ್ಯರ್ಥಿಗಳು ಮನೆ ಬಾಗಿಲಿಗೆ ಬಂದು ಕೈ ಮುಗಿದು ಮತ ಕೇಳಿದ್ದಾರೆ. ಈ ಸನ್ನಿವೇಶ ಎಂದೂ ಮರೆಯಲಾಗದು. ಪ್ರಜಾಪ್ರಭುತ್ವದಲ್ಲಿ ಮತಕ್ಕಿರುವ ಮಹತ್ವ ಇದರಿಂದ ಅರ್ಥವಾಗುತ್ತದೆ. ಯಾರೊಬ್ಬರೂ ಆಸೆ, ಆಮಿಷಕ್ಕೆ ಒಳಗಾಗಿ ತಮ್ಮ ಹಕ್ಕನ್ನು ಮಾರಿಕೊಳ್ಳದೇ ಸಮರ್ಥ ಅಭ್ಯರ್ಥಿಗೆ ನಮ್ಮ ವೋಟ್ ಹಾಕುವ ಮೂಲಕ ಜವಾಬ್ದಾರಿ ಮೆರೆಯಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಮತದಾನ ವಿವರ

ತಾಲ್ಲೂಕು; ಶೇಕಡವಾರು

ಇಂಡಿ;72.91

ಚಡಚಣ;67.91

ಸಿಂದಗಿ;68.11

ದೇವರಹಿಪ್ಪರಗಿ;70.08

369 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಶೇ 79.58 ಮೊದಲ ಹಂತದಲ್ಲಿ ಆದ ಮತದಾನ

ಶೇ 69.75 ಎರಡನೇ ಹಂತದಲ್ಲಿ ಆದ ಮತದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT