ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ನಾಡಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ

ಆರು ಮನೆಗಳಿಗೆ ಹಾನಿ; ಬೆಳೆ ಜಲಾವೃತ, ಸಂಚಾರಕ್ಕೆ ಅಡಚಣೆ
Last Updated 2 ಆಗಸ್ಟ್ 2022, 14:16 IST
ಅಕ್ಷರ ಗಾತ್ರ

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಮಂಗಳವಾರ ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.

ವಿಜಯಪುರ, ಕೊಲ್ಹಾರ, ತಿಕೋಟಾ, ಬಬಲೇಶ್ವರ, ನಿಡಗುಂದಿ, ಆಲಮಟ್ಟಿ, ಮನಗೂಳಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ತಾಳಿಕೋಟೆ ವ್ಯಾಪ್ತಿಯಲ್ಲಿತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಯಿತು. ರಸ್ತೆಗಳ ತುಂಬೆಲ್ಲ ನೀರು ನಿಂತು ಜನ, ವಾಹನ ಸಂಚಾರಕ್ಕೆ ಅಡೆತಡೆಯಾಯಿತು.ವ್ಯಾಪಾರ, ವಹಿವಾಟಿಗೂ ತೊಂದರೆಯಾಯಿತು. ಹೊಲಗಳಲ್ಲಿ ನೀರು ನಿಂತು ಬೆಳೆಗೆ ತೊಂದರೆಯಾಗಿದೆ. ಹಳ್ಳ–ಕೊಳ್ಳಗಳು ತುಂಬಿ ಹರಿದವು.

ಅತಿಯಾದ ಮಳೆ ಕಾರಣನಾಗರ ಪಂಚಮಿ ಆಚರಣೆಗೂ ತೊಡಕಾಯಿತು. ನಾಗರಕಲ್ಲು, ನಾಗರಕಟ್ಟೆ, ಹುತ್ತಕ್ಕೆ ಹಾಲೆಯರಲು ಸಹ ಮಳೆ ಬಿಡುವು ನೀಡದ ಕಾರಣ ಮನೆಯಲ್ಲೇ ಬಹುತೇಕರು ಪೂಜೆ ಸಲ್ಲಿಸಿದರು.

ಆರು ಮನೆಗಳಿಗೆ ಹಾನಿ

ವಿಜಯಪುರ ತಾಲ್ಲೂಕಿನ ಮದಭಾವಿ ತಾಂಡದಲ್ಲಿ ಒಂದು, ಇಂಡಿ ತಾಲ್ಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ಒಂದು, ಬಬಲೇಶ್ವರ ತಾಲ್ಲೂಕಿನ ಎರಡು ಸೇರಿದಂತೆ ಒಟ್ಟು ಆರು ಮನೆಗಳಿಗೆ ಹಾನಿಯಾಗಿದೆ.

ನಿಡಗುಂದಿ ತಾಲ್ಲೂಕಿನಬುದ್ನಿ ಗ್ರಾಮದ ಮಾಳು ಗಣಿ ಹೊಲದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸಜ್ಜೆ ಬೆಳೆ ಸಂಪೂರ್ಣ ಜಲಾವೃತಗೊಂಡಿದೆ. ಅಶೋಕ ಕೊಳಮೇಲಿ ಅವರಿಗೆ ಸೇರಿದ ಒಂದು ಎಕರೆ ಪ್ರದೇಶದ ಸೂರ್ಯಕಾಂತಿ ಹಾಗೂ ಮೆಕ್ಕೆಜೋಳ ಜಲಾವೃತಗೊಂಡಿದೆ.

ಎಡೆಬಿಡಿದ ಸುರಿದ ಮಳೆಗೆ ಹೊಲದಲ್ಲಿ ನೀರು ನಿಂತಿದೆ. ಆದರೆ ನೀರು ಒಡ್ಡಿನಿಂದ ಮುಂದಕ್ಕೆ ಹೋಗದ ಕಾರಣ ಬೆಳೆಯಲ್ಲಿ ನೀರು ನಿಂತು ಹಾನಿಯಾಗಿದೆ ಎಂದು ಮಾಳು ಗಣಿ ತಿಳಿಸಿದರು.

ಮಳೆಯ ಅಬ್ಬರಕ್ಕೆ ನಿಡಗುಂದಿ ತಾಲ್ಲೂಕಿನ ಅಬ್ಬಿಹಾಳ ಗ್ರಾಮದಲ್ಲಿ ಒಂದು ಮನೆ ಭಾಗಶಃ ಬಿದ್ದಿದೆ. ಶನಿವಾರ ಸುರಿದಿದ್ದ ಮಳೆಗೆ ಆರು ಮನೆ ಬಿದ್ದಿವೆ ಹಾಗೂ ಒಂದು ಕರು ಕೂಡಾ ಸತ್ತಿದೆ.

ದವಸ–ಧಾನ್ಯ ಹಾಳು

ದೇವರಹಿಪ್ಪರಗಿ ತಾಲ್ಲೂಕಿನ ಸಾತಿಹಾಳಗ್ರಾಮದ ಎಸ್.ಸಿ ಕಾಲೊನಿಯಲ್ಲಿ ಮಳೆ ನೀರುಮನೆಯೊಳಗೆ ನುಗ್ಗಿ ದವಸ,ಧಾನ್ಯ ಹಾಳಾಗಿದೆ. ಮನೆಯಿಂದ ನೀರು ಹೊರ ಹಾಕಲು ಜನ ಹರ ಸಾಹಸ ಪಟ್ಟರು.ನಮ್ಮ ಕಾಲೊನಿ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು. ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರ ನಗರದ ವಾರ್ಡ್ ನಂಬರ್ 7ರ ಕುಂಬಾರ ಗಲ್ಲಿ ಹತ್ತಿರ ದಶರಥ ದಹಿಂಡೆ ಎಂಬುವರ ಮನೆ ಮಳೆಯಿಂದ ಭಾಗಶಃ ಹಾಳಾಗಿದ್ದು, ಪಾಲಿಕೆ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಜತೆಗೆ ಪಾಲಿಕೆ ಮಾಜಿ ಸದಸ್ಯ ರಾಹುಲ್ ಜಾಧವ್ ವೀಕ್ಷಿಸಿ ಜಿಲ್ಲಾಡಳಿತದಿಂದ ಸೂಕ್ತ ಪರಿಹಾರ ಕೊಡಿಸುವದಾಗಿ ಭರವಸೆ ನೀಡಿದರು.

****

ಹಲಸಂಗಿಯಲ್ಲಿ ಹೆಚ್ಚು ಮಳೆ

ವಿಜಯಪುರ: ಮಂಗಳವಾರ ಬೆಳಿಗ್ಗೆ 8ರ ವರೆಗೆ ಜಿಲ್ಲೆಯಲ್ಲಿ 14.84 ಮಿ.ಮೀ.ಮಳೆಯಾಗಿದೆ.

ಹಲಸಂಗಿಯಲ್ಲಿ ಅತೀ ಹೆಚ್ಚು ಅಂದರೆ84 ಮಿ.ಮೀ.ಮಳೆಯಾಗಿದೆ. ಉಳಿದಂತೆಇಂಡಿ 49.8, ಅಗರಖೇಡ 39.2,ಝಳಕಿ 37.4, ಬಸವನ ಬಾಗೇವಾಡಿ 29.7, ಮನಗೂಳಿ 28.3, ತಿಕೋಟಾ 21.8, ಹೊರ್ತಿ 20.4, ನಾಲತವಾಡ 17.3,ಹಿಟ್ನಳ್ಳಿ 16.8,ಹೂವಿನ ಹಿಪ್ಪರಗಿ 12.8, ಆಲಮಟ್ಟಿ 12,ನಾಗಠಾಣ 10.2, ಕಡ್ಲೆವಾಡಿ 10, ವಿಜಯಪುರ 3.6 ಮಿ.ಮೀ, ಬೂತನಾಳ 16.2, ಕುಮಟಗಿ 8.6, ಮಮದಾಪುರ 8.8, ಬಬಲೇಶ್ವರ 3.6, ಕನ್ನೂರು 8.1, ಅರೇಶಂಕರ 9.5, ಮಟ್ಟಿಹಾಳ 13, ಮುದ್ದೇಬಿಹಾಳ 8.4, ತಾಳಿಕೋಟೆ 6.4, ಢವಳಗಿ 6, ನಾದ ಬಿ.ಕೆ.1.4, ಚಡಚಣ 6, ಆಲಮೇಲ 3.8, ರಾಮನಹಳ್ಳಿ 8.2, ದೇವರ ಹಿಪ್ಪರಗಿ 7ಮಿ.ಮೀ. ಮಳೆಯಾಗಿದೆ.

****

ಆರೋಗ್ಯ ಕೇಂದ್ರಕ್ಕೆ ನುಗ್ಗಿದ ನೀರು

ಕೊಲ್ಹಾರ: ಸೋಮವಾರ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನದವರೆಗೂ ಸುರಿದ ಜೋರು ಮಳೆಗೆ ಕೊಲ್ಹಾರ ಪಟ್ಟಣ ಹಾಗೂ ತಾಲ್ಲೂಕಿನ ಜನ ತೀವ್ರ ತೊಂದರೆ ಅನುಭವಿಸಿದರು.

ಕೊಲ್ಹಾರ ತಾಲ್ಲೂಕಿನ ಹಣಮಾಪುರ ಗ್ರಾಮದಲ್ಲಿರುವ ಅಂಗನವಾಡಿ ಹಾಗೂ ಉಪ‌ ಆರೋಗ್ಯ ಕೇಂದ್ರಗಳಿಗೆ ಮಳೆ‌ನೀರು ಹರಿದು ಎರಡೂ ಕೆಂದ್ರಗಳು ಸಂಪೂರ್ಣ ಜಲಾವೃತಗೊಂಡವು.

ಪ್ರತಿ ಬಾರಿ‌ ಮಳೆಯಾದಾಗಲೂ ಹಣಮಾಪುರ ಗ್ರಾಮಸ್ಥರಿಗೆ ಈ ಗೋಳು ತಪ್ಪಿದ್ದಲ್ಲ. ಎಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಯಿಂದ ಮುಕ್ತಿ ಸಿಕ್ಕಿಲ್ಲ ಎನ್ನುತ್ತಾರೆ ಗ್ರಾಮದ ಯುವಕ ಹಣಮಂತ ಛಬ್ಬಿ.

ಎನ್‌ಟಿಪಿಸಿ ಹಾರುಬೂದಿ ಕೆರೆಯಿಂದ ಸವುಳ–ಜವುಳಗೊಂಡು ಹಾಳಾಗಿರುವ ಸುತ್ತಲ‌ ಮಸೂತಿ ಗ್ರಾಮದ ಕೃಷಿ ಭೂಮಿಗಳಲ್ಲಿ ಅತಿಯಾದ ಮಳೆಯಿಂದ‌ ಕೊಳವೆಬಾವಿಗಳ ಮೂಲಕ ನೀರು ಹೊರ ಬೀಳುತ್ತಿದೆ. ಇದರಿಂದ ಕಬ್ಬು, ಈರುಳ್ಳಿ‌ ಹಾಗೂ ಹಲವು ಬೆಳೆಗಳು ನೀರಿನಲ್ಲಿ ನಿಂತು‌ ಹಾಳಾಗುತ್ತಿವೆ. ಅಲ್ಲದೇ, ತಡಲಗಿಯಲ್ಲಿ ರೈತ ದೊಡ್ಡಮನಿಯವರ ಕಬ್ಬು ಬೆಳೆ ಗಾಳಿಮಳೆಗೆ ಸಂಪೂರ್ಣ ನೆಲಕಚ್ಚಿದೆ.

ರಾಷ್ಟ್ರೀಯ ಹೆದ್ದಾರಿ 218 ರ ಉಪ್ಪಲದಿನ್ನಿ ರಸ್ತೆಯಿಂದ ಕೊಲ್ಹಾರ ಪಟ್ಟಣಕ್ಕೆ ಪ್ರವೇಶಿಸುವ ಅಂಡರ್ ಪಾಸ್ ನಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚರಿಸಲು ಹರಸಾಹಸ ಪಡುವಂತಾಯಿತು.

***

ಶಾಸಕ ದೇವಾನಂದ ಪರಿಶೀಲನೆ

ವಿಜಯಪುರ: ನಗರದ ರೈಲು ನಿಲ್ದಾಣ ವ್ಯಾಪ್ತಿ ಬಡಾವಣೆಯ ಮುಖ್ಯ ರಸ್ತೆಗಳಲ್ಲಿ ಮಳೆ ನೀರು ತುಂಬಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ. ಸ್ಥಳಕ್ಕೆ ಶಾಸಕ ದೇವಾನಂದ ಚವ್ಹಾಣ ಭೇಟಿ ನೀಡಿ ವೀಕ್ಷಿಸಿದರು.

‘ಮಳೆಯಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ತಕ್ಷಣವೇ ಕ್ರಮ ಕೈಕೊಳ್ಳಬೇಕು. ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕಾಮಗಾರಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಕೆ.ಆರ್.ಐ.ಡಿ.ಎಲ್. ಕಾರ್ಯಪಾಲಕ ಎಂಜಿನಿಯರ್‌ ತಿಮ್ಮರಾಜಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಲ್ಲಿಕಾರ್ಜುನ ಮತ್ತಿಕಟ್ಟಿ, ಮುಖಂಡರಾದ ಫಯಾಜ್, ಗುಲಾಬ ಚವ್ಹಾಣ, ಶಿವಾನಂದ ಹಿರೇಕುರುಬರ, ಶಕ್ತಿಕುಮಾರ ಉಕುಮನಾಳ, ರವಿ ಚವ್ಹಾಣ, ಆರಿಫ್ ಇದ್ದರು.

***

ಮನೆಗೆ ನುಗ್ಗಿದ ಮಳೆ ನೀರು

ನಾಲತವಾಡ: ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆ ವರೆಗೆ ಸುರಿದ ಭಾರೀ ಮಳೆಯಿಂದ ನಾಲತವಾಡದ ಬಜಾರದ ಹಲವು ಅಂಗಡಿಗಳಿಗೆ ನೀರು ನುಗ್ಗಿದಪರಿಣಾಮ ಜನರು ತೀವ್ರ ತೊಂದರೆ ಅನುಭವಿಸುವಂತಾಯಿತು.

ರಾತ್ರಿಯ ವೇಳೆ ಜಿಟಿಜಿಟಿ ಮಳೆಯ ನಡುವೆ ಆಗೊಮ್ಮೆ ಈಗೊಮ್ಮೆ ಜೋರಾದ ಮಳೆ ಬಂತು, ಬೆಳಿಗ್ಗೆ 8 ರಿಂದ 10 ರ ನಡುವೆ ಇದ್ದಕ್ಕಿದ್ದಂತೆ ಸುರಿದ ಭಾರೀ ಮಳೆಯಿಂದ ರಸ್ತೆಯಲ್ಲಿನ ನೀರು ಕೆಲವು ಅಂಗಡಿ, ಆಸ್ಪತ್ರೆಗಳಿಗೆ, ಮನೆಗಳಿಗೆ ನುಗ್ಗತೊಡಗಿತು.

ರೋಗಿಗಳು, ಗ್ರಾಹಕರು, ಜನರು ಎಷ್ಟೇ ಹರಸಾಹಸಪಟ್ಟರು ಮಳೆಯ ನೀರು ನುಗ್ಗಿದ್ದರಿಂದ ಅಸಹಾಯಕರಾದರು.

ಎರಡು ಗಂಟೆಗೂ ಅಧಿಕ ಹೊತ್ತು ಸುರಿದ ಮಳೆಯ ಪರಿಣಾಮವಾಗಿ ಬೈಕ್‌ಗಳು ನೀರಲ್ಲಿ ಮುಳುಗಿದವು, ರಸ್ತೆಯ ಪಕ್ಕದಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದವರ ಸಾಮಾನುಗಳು ಕೊಚ್ಚಿಕೊಂಡು ಹೋದವು. ಮನೆಯಲ್ಲಿದ್ದ ಸಾಮಾನು, ಸರಂಜಾಮು ನೀರಿನಲ್ಲಿ ತೇಲಿಹೊದವು. ಮಳೆಯ ಪರಿಣಾಮ ಪಟ್ಟಣದ ಗಂಗನಗೌಡರ ಓಣಿ, ಗಚ್ಚಿನಬಾವಿ ಓಣಿ, ಹಟ್ಟಿ ಓಣಿಯ ಮನೆಗೆ ನೀರು ನುಗ್ಗಿದ್ದರಿಂದ ಜನರು ನೀರು ಹೊರ ಹಾಕುತ್ತಲೇ ಕಳೆದರು.

ಹಿಂದೆಂದು ಕಂಡು ಕೇಳರಿಯದ ಮಳೆಗೆ ಜನರು ಅಕ್ಷರಶಃ ತತ್ತರಿಸಿ ಹೋಗುವಂತಾಗಿತ್ತು. ಮಳೆಯಿಂದ ಭಾರೀ ಪ್ರಮಾಣದ ಹಾನಿ, ತೊಂದರೆ ಆಗಿದೆ. ಕೂಡಲೇಕಂದಾಯ ಸಂಬಂಧಿತ ಇಲಾಖೆ ಅಧಿಕಾರಿಗಳು ಭೇಟಿ ನೀಡಬೇಕು ಎಂದು ಪಟ್ಟಣದ ವೀರೇಶ ಕಂದಗಲ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT