ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಹೆದ್ದಾರಿ ತಡೆ, ಪ್ರತಿಭಟನೆ; ಎಪಿಎಂಸಿ ಬಂದ್‌

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಭಾರತ್‌ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ರೈತರ ಪ್ರತಿಭಟನೆಗೆ ಕಾಂಗ್ರೆಸ್‌, ಜೆಡಿಎಸ್‌ ಬೆಂಬಲ
Last Updated 27 ಸೆಪ್ಟೆಂಬರ್ 2021, 15:08 IST
ಅಕ್ಷರ ಗಾತ್ರ

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೋಮವಾರ ಕರೆ ನೀಡಲಾಗಿದ್ದ ಭಾರತ್‌ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ವಿವಿಧ ರೈತ ಸಂಘಟನೆಗಳು ಪ್ರತಿಭಟನಾ ಜಾಥಾ, ಹೆದ್ದಾರಿ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು, ಖರೀದಿದಾರರು ಹಾಗೂ ರೈತರು ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಗಿತಗೊಳಿಸಿ ಭಾರತ್ ಬಂದ್‌ಗೆ ಬೆಂಬಲ ನೀಡಿದ್ದರಿಂದ ಮಾರುಕಟ್ಟೆ ಪ್ರದೇಶ ಬಿಕೊ ಎನ್ನುತ್ತಿತ್ತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ಭಾರತ್‌ ಬಂದ್‌ ಬೆಂಬಲಿಸಿದರು. ಉಳಿದಂತೆ ನಗರದಲ್ಲಿ ಬಸ್‌, ಆಟೋ ರಿಕ್ಷಾ, ಟಂಟಂ ಸೇರಿದಂತೆ ಬಹುತೇಕ ವಾಹನಗಳ ಸಂಚಾರ ಎಂದಿನಂತೆ ಸಹಜವಾಗಿತ್ತು.

ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ರೈತ, ಕಾರ್ಮಿಕ, ವಿದ್ಯಾರ್ಥಿ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಬೆಳಿಗ್ಗೆ ನಗರದ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಬೈಕ್ ಜಾಥಾ ಮಾಡಿದರು. ನಂತರ ಸಿದ್ದೇಶ್ವರ ಗುಡಿಯಿಂದ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಬಂಡವಾಳಶಾಹಿ ಪರವಾದ ಕೃಷಿ ನೀತಿಗಳಿಗೆ ಧಿಕ್ಕಾರ, ವಿದ್ಯುತ್ ತಿದ್ದುಪಡಿ ಬಿಲ್‌ಗೆ ಧಿಕ್ಕಾರ, ರೈತ ವಿರೋಧಿ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಿರಿ ಎಂದು ಘೋಷಣೆ ಕೂಗಿದರು.

ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಸಿ ಕಲಾದಗಿ, ಆರ್.ಕೆ.ಎಸ್.ನ ರಾಜ್ಯ ಉಪಾಧ್ಯಕ್ಷ ಬಿ.ಭಗವಾನರೆಡ್ಡಿ, ‌ಅಕ್ರಮ್ ಮಾಶಾಳಕರ, ಅರವಿಂದ ಕುಲಕರ್ಣಿ, ಶ್ರೀನಾಥ ಪುಜಾರಿ, ಲಕ್ಮಣ ಹಂದ್ರಾಳ, ಶಕ್ತಿಕುಮಾರ, ಸದನಾಂದ ಮೋದಿ, ಮಲ್ಲಿಕಾರ್ಜುನ, ಸುಜಾತಾ ಕಳ್ಳಿಮನಿ, ನಿಂಗರಾಜ ಆಲೂರು, ಪೀರ್ ಜಮದಾರ,ಸುರೇಖಾ ರಜಪೂತ, ಬಾಳು ಜೇವೂರ, ರಿಜ್ವಾನ್ ಮುಲ್ಲಾ, ಬಂಡಿವಡ್ಡರ, ನಿರ್ಮಲಾ ಹೊಸಮನಿ, ಸಿದ್ದಲಿಂಗ ಬಗೇವಾಡಿ, ದಸ್ತಗಿರ ಉಕ್ಕಲಿ, ಆಶೋಕ ರಾಠೋಡ, ನಾಗರಾಜ ಟಿ., ಕಾವೇರಿ ರಜಪೂತ, ಸುರೇಖಾ ಕಡಪಟ್ಟಿ, ದೀಪಾ, ಶಿವಬಾಳಮ್ಮ, ಗೀತಾ, ಶಿವರಂಜಿನಿ ಅಕ್ಷಯಕುಮಾರ, ಎಸ್.ಎಂ, ಕಾಶಿಬಾಯಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹೆದ್ದಾರಿ ತಡೆದು ಆಕ್ರೋಶ

ವಿಜಯಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಸಿಂದಗಿ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರಾಜ್ಯ ಘಟಕದ ಅಧ್ಯಕ್ಷ ವಾಸುದೇವ ಮೇಟಿ, ರಾಜ್ಯ ಉಪಾಧ್ಯಕ್ಷ ನಾಗರಾಜ್ ಗೋನಾಳ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಪೂಜಾರ, ಮಹಿಳಾ ಘಟಕದ ಅಧ್ಯಕ್ಷೆ ಗಂಗಾ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ರೇಣುಕಾ ಮಾಶಾಳ, ಸುಜಾತ ಸಿಂಧೆ ಪಾಲ್ಗೊಂಡಿದ್ದರು.

ವಿವಿಧೆಡೆ ಹೆದ್ದಾರಿ ತಡೆ:

ದೇವರಹಿಪ್ಪರಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಂದ್ ಅಂಗವಾಗಿ ಸಾಂಕೇತಿಕ ಪ್ರತಿಭಟನೆ ನಡೆಸಿ, 15 ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿದರು.

ಕೊಲ್ಹಾರ ಬ್ಲಾಕ್ ಕಾಂಗ್ರೆಸ್ ಮತ್ತು ಕಿಸಾನ್ ಕಾಂಗ್ರೆಸ್‌ ಮುಖಂಡರು ರಾಷ್ಟ್ರೀಯ ಹೆದ್ದಾರಿಯ ಉಪ್ಪಲದಿನ್ನಿ ಕ್ರಾಸ್ ಬಳಿ ಕೆಲ ಹೊತ್ತು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ರೈತ ವಿರೋಧಿ ಕೇಂದ್ರ ಸರ್ಕಾರ’

ವಿಜಯಪುರ: ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರೈತರಿಗೆ ಬೆಂಬಲ ವ್ಯಕ್ತಪಡಿಸಲಾಯಿತು.

ಕಾಂಗ್ರೆಸ್‌ ಮುಖಂಡ ಹಮೀದ ಮುಶ್ರೀಪ್ ಮಾತನಾಡಿ, ಕೇಂದ್ರ ಸರ್ಕಾರ ರೈತ ವಿರೋಧಿಯಾಗಿದೆ. ಬೆಲೆ ಏರಿಕೆ ಮೂಲಕ ರೈತರ, ಜನಸಾಮನ್ಯರ ಮೇಲೆ ಆರ್ಥಿಕ ಹೊರೆ ಹೊರಿಸಿದೆ. ಕೂಡಲೆ ಪೆಟ್ರೋಲ್, ಡಿಸೇಲ್ ದರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಕಿಸಾನ್‌ ಜಿಲ್ಲಾ ಘಟಕದ ಅಧ್ಯಕ್ಷ ಬಾಪುಗೌಡ ಪಾಟೀಲ ವಡವಡಗಿ ಮಾತನಾಡಿ, ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಕಿಸಾನ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮಂಜುನಾಥ ಬುದ್ನಿ‌, ಶಹಜಾ ದುಂಡಸಿ, ವಸಂತ ಹೊನಮೊಡೆ, ರವೀಂದ್ರ ಜಾಧವ, ಶಕ್ತಿಕುಮಾರ ಉಕುಮನಾಳ, ಧನರಾಜ ಎ., ಕಲ್ಲಪ್ಪ ಪಾಠಶೆಟ್ಟಿ, ಪುಪ್ಪು ಜಾಧವ, ಬಸವರಾಜ ಬಿರಾದಾರ, ಚಂದ್ರಶೇಖರ ಘಂಟೆಪ್ಪಗೋಳ, ಎಸ್.‌ಎಂ.ಆಲಗೂರ, ದಸ್ತಗೀರ ಶಾನವಾಲೆ, ಸಲೀಂ ಬಾಗಲಕೋಟ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT