ಶನಿವಾರ, ಸೆಪ್ಟೆಂಬರ್ 18, 2021
28 °C
ಜಿಲ್ಲೆಯ ಸರ್ವಮಠಾಧಿಶರಿಂದ ಶಾಸಕ ಎಂ.ಬಿ.ಪಾಟೀಲರಿಗೆ ಸನ್ಮಾನ

ನಂದನವನವಾದ ಬರದ ನಾಡು: ಶಿವಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಆಲಮಟ್ಟಿ ಜಲಾಶಯದಿಂದ ಕಾಲುವೆಗಳ ಮೂಲಕ ಕೆರೆ, ಬಾಂದಾರಗಳು ಹಾಗೂ ಹಳ್ಳ-ಕೊಳ್ಳಗಳನ್ನು ತುಂಬಿದ್ದರಿಂದ ಜಿಲ್ಲೆ ಇದೀಗ ನಂದನವನವಾಗಿ ಮಾರ್ಪಟ್ಟಿದೆ. ಅಂತರ್ಜಲವೂ ಸಹ ವೃದ್ಧಿಯಾಗಿ, ರೈತರ ಆದಾಯ ಹತ್ತು ಪಟ್ಟು ಹೆಚ್ಚಿದ್ದಲ್ಲದೇ ಭೂಮಿಯ ಮೌಲ್ಯವೂ ಹೆಚ್ಚಾಗಲು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರ ಕರ್ತತ್ವ ಶಕ್ತಿ ಕಾರಣ ಎಂದು ಜಾಲಹಳ್ಳಿಮಠದ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಶಿವಾಚಾರ್ಯರು ಹೇಳಿದರು.

ನಗರದ ಜಾಲಹಳ್ಳಿ ಮಠದಲ್ಲಿ ಜಿಲ್ಲೆಯ ಸರ್ವಮಠಾಧಿಶರ ಪರವಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪಂಚನದಿಗಳ ನಾಡು ಎಂದೇ ಖ್ಯಾತಿ ಹೊಂದಿದ ವಿಜಯಪುರ ಜಿಲ್ಲೆ ಸದಾ ಬರಗಾಲದಿಂದ ಕೂಡಿದ್ದರಿಂದ ಇಲ್ಲಿನ ಜನ ದುಡಿಯಲು ಗುಳೆ ಹೋಗುವುದು ಅನಿವಾರ್ಯವಾಗಿತ್ತು. ಇದರಿಂದ ರೈತರ ಬದುಕು ತೀವ್ರ ತೊಂದರೆಯಲ್ಲಿತ್ತು. ಎಂ.ಬಿ.ಪಾಟೀಲ್‍ ಅವರು ಕಳೆದ 5 ವರ್ಷಗಳ ಕಾಲ ರಾಜ್ಯ ಸರ್ಕಾರದಲ್ಲಿ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರಿಂದ ಇಂದು ಬರಗಾಲ ಪ್ರದೇಶ ಎಂಬುದು ಅಳಿಸಲು ಕಾರಣವಾಗಿದೆ ಎಂದರು.

ಖೇಡಗಿ ವಿರಕ್ತಮಠದ ಶಿವಬಸವ ರಾಜೇಂದ್ರ ಮಹಾಸ್ವಾಮಿ ಮಾತನಾಡಿ, ಕೋಟಿ ವೃಕ್ಷ ಅಭಿಯಾನದ ಮೂಲಕ ಜಿಲ್ಲೆಯಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸುವ ಆಂದೋಲನಕ್ಕೆ ಎಂ.ಬಿ.ಪಾಟೀಲರು ಚಾಲನೆ ನೀಡಿ, ಅದರಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯಲ್ಲಿ ಅಲ್ಲಲ್ಲಿ ನೆಡುತೋಪುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜನರಲ್ಲಿ ಅರಿವು ಮೂಡಿದೆ. ಹಸಿರೀಕರಣದ ಫಲವಾಗಿ ಇದೀಗ ಕಾಲಕಾಲಕ್ಕೆ ಮಳೆ ನಮ್ಮ ಜಿಲ್ಲೆಯಲ್ಲಿ ಆಗುತ್ತಿದೆ. ಇದಕ್ಕೆ ಕಾರಣ ಕೋಟಿ ವೃಕ್ಷ ಅಭಿಯಾನ ಎನ್ನುವುದನ್ನು ಕೆಲ ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ ಎಂದರು.

ನಾಗಠಾಣದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಭಕ್ತರ ಹಿತವೇ ಮಠಾಧಿಪತಿಗಳ ಹಿತ. ಭಕ್ತರು ಚೆನ್ನಾಗಿದ್ದರೆ ಮಠಾಧಿಪತಿಗಳು ಖುಷಿಯಾಗಿರುತ್ತಾರೆ. ಇಡೀ ಜಿಲ್ಲೆಯ ಜನರ ಬದುಕನ್ನು ಬಂಗಾರಗೊಳಿಸಿದ ಎಂ.ಬಿ.ಪಾಟೀಲ್  ಅವರನ್ನು ಜಿಲ್ಲೆಯ ಸಮಸ್ತ ಮಠಾಧಿಪತಿಗಳ ಪರವಾಗಿ ನಾವಿಂದು ಅಭಿನಂದಿಸುತ್ತೇವೆ ಎಂದರು.

ಬಂಥನಾಳ ವೃಷಭಲಿಂಗ ಶ್ರೀಗಳು,  ಉದಯೇಶ್ವರಮಠದ ಸ್ವಾಮೀಜಿ, ಮಮದಾಪುರದ ಅಭಿನವ ಮುರುಗೇಂದ್ರ ಸ್ವಾಮೀಜಿ, ಕೋಲ್ಹಾರ ಕಲ್ಲಿನಾಥ ದೇವರು, ಮಾಗಣಗೇರಿ, ತಡವಲಗಾ, ಢವಳಗಿ, ಬಾಗೇವಾಡಿ, ಹತ್ತಳ್ಳಿ, ಗೊಳಸಾರ, ರೋಡಗಿ, ಆಲಮೇಲ, ಅರ್ಜುಣಗಿ, ಯಂಕಂಚಿ, ದೇವರಹಿಪ್ಪರಗಿ, ಅಗರಖೇಡ, ಕುಮಸಗಿ, ಅಥರ್ಗಾ, ಮಲಘಾಣ, ಜಕನೂರ, ಬೊಮ್ಮನಹಳ್ಳಿ, ಇಂಚಗೇರಿ, ಗುಂಡಕನಾಳ ಮಠದ ಶ್ರೀಗಳು ಸೇರಿದಂತೆ 30ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.