ಗುಡ್ಡಾಪುರ (ಮಹಾರಾಷ್ಟ್ರ): ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯಪುರ ಜಿಲ್ಲಾಡಳಿತದ ಸಹಯೋಗದೊಂದಿಗೆ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆ ಜತ್ತ ತಾಲ್ಲೂಕಿನ ಗುಡ್ಡಾಪುರ ಶ್ರೀ ದಾನಮ್ಮ ದೇವಿ ಸುಕ್ಷೇತ್ರದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಿರುವ ಹೊರನಾಡ ಕನ್ನಡಿಗರ ಸಮಾವೇಶ ಹಾಗೂ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸೋಮವಾರ ಅದ್ಧೂರಿ ಚಾಲನೆ ಲಭಿಸಿತು.
ದಾನಮ್ಮ ದೇವಿ ದೇವಸ್ಥಾನದ ಆವರಣದಿಂದ ಕರ್ನಾಟಕ ಭವನದ ವರೆಗೆ ನಡೆದ ಕಲಾ ತಂಡಗಳ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಜಗ್ಗಲಗಿ, ವೀರಗಾಸೆ, ಸುಗ್ಗಿ ಕುಣಿತ, ನಂದಿಕೋಲು, ಗೊಂಬೆ ಕುಣಿತ ಗಮನ ಸೆಳೆಯಿತು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೇರಿದಂತೆ ಸಾವಿರಾರು ಗಡಿನಾಡ ಕನ್ನಡಿಗರು ಪಾಲ್ಗೊಂಡಿದ್ದಾರೆ.