ಇರದುದರೆಡೆಗೆ ತುಡಿಯುತ್ತಿರುವ ‘ಇಬ್ರಾಹಿಂಪುರ’

ವಿಜಯಪುರ: ಆದಿಲ್‌ಶಾಹಿ ಅರಸನ ಹೆಸರಿನೊಂದಿಗೆ ಗುರುತಿಸಿಕೊಂಡಿರುವ ‘ಇಬ್ರಾಹಿಂಪುರ’ ವಿಜಯಪುರ ನಗರದ ಪ್ರಮುಖ ಬಡಾವಣೆಗಳಲ್ಲೊಂದು. ಆದರೆ, ಇಲ್ಲಿಯ ಜನ ತಮಗಿಲ್ಲದಿರುವ ನಾಗರಿಕ ಮೂಲಸೌಲಭ್ಯಗಳಿಗಾಗಿ ನಿತ್ಯ ತುಡಿಯುತ್ತಿದ್ದಾರೆ.
ಹೌದು, ಈ ಬಡಾವಣೆಯಲ್ಲಿ ಯಾವೊಂದು ರಸ್ತೆಗಳು ಉತ್ತಮವಾಗಿಲ್ಲ. ಗುಂಡಿ, ತೆಗ್ಗೆಗಳಿಂದ ಕೂಡಿದ್ದು, ಜನ, ವಾಹನ ಸಂಚಾರ ದುಸ್ತರವಾಗಿದೆ. ಅಷ್ಟೇ ಅಲ್ಲ ಸೂಕ್ತ ಚರಂಡಿ, ಒಳಚರಂಡಿ ಸಂಪರ್ಕ ಇಲ್ಲದ ಕಾರಣ ಬಚ್ಚಲು ನೀರು ರಸ್ತೆ ಮೇಲೆ ಹರಿಯುತ್ತಿದೆ. ಅದನ್ನು ತುಳಿದಾಡಿಕೊಂಡೇ ಜನರು ಸಂಚರಿಸಬೇಕಾದ ಸ್ಥಿತಿ ಇದೆ. ಇಡೀ ವಾತಾವರಣ ಕೊಳಚೆ ಪ್ರದೇಶವಾಗಿದೆ.
ಇಬ್ರಾಹಿಂಪುರ ರೈಲ್ವೆ ಗೇಟ್ ಪಕ್ಕದಲ್ಲೇ ಸಾರ್ವಜನಿಕ ಶೌಚಾಲಯವೊಂದಿದ್ದರೂ ಬಳಸಲು ಯೋಗ್ಯವಾಗಿಲ್ಲ. ಹೀಗಾಗಿ ಇಲ್ಲಿಯ ಬಹುತೇಕ ಜನ ರೈಲ್ವೆ ಹಳಿ ಪಕ್ಕದಲ್ಲಿ, ಜಾಲಿ ಪೊದೆಯ ಮರೆಯಲ್ಲಿ ಬಹಿರ್ದೆಸೆಗೆ ಜಾಗ ಹುಡುದಕುವುದು ರೂಡಿಯಾಗಿದೆ.
ರಾತ್ರಿ ವೇಳೆ ಬಡಾವಣೆಯಲ್ಲಿ ಬೀದಿ ದೀಪಗಳಿಲ್ಲದ ಕಾರಣ ಜನ ಕತ್ತಲೆಯಲ್ಲಿ ಭಯದಿಂದ ಸಂಚರಿಸಬೇಕಾಗಿದೆ. ಕುಡಿಯುವ ನೀರು ಮೂರ್ನಾಲ್ಕು ದಿನಗಳಿಗೊಮ್ಮೆ ಪೂರೈಕೆಯಾಗುತ್ತಿದೆ ಎಂಬುದನ್ನು ಹೊರತು ಪಡಿಸಿದರೆ ಕನಿಷ್ಠ ನಾಗರಿಕ ಸೌಲಭ್ಯಗಳಿಲ್ಲ ಎಂಬುದು ಇಲ್ಲಿಯ ನಿವಾಸಿಗಳ ಅಳಲು.
ಮಹಾನಗರ ಪಾಲಿಕೆ ವಾಹನಗಳು ಮನೆ, ಮನೆ ಕಸ ಸಂಗ್ರಹಕ್ಕೆ ಇಲ್ಲಿಗೆ ನಿತ್ಯ ಬಾರದೇ ಇರುವುದರಿಂದ ಬಡಾವಣೆಯ ನಿವಾಸಿಗಳು ಮನೆಯ ತ್ಯಾಜ್ಯ, ಕಸವನ್ನು ಖಾಲಿ ನಿವೇಶನಗಳಲ್ಲಿ, ರಸ್ತೆ ಪಕ್ಕದಲ್ಲಿ ಎಸೆಯುತ್ತಿದ್ದಾರೆ. ಇದರಿಂದ ಹಂದಿಗಳ ಹಾವಳಿ ಹೆಚ್ಚಾಗಿದೆ.
ಒಂದು ವರ್ಷದ ಹಿಂದೆ ಆರಂಭವಾಗಿರುವ ಇಬ್ರಾಹಿಂಪುರ ರೈಲ್ವೆ ಗೇಟ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಕಳೆದ ನವೆಂಬರ್‌ನಿಂದ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿರುವುದರಿಂದ ಇಬ್ರಾಹಿಂಪುರದ ಅಂಗಡಿ, ಹೋಟೆಲ್, ಆಟೊ ಚಾಲಕರು ವ್ಯಾಪಾರ, ವಹಿವಾಟು ಇಲ್ಲದೇ ತೀವ್ರ ನಷ್ಠ ಅನುಭವಿಸುತ್ತಿದ್ದಾರೆ.
ರೇಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯಿಂದ ಏಳುತ್ತಿರುವ ಧೂಳು ಇಲ್ಲಿಯ ಜನರ ಆರೋಗ್ಯವನ್ನೇ ಏರುಪೇರು ಮಾಡಿದೆ. ನಗರಕ್ಕೆ ಬರಬೇಕೆಂದರೆ ಬೈಪಾಸ್ ಮೂಲಕ ಎರಡರಿಂದ ಮೂರು ಕಿ.ಮೀ. ಸುತ್ತುಹಾಕಿ ಬಾಗಲಕೋಟೆ ರಸ್ತೆ ಮೂಲಕವಾಗಿ ಬರಬೇಕಾಗಿದೆ.
ರೈಲ್ವೆ ಮೇಲ್ಸೇತುವೆ ನಿರ್ಮಾಣದಿಂದ ಬಸ್, ಆಟೊ ಸಂಚಾರ ಬಂದ್ ಆಗಿರುವುದರಿಂದ ಈ ಮಾರ್ಗವಾಗಿ ಸಂಚರಿಸುವ ರಾಧಾಕೃಷ್ಣ ನಗರ, ಶಾಂತವೀರನಗರ, ನಂದಿನಿ ಬಡಾವಣೆ, ಗುರುಪಾದೇಶ್ವರ ನಗರ, ಗಣೇಶನಗರ, ಲಕ್ಷ್ಮಿನಗರ, ತ್ರಿಮೂರ್ತಿ ನಗರದ ಸಾವಿರಾರು ನಿವಾಸಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಇಬ್ರಾಹಿಂಪುರ ರೈಲ್ವೆ ಹಳಿಯಲ್ಲಿ ಜನ, ವಾಹನ ಸಂಚಾರ ತಡೆಗಾಗಿ ಸದ್ಯ ಗೇಟ್ ಸಂಪೂರ್ಣ ಬಂದ್ ಮಾಡಿದ್ದರೂ ಸಹ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗೇಟ್‌ನಲ್ಲೆ ನುಸುಳಿಕೊಂಡು ನಗರಕ್ಕೆ ಬರುತ್ತಿದ್ದಾರೆ.
ಉದ್ಯಾನಗಳು ಹೆಸರಿಗಷ್ಟೇ ಇವೆ. ಅಲ್ಲಿ ಹಸಿರು, ಗಿಡಮರಗಳು, ಕೂರಲು ಆಸನದ ವ್ಯವಸ್ಥೆ ಇಲ್ಲವಾಗಿದೆ. ಒಪನ್ ಜಿಮ್ ವ್ಯವಸ್ಥೆಯೂ ಇಲ್ಲ.
ಸರ್ಕಾರಿ ಶಾಲೆ, ಕಾಲೇಜು ಇಲ್ಲವಾದರೂ ಎರಡೆರಡು ವೈನ್ ಶಾಪ್‌ಗಳು ಇದ್ದು, ಇಲ್ಲಿಯ ಬಡ ಕೂಲಿಕಾರ್ಮಿಕರ ಬದುಕನ್ನು ಮತ್ತಷ್ಟು ಹೈರಾಣಾಗಿಸಿವೆ.
ಇಬ್ರಾಹಿಂಪುರದಿಂದ ಈ ಹಿಂದೆ ಆಯ್ಕೆಯಾದ ಸದಸ್ಯರಲ್ಲಿ ಒಬ್ಬರು ನಗರಸಭೆ ಉಪಾಧ್ಯಕ್ಷ, ಇನ್ನೊಬ್ಬರು ಮಹಾನಗರ ಪಾಲಿಕೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರೂ ಸಹ ಬಡಾವಣೆ ಮಾತ್ರ ಅಭಿವೃದ್ಧಿಯಾಗಿಲ್ಲ.
****
ಸರಿಯಾದ ರಸ್ತೆ, ಚರಂಡಿ ಇಲ್ಲ, ರಾತ್ರಿ ವೇಳೆ ಬೀದಿ ದೀಪ ಇಲ್ಲ, ಕಸ ಒಯ್ಯುವ ವಾಹನ ಬರುತ್ತಿಲ್ಲ, ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ರೋಗರುಜಿನ ಹರಡುವ ಭೀತಿ ಎದುರಾಗಿದೆ
- ಶಾಂತ ಹೊನ್ನದ, ಹರಿಜನ ಕಾಲೊನಿ ನಿವಾಸಿ, ಇಬ್ರಾಹಿಂಪುರ
****
ಇಬ್ರಾಹಿಂಪುರ ಬಡಾವಣೆಯ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಹಲವು ಬಾರಿ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾರೊಬ್ಬರೂ ಇತ್ತ ಸುಳಿಯುತ್ತಿಲ್ಲ
–ಮಲ್ಲಿಕಾರ್ಜುನ ನಾಯ್ಕೊಡಿ, ಇಬ್ರಾಹಿಂಪುರ ನಿವಾಸಿ
****
ಇಬ್ರಾಹಿಂಪುರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭವಾದಲ್ಲಿಂದ ಮನೆಯಲ್ಲಿ ನೆಮ್ಮದಿಯಿಂದ ಕೂರಲು, ಊಟ ಮಾಡಲು ಆಗುತ್ತಿಲ್ಲ ಅಷ್ಟೊಂದು ಧೂಳು ಆವರಿಸಿದೆ. ವ್ಯಾಪಾರ ನೆಲಕಚ್ಚಿದೆ
–ಆನಂದ ನಾಯ್ಕೋಡಿ, ಇಬ್ರಾಹಿಂಪುರ ನಿವಾಸಿ
****
ಇಬ್ರಾಹಿಂಪುರದ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮಕೈಗೊಳ್ಳುತ್ತೇನೆ. ಸಾರ್ವಜನಿಕ, ವೈಯಕ್ತಿಕ ಶೌಚಾಲಯ ನಿರ್ಮಾಣ, ಕಸ ಸಂಗ್ರಹಕ್ಕೆ ಆದ್ಯತೆ ನೀಡಲಾಗುವುದು
–ಶ್ರೀಹರ್ಷ ಶೆಟ್ಟಿ ಆಯುಕ್ತ, ಮಹಾನಗರ ಪಾಲಿಕೆ, ವಿಜಯಪುರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.