ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳ, ಪಟ್ಟಣ ಶೆಟ್ಟಿ ಸಂಘರ್ಷ ತಾರಕಕ್ಕೆ

ತಾಜ್‌ ಬಾವಡಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ವಿವಾದ
Last Updated 24 ಆಗಸ್ಟ್ 2022, 13:16 IST
ಅಕ್ಷರ ಗಾತ್ರ

ವಿಜಯಪುರ: ತಾಜ್‍ಬಾವಡಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಮೂರ್ತಿಗಳ ವಿಸರ್ಜನೆ ನೆಪದಲ್ಲಿಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ ಅವರ ನಡುವಿನ ರಾಜಕೀಯ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ.

ತಾಜ್‌ಬಾವಡಿಯಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಬೇಕು ಎಂದು ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗರು ಬಿಗಿ ಪಟ್ಟು ಹಿಡಿದಿದ್ದು, ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದಾರೆ.

ಪಟ್ಟಣಶೆಟ್ಟಿ ನಡೆ ವಿರುದ್ಧ ಶಾಸಕ ಯತ್ನಾಳ ಕಿಡಿ ಕಾರಿದ್ದಾರೆ. ಯಾವುದೇ ಕಾರಣಕ್ಕೂ ತಾಜ್‌ ಬಾವಡಿಯಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ ನೀಡುವುದಿಲ್ಲ. ಮಾಡಿದವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ರವಾನಿಸಿದ್ದಾರೆ.

ಅಲ್ಲದೇ, ಮಾಜಿ ಶಾಸಕರ ವಿರುದ್ಧ ಹಂದಿ, ನಾಯಿ ಪದ ಪ್ರಯೋಗ ಮಾಡಲಾಗಿದ್ದು, ವಿವಾದ ಮತ್ತಷ್ಟು ಅತಿಕೇಕಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ.

ಅಪ್ಪು ಬೆಂಬಲಿಗರ ಮನವಿ

ತಾಜ್‌ಬಾವಡಿಯಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶಕಲ್ಪಿಸಬೇಕು ಎಂದು ಆಗ್ರಹಿಸಿ ಧರ್ಮ ರಕ್ಷಣಾ ವೇದಿಕೆ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಅಪ್ಪು ಬೆಂಬಲಿಗ ಸನ್ನಿ ಗವಿಮಠ ಮಾತನಾಡಿ, ಗಣೇಶ ಮೂರ್ತಿ ವಿಸರ್ಜಿಸುವ ಮೂಲಕ ತಾಜ್‌ ಬಾವಡಿ ಹಾಳು ಮಾಡುವುದು ನಮ್ಮ ಉದ್ದೇಶವಲ್ಲ. ಈ ಬಗ್ಗೆ ಶಾಸಕ ಯತ್ನಾಳ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮೂರ್ತಿ ವಿಸರ್ಜನೆಗೆ ತಾಜ್ ಬಾವಡಿಯ ಆವರಣದಲ್ಲಿ ಪಾಲಿಕೆಯು ಕೃತಕ ಹೊಂಡ ನಿರ್ಮಾಣ ಮಾಡುತ್ತಾ ಬಂದಿದೆ. ಇದಕ್ಕಾಗಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇದೇ ಹಣವನ್ನು ತಾಜ್ ಬಾವಡಿ ಸ್ವಚ್ಛಗೊಳಿಸಲು ಉಪಯೋಗಿಸಿಬೇಕು. ಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಮುಖಂಡ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ನಗರದಲ್ಲಿ ಪ್ರತಿಷ್ಠಾಪಿಸಲಾಗುವ 350ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ಹಲವಾರು ವರ್ಷಗಳಿಂದ ತಾಜ್‍ಬಾವಡಿಯಲ್ಲಿ ವಿಸರ್ಜನೆ ಮಾಡುತ್ತಾ ಬರಲಾಗಿದೆ. ಸಂಪ್ರದಾಯದಂತೆ ತಾಜ್‌ ಬಾವಡಿಯಲ್ಲೇ ಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ ಮಾತನಾಡಿ, ತಾಜ್ ಬಾವಡಿ ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ತಾತ್ಕಾಲಿಕ ಹೊಂಡದಲ್ಲಿ ಗಣೇಶ ವಿಗ್ರಹ ವಿಸರ್ಜನೆ ಮಾಡಿದ ಬಳಿಕ ಹಿಂದೂಗಳ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಅದನ್ನು ಹೊರ ತೆಗೆದು ಒಡೆದು, ತುಳಿದು ಹಾಕಿ ಹಲವಾರು ರೀತಿಯಲ್ಲಿ ಮೂರ್ತಿಯನ್ನು ವಿಲೇವಾರಿ ಮಾಡುವುದು ಕಂಡುಬಂದಿದ್ದು, ಆದ ಕಾರಣ ಸಾರ್ವಜನಿಕ ಗಣೇಶ ವಿಗ್ರಹವನ್ನು ತಾಜ್‌ ಬಾವಡಿಯಲ್ಲಿ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಮಿರ್ಜಿ, ಕಾಂತು ಶಿಂಧೆ, ವಿನಾಯಕ ದಹಿಂಡೆ, ಪ್ರಭಾಕರ ಭೋಸ್ಲೆ, ರಾಜೇಶ ತಾವಸೆ, ಸತೀಶ ಪಾಟೀಲ, ಸಚಿನ್ ಅಡಕಿ, ಅನೀಲ್ ಉಪ್ಪಾರ, ಆನಂದ ಮುಚ್ಚಂಡಿ, ವಿಜಯ ಹಿರೇಮಠ, ಸನ್ನಿ ಗವಿಮಠ, ಸಾಗರ ಶೇರಖಾನೆ, ನಿಖಿಲ್ ಮ್ಯಾಗೇರಿ ಇದ್ದರು.

****

ಮೂರ್ತಿ ವಿಸರ್ಜಿಸಿದರೆ ಕ್ರಮ: ಯತ್ನಾಳ

ವಿಜಯಪುರ:ತಾಜ್ ಬಾವಡಿಯಲ್ಲಿ ಯಾವುದೇ ಕಾರಣಕ್ಕೂ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಲು ಬಿಡಲ್ಲ. ಒಂದು ವೇಳೆ ಯಾರಾದರೂ ತಾಜ್ ಬಾವಡಿಯಲ್ಲಿ ಮೂರ್ತಿಗಳನ್ನು ವಿಸರ್ಜಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಜ್‌ ಬಾವಡಿಯಲ್ಲಿಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಿದವರ ಮೇಲೆ ಗೂಂಡಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ನನ್ನ ಅವಧಿಯಲ್ಲಿ ನಗರದಲ್ಲಿ ಗುಂಡಾಗಿರಿ ನಡೆಯಲು ಬಿಡುವುದಿಲ್ಲ.ಇಂತಹ ಉದ್ದಟತನ ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT