ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿ ಮಾಧ್ಯಮಗಳಿಗೆ ಸ್ವತಂತ್ರ ಮುಖ್ಯ

ಪತ್ರಿಕಾ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ್‌ ಅಭಿಮತ
Last Updated 23 ಜುಲೈ 2022, 12:43 IST
ಅಕ್ಷರ ಗಾತ್ರ

ವಿಜಯಪುರ:ಸುದ್ದಿ ಮಾಧ್ಯಮಗಳು ಯಾವಾಗಲೂ ಸ್ವತಂತ್ರವಾಗಿರಬೇಕು. ಸ್ವತಂತ್ರವಾಗಿರಬೇಕು ಎಂದಾದರೆ ಸುದ್ದಿ ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಿರಬೇಕು. ಇಲ್ಲವಾದರೆ ಪತ್ರಕರ್ತರು ಅಡ್ಡದಾರಿ ಹಿಡಿಯುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.‌

ವಿಜಯಪುರ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ವಿಶ್ವದ 180 ದೇಶಗಳ ಸಾಲಿನಲ್ಲಿ ಭಾರತವು 140ನೇ ಸ್ಥಾನದಲ್ಲಿರುವುದು ಬೇಸರದ ಸಂಗತಿ ಎಂದರು.

ಪತ್ರಿಕೆಗಳು, ಸುದ್ದಿ ಮಾಧ್ಯಮಗಳು ಯಾವುದೇ ಪಕ್ಷ, ಧರ್ಮ, ಜಾತಿ, ವ್ಯಕ್ತಿಯ ಪರವಾಗಿರುವ ಬದಲು ತಟಸ್ಥವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳು ಪಾರದರ್ಶಕ, ವಸ್ತು ನಿಷ್ಠವಾಗಿರಬೇಕು. ಟಿಆರ್‌ಪಿ ಅಥವಾ ಪ್ರಸರಣ ಸಂಖ್ಯೆ ಹೆಚ್ಚಳಕ್ಕಾಗಿ ವೈಭವಿಕರಿಸಿ ಬರೆಯುವುದು ಸರಿಯಲ್ಲ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಪತ್ರಕರ್ತರ ಕರ್ತವ್ಯ ದೊಡ್ಡದಿದೆ. ಏನು ಬರೆದರೆ ಜಗತ್ತು ಸುಂದರವಾಗಿರುತ್ತದೆ. ಕುರೂಪ ಕಡಿಮೆಯಾಗುತ್ತದೆ ಎಂಬುದರ ಬಗ್ಗೆ ಆದ್ಯತೆ ನೀಡಬೇಕು ಎಂದರು.

ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುವ, ಪ್ರಸಾರವಾಗುವ ಸುದ್ದಿಗಳು ಜನರ, ದೇಶದ, ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಿರಬೇಕು ಎಂದರು.

ವಿಶೇಷ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತಸುಭಾಷ ಹೂಗಾರ,ಸುದ್ದಿ ಮಾಧ್ಯಮಗಳು ಇಂದು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಉಳಿದಿಲ್ಲ. ಅಲ್ಲದೇ, ವಿರೋಧ ಪಕ್ಷದಂತೆಯೂ ಕಾರ್ಯನಿರ್ವಹಿಸುತ್ತಿಲ್ಲ. ಬದಲಿಗೆ ಆಡಳಿತ ಪಕ್ಷದ ಭಾಗವಾಗತೊಡಗಿವೆ ಎಂದು ಬೇಷರ ವ್ಯಕ್ತಪಡಿಸಿದರು.

ತಂತ್ರಜ್ಞಾನದ ಪರಿಣಾಮ ಮಾಧ್ಯಮ ಕ್ಷೇತ್ರದಲ್ಲಿ ಅಗಾದ ಪರಿವರ್ತನೆ, ವಿಸ್ತರಣೆ, ಬದಲಾವಣೆಗಳಾಗುತ್ತಿವೆ. ಆದರೆ, ಯಾವುದೇ ಕಾರಣಕ್ಕೂ ಪತ್ರಿಕೋದ್ಯಮದ ಮೂಲ ಆಶಯ, ಉದ್ದೇಶಗಳು ಎಂದಿಗೂ ಬದಲಾಗಬಾರದು ಎಂದರು.

ಸಮಾಜದ ತಾಯಿಯಂತೆ ಪತ್ರಿಕೆ, ಸುದ್ದಿ ಮಾಧ್ಯಮಗಳು ಇರಬೇಕು. ನೊಂದವರ, ಅಶಕ್ತರ, ಅನ್ಯಾಯಕ್ಕೆ ಒಳಗಾದವರ, ತುಳಿತಕ್ಕೊಳಗಾದವರ ಪರವಾಗಿ ಸುದ್ದಿ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಸುದ್ದಿ ಮಾಧ್ಯಮಗಳ ಬಗ್ಗೆ ಇಂದು ರಾಜಕಾರಣಿಗಳಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕಿಂಚಿತ್ತೂ ಅಂಜಿಕೆ, ಹೆದರಿಕೆ ಇಲ್ಲವಾಗಿದೆ. ಸುದ್ದಿ ಮಾಧ್ಯಮಗಳು ಪಿಆರ್‌ ಏಜೆನ್ಸಿಯಂತೆ ಕಾರ್ಯನಿರ್ವಹಿಸುತ್ತಿರುವುದು ವಿಷಾದದ ಸಂಗತಿ ಎಂದರು.

ಜಿಲ್ಲೆಯ ಸಾಧಕ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪತ್ರಕರ್ತರ ಮಕ್ಕಳನ್ನು ಗೌರವಿಸಲಾಯಿತು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ಅರಸಿದ್ದಿ, ಮಹಾನಗರ ಪಾಲಿಕೆ ಆಯುಕ್ತ ವಿಜಯ್‌ ಮೆಕ್ಕಳಕಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಗವಿಸಿದ್ಧ ಹೊಸಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ, ಉಪಾಧ್ಯಕ್ಷ ಇಂದುಶೇಖರ ಮಣೂರ, ಪ್ರಕಾಶ ಬೆಣ್ಣೂರ, ಫಿರೋಜ್‌ ರೋಜಿನದಾರ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಖಜಾಂಚಿ ರಾಹುಲ್‌ ಆಪ್ಟೆ ಇದ್ದರು.

***

ಪತ್ರಿಕೆಗಳಿಗೆ ಎರಡು ಮುಖಗಳಿರುತ್ತವೆ. ಒಂದು ಸಮಾಜ ತಿದ್ದುವ, ಇನ್ನೊಂದು ಮನಸ್ಸನ್ನು ಅರಳಿಸುವ ಮುಖ. ಯಾವುದೇ ಕಾರಣಕ್ಕೂ ಎರಡನೇ ಮುಖವನ್ನು ಕಡೆಗಣಿಸಬಾರದು

–ಸಿದ್ದೇಶ್ವರ ಸ್ವಾಮೀಜಿ, ಜ್ಞಾನಯೋಗಾಶ್ರಮ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT