ಇಂಡಿ: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಕೆಲವೇ ನಿಮಿಷಗಳಲ್ಲಿ 36.5 ಮಿ.ಮೀ ಮಳೆ ಸುರಿದಿದ್ದು, ಶನಿವಾರ ಸಂಜೆ ಮತ್ತೆ 12.8 ಮಿ.ಮೀ ಮಳೆಯಾಗಿದ್ದು, ಭಾನುವಾರ ಜಿಟಿ ಜಿಟಿ ಮಳೆಯಾಗುತ್ತಿದ್ದು, ರೈತರಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ.
ಮುಂಗಾರು ಪ್ರಾರಂಭದ ರೋಹಿಣಿ ಮತ್ತು ಮೃಗಶಿರಾ ಎರಡು ಮಳೆಗಳು ಆಗದೇ ರೈತರಲ್ಲಿ ನಿರಾಶೆ ಮೂಡಿಸಿದ್ದವು. ಬಹುತೇಕ ರೈತರು ತಮ್ಮ ಹೊಲಗದ್ದೆಗಳನ್ನು ಸ್ವಚ್ಛ ಗೊಳಿಸಿ ಬಿತ್ತನೆ ಬೀಜಗಳನ್ನು ಖರೀದಿಸಿ ಮಳೆಗಾಗಿ ಕಾಯುತ್ತಿದ್ದರು. ಮಿರಗಾ ಮಳೆಗೆ ಬಿತ್ತನೆ ಮಾಡಬೇಕಿದ್ದ ಹೆಸರು ಬೆಳೆ ಮಳೆಯಾಗದ ಹಿನ್ನೆಲೆ ಈ ಬಾರಿ ಬಹುತೇಕ ರೈತರು ಬಿತ್ತನೆ ಮಾಡದಂತಾಯಿತು.
ಇಂಡಿ 12.7 ಮಿ.ಮೀ, ನಾದ ಕೆಡಿ 2 ಮಿ.ಮೀ, ಅಗರಖೇಡ 21.1 ಮಿ.ಮೀ, ಝಳಕಿ 19.4 ಮಿ.ಮೀ ಮಳೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
‘ತಾಲ್ಲೂಕಿನ ಕೆಲವು ಕಡೆ ಉತ್ತಮ ರೀತಿಯಲ್ಲಿ ಮಳೆಯಾಗುತ್ತಿದ್ದು, ತೊಗರಿ ಮತ್ತು ಹತ್ತಿ, ಮೆಕ್ಕೆಜೋಳ ಬಿತ್ತನೆ ಮಾಡಬಹುದು. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ’ ಎಂದು ಇಂಡಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.