ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳೇಭಾವಿಗೆ ಮೂಲಸೌಲಭ್ಯ ಮರೀಚಿಕೆ

Last Updated 24 ಜನವರಿ 2023, 16:10 IST
ಅಕ್ಷರ ಗಾತ್ರ

ತಾಳಿಕೋಟೆ: ತಾಲ್ಲೂಕಿನ ಕೊನೆಯ ಗ್ರಾಮ ಬಿಳೇಭಾವಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದೆ.

ಗ್ರಾಮದ ಪ್ರವೇಶದಲ್ಲಿಯೇ ಸರಿಯಾದ ದಾರಿಯಿಲ್ಲದೇ ದಾರಿಹೋಕರಿಗೆ ಕಿರಿಕಿರಿಯಾಗಿದೆ.
ಇಚೇಗೆ ತಾಳಿಕೋಟೆ-ಹುಣಸಗಿ ಮುಖ್ಯ ರಸ್ತೆಯಿಂದ ಗ್ರಾಮದಂಚಿನವರೆಗೆ ಡಾಂಬರೀಕರಣವಾಗಿದೆ. ರಸ್ತೆ ಎತ್ತರವಾಗಿದ್ದು, ಎಡ ಬಲಗಳಲ್ಲಿ ಸರಿಯಾಗಿ ಇಳಿಜಾರು ಮಾಡದಿರುವುದರಿಂದ ಎದುರು ಬರುವ ವಾಹನಗಳಿಗೆ ದಾರಿ ಬಿಡುವ ಬೈಕುಗಳು ಅಪಘಾತಕ್ಕೆಡೆ ಕೊಡುವಂತಾಗಿದೆ.

ಗ್ರಾಮಾಭಿವೃದ್ಧಿಗೆಂದು ಕೊಟ್ಟ ಅರ್ಜಿಗಳೇ ಅಭಿವೃದ್ಧಿಯಾಗಿವೆ ವಿನಾಃ ಗ್ರಾಮವಲ್ಲ ಎಂಬ ವ್ಯಂಗ್ಯೋಕ್ತಿ ಗ್ರಾಮಸ್ಥರದು. ಈಚೆಗೆ ಗ್ರಾಮವಾಸ್ತವ್ಯ ನಡೆದಿದೆ. 15 ದಿನಗಳಲ್ಲಿ ಸಾಧ್ಯವಿರುವ ಪರಿಹಾರ ಒದಗಿಸಬೇಕು. ಆದರೆ, ಯಾವುದಕ್ಕೂ ಉತ್ತರವೇ ಸಿಕ್ಕಿಲ್ಲ ಎಂದು ವಿಶ್ವನಾಥ ಬಿದರಕುಂದಿ, ರಾಮಣ್ಣ ಕೆಸರಟ್ಟಿ, ಬೇಸರ ವ್ಯಕ್ತಪಡಿಸಿದರು.

ಗ್ರಾಮದಲ್ಲಿರುವ ಅಂಚೆ ಕಚೇರಿಗೆ ಸ್ವಂತ ಸ್ಥಳವಿಲ್ಲ. ಊರೊಳಗಿರುವುದರಿಂದ ವಯಸ್ಸಾದವರು ಒಳಹೋಗಲು ಕಷ್ಟವಾಗಿದೆ.

2021-22ರಲ್ಲಿ ₹40 ಲಕ್ಷದಲ್ಲಿ ಗ್ರಾಮಾಭಿವೃದ್ಧಿಗೆ ಖರ್ಚಾಗಿದೆ. ನರೇಗಾದಲ್ಲಿ ಶಾಲಾ ಆವರಣ ನಿರ್ಮಾಣವಾಗಿದೆ. ಎಸ್.ಸಿ.ಓಣಿಯೊಂದು ಸಿಸಿ ರಸ್ತೆಯಾಗಿ ಥಳಥಳವೆಂದರೂ ಅಲ್ಲೂ ಅಂಚಲ್ಲಿ ಕೊಚ್ಚೆ ನೀರು ನಿಲ್ಲುತ್ತಿದೆ. ಆದರೆ, ಊರಲ್ಲಿ ಸಿಸಿ ರಸ್ತೆ ಭಾಗ್ಯ ದೊರೆತಿಲ್ಲ ಎಂಬುದು ಗ್ರಾಮಸ್ಥರ ಕೊರಗು.

ಶಾಲೆಯ ಒಳಗೆ ಪ್ರವೇಶ ನೀಡಿದರೆ ಹಸಿರು ತೋರಣ ಗಮನ ಸೆಳೆಯುತ್ತದೆ. ಆದರೆ, ಹೊರ ಆವರಣ ಗ್ರಾಮಸ್ಥರ ನಿರ್ಲಕ್ಷ್ಯದಿಂದ ಗಲೀಜು ಹೆಚ್ಚಿದೆ. ಶಾಲಾ ಆವರಣ ಶಾಲೆ ಮುಂದೆ ಗಲೀಜು ಮಾಡುತ್ತಾರೆ. ಶಾಲಾ ಮಕ್ಕಳು, ನಮ್ಮೂರ ಮಕ್ಕಳೇ ಅದನ್ನು ತುಳಿದುಕೊಂಡು ಹೋಗುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಇದು ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಶಾಲಾ ಶಿಕ್ಷಕರ ನೋವು.

ಶಾಲಾ ಆವರಣ ಗೋಡೆ ಪೂರ್ಣವಾಗಿಲ್ಲ. ಪೂರ್ಣಗೊಳಿಸಬೇಕು ಎಂಬುದು ಜನತೆಯ, ಶಿಕ್ಷಕರ ಬೇಡಿಕೆಯಿದೆ.

₹ 30 ಲಕ್ಷ ವೆಚ್ಚದಲ್ಲಿ ಜಲಜೀವನ ಮಷಿನ್‌ ಯೋಜನೆ ಜಾರಿಯಾಗಿದೆ. ಆದರೂ ಎಲ್ಲ ಮನೆಗೂ ಸಮರ್ಪಕ ನೀರು ದೊರೆಯುತ್ತಿಲ್ಲ ಎಂ ದೂರಿದೆ.

ರಸ್ತೆ, ಚರಂಡಿ, ಮಹಿಳಾ ಶೌಚಾಲಯ, ಸಾಮೂಹಿಕ ದೋಬಿಘಾಟ್ ನಮ್ಮೂರಿಗೆ ಬೇಕು ಎನ್ನುತ್ತಾರೆ ಬಾಗಣ್ಣ ಬರದೇನಾಳ, ಶಾಂತಪ್ಪ ಇಣಚಗಲ್ಲ.

ನಮ್ಮ ಹೊಲ ನಮ್ಮದಾರಿ ಯೋಜನೆಯಲ್ಲಿ 500ಮೀಟರ್‌ ದುರಸ್ತಿಗೆ ಶಾಸಕರ ಅನುದಾನವೂ ನೀಡಬೇಕು, 35 ಕಿಲೊ ವ್ಯಾಟ್ ವಿದ್ಯುತ್ ಗ್ರಾಮಕ್ಕೆ ಬೇಕು, ಸೋಲಾರ್‌ ಪ್ಲೇಟ್ ಹಾಕಿದರೆ 50 ಕಿಲೊ ವ್ಯಾಟ್ ನಮ್ಮೂರಲ್ಲೇ ಉತ್ಪಾದಿಸಬಹುದು. ಈ ಬಗ್ಗೆ ಯೋಜನೆ ರೂಪಿಸಬೇಕು ಎನ್ನುವುದು ವಿಶ್ವನಾಥ ಬಿದರಕುಂದಿ ಮನವಿ.

ಶಾಸಕರು, ಪಿಡಿಒ ಸ್ವಲ್ಪ ಗಮನಹರಿಸಿದರೂ ನಮ್ಮೂರು ಚೆಂದವಾಗುತ್ತದೆ ಎನ್ನುವ ಗ್ರಾಮಸ್ಥರ ನೆರವಿಗೆ ಅಧಿಕಾರಿಗಳು ಕೈ ಜೋಡಿಸಬೇಕು.

ಕಣ್ವ ಮಠದ ಪರಂಪರೆ

ತಾಳಿಕೋಟೆ: ಗ್ರಾಮದ ಹೊರ ಆವರಣದಲ್ಲಿ ಕಣ್ವ ಮಠದ ಪರಂಪರೆಯ ದ್ವಿತೀಯ ಪೀಠಾಧೀಶ ಅಕ್ಷೋಭ್ಯತೀರ್ಥರ ಹಾಗೂ ನಾಲ್ಕನೆಯ ಪೀಠಾಧೀಶ ವಿದ್ಯಾನಿಧಿ ತೀರ್ಥರ ವೃಂದಾವನಗಳಿವೆ. ಅಲ್ಲಿ ಇಂದಿಗೂ ಉಭಯಶ್ರೀಗಳ ಆರಾಧನೆ ನಡೆಯುತ್ತದೆ.

ಮೂರು ವರ್ಷಕ್ಕೊಮ್ಮೆ ಭಾಗಮ್ಮದೇವಿಯ ಜಾತ್ರೆ ಅತ್ಯಂತ ಭವ್ಯವಾಗಿ ನೆರವೇರುತ್ತದೆ. ಗ್ರಾಮವು ವೀರಸಂಗಪ್ಪ ಹಗರಟಗಿ ಎಂಬ ಷಟ್ಪದಿಕವಿಯ ಜನ್ಮಸ್ಥಳವೂ ಆಗಿದೆ.

***

ಗ್ರಾಮದ ಅಭಿವೃದ್ಧಿಗೆ ಹೆಚ್ಚು ಅನುದಾನ ಒದಗಿಸಲಾಗಿದೆ. ಗ್ರಾಮದ ಬೇಡಿಕೆಗಳನ್ನು ಹಂತಹಂತವಾಗಿ ಪೂರೈಸಲಾಗುವುದು.

- ನಿಂಗನಗೌಡ ದೊಡಮನಿ, ಪಿಡಿಒ ಗ್ರಾ.ಪಂ. ಬ.ಸಾಲವಾಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT