ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ. ರಾಜಪ್ಪ ಅವರು ವಿಜಯಪುರ ನಗರದ ಬಸ್ ನಿಲ್ದಾಣಕ್ಕೆ ಬುಧವಾರ ಭೇಟಿ ನೀಡಿ, ಪ್ರಯಾಣಿಕರಿಗೆ ಒದಗಿಸಬೇಕಾಗಿರುವ ಮೂಲಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಲು ಹಾಗೂ ಇನ್ನೊಂದು ಶೌಚಾಲಯವನ್ನು ನಿರ್ಮಿಸಲು ಸೂಚಿಸಿದರು.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಎಲ್ಲೆಂದರಲ್ಲಿ ಎಲೆ ಅಡಿಕೆ, ಗುಟ್ಕಾ, ತಂಬಾಕು ಸೇವನೆ ಮಾಡಿ ಉಗುಳಿದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು. ಈ ಕುರಿತು ಪ್ರಯಾಣಿಕರಿಗೆ ಜಾಗೃತಿ ಮೂಡಿಸಲು ವಿಶೇಷ ಆಂದೋಲನವನ್ನು ನಡೆಸಲು ವಿಭಾಗೀಯ ನಿಯಂತ್ರಣ ಅಧಿಕಾರಿ ನಾರಾಯಣಪ್ಪ ಕುರುಬರ ಇವರಿಗೆ ಸೂಚನೆ ನೀಡಿದರು.
ಬಸ್ ನಿಲ್ದಾಣದಲ್ಲಿ ಇನ್ನು ಹೆಚ್ಚಿನ ಬೆಳಕಿನ ವ್ಯವಸ್ಥೆಗೆ ಎರಡು ಹೈ ಮಾಸ್ಕ್ ಲೈಟ್‌ಗಳನ್ನು ಅಳವಡಿಸಲು ಸೂಚಿಸಿದರು.
ವಿಜಯಪುರ ಕೇಂದ್ರ ಬಸ್ ನಿಲ್ದಾಣವು ನೋಡಲು ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿದ್ದು, ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ತಿಳಿಸಿದರು.
ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರಯಾಣಿಕರಿಗೆ ಹೋಗಿ ಬರಲು ಅವಕಾಶ ಆಗುವಂತೆ ರಸ್ತೆ ನಿರ್ಮಾಣ ಮಾಡಲು ಹಾಗೂ ಮುಂದಿನ ಭಾಗವನ್ನು ದುರಸ್ತಿ ಮಾಡಿ ವಾಹನಗಳ ಓಡಾಟಕ್ಕೆ ಸುಗಮವಾಗಲು ಕ್ರಮ ತೆಗೆದುಕೊಳ್ಳಲು ಸೂಚಿಸಿದರು.
ಪ್ರಯಾಣಿಕರ ಸುರಕ್ಷತೆ, ಪ್ರಯಾಣಿಕರಿಗೆ ನೀರು, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ಈ ಕಾರ್ಯಕ್ಕೆ ಎಷ್ಟೇ ಹಣ ಖರ್ಚಾದರೂ ನೀಡುವುದಾಗಿ ಭರವಸೆ ನೀಡಿದರು.
ವ್ಯವಸ್ಥಾಪಕ ನಿರ್ದೇಶಕರ ಮುಖ್ಯ ಕಾಮಗಾರಿ ಎಂಜಿನಿಯರ್ ಬೋರಯ್ಯ, ವಿಭಾಗೀಯ ನಿಯಂತ್ರಣ ಅಧಿಕಾರಿ ನಾರಾಯಣಪ್ಪ ಕುರುಬರ, ಸಾರಿಗೆ ಅಧಿಕಾರಿಗಳಾದ ಡಿ.ಎ. ಬಿರಾದಾರ, ಹುಗ್ಗೆಣ್ಣನವರ ಹಾಗೂ ಬಸ್ ನಿಲ್ದಾಣದ ಅಧಿಕಾರಿಗಳು ಇದ್ದರು.