ವಿಜಯಪುರ: ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಬಂಜಾರ, ಭೋವಿ, ಕೊರಮ, ಕೊರಚ, ಕೊರವ ಸಮಾಜಗಳನ್ನು ಮೀಸಲಾತಿ ಪಟ್ಟಿಯಿಂದ ಹೊರಗಿಡುವ ಹುನ್ನಾರ ನಡೆಸಿದೆ. ಇದು ಕೇವಲ ಬಿಜೆಪಿಯ ಚುನಾವಣಾ ಗಿಮಿಕ್ ಅಷ್ಟೇ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಆರೋಪಿಸಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಂವಿಧಾನ ವಿರೋಧಿ ಒಳ ಮೀಸಲಾತಿಯ ಶಿಫಾರಸ್ಸು ಮಾಡಿದ್ದು, ಪರಿಶಿಷ್ಟ ಜಾತಿಯಲ್ಲಿರುವ 99 ಸಮುದಾಯಗಳ ಬೆನ್ನಿಗೆ ಚೂರಿ ಹಾಕಿ ನಮ್ಮಲ್ಲಿಯೇ ಒಡಕು ತರುವಂತಹ ಕೆಲಸ ಮಾಡಿದೆ ಎಂದು ದೂರಿದರು.
ಸಂವಿಧಾನದಲ್ಲಿ ಅವಕಾಶ ಇಲ್ಲದಿದ್ದರೂ ರಾಜ್ಯ ಸರ್ಕಾರ ಹಿಂಬಾಗಿಲಿನಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿದೆ ಎಂದರು.
ಬಿಜೆಪಿ, ಆರ್‌ಎಸ್‌ಎಸ್ ದೇಶದ ದಲಿತರನ್ನು ಒಡೆದು ಆಳುವ ದಮನಕಾರಿ ನೀತಿ ಅನುಸರಿಸುತ್ತಿದೆ. ಈ ಹುನ್ನಾರದ ಭಾಗವಾಗಿ ರಾಜ್ಯದಲ್ಲಿ ಅಸಂವಿಧಾನಿಕ ಒಳ ವರ್ಗೀಕರಣ ಶಿಫಾರಸು ಮಾಡಿದೆ ಎಂದು ದೂರಿದರು.
ಪರಿಶಿಷ್ಟ ಜಾತಿಯಲ್ಲಿರುವ ಸಮಾನ ಅವಕಾಶ ವಂಚಿತ ಶೋಷಿತ ತಳ ಸಮುದಾಯಗಳನ್ನು ಮರು ವರ್ಗೀಕರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಆದರೂ ಸಹ ರಾಜ್ಯ ಸರ್ಕಾರ ಮೀಸಲಾತಿಯ ಮೂಲ ಪರಿಕಲ್ಪನೆಯಾದ ಸಾಮಾಜಿಕ ಶೈಕ್ಷಣಿಕ, ಹಿಂದುಳಿದಿರುವಿಕೆಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಯಾವ ಪ್ರಮಾಣದಲ್ಲಿ ಯಾವ ಯಾವ ಜಾತಿಗಳು ಹಿಂದುಳಿದಿವೆ ಎಂಬುದನ್ನು ವೈಜ್ಞಾನಿಕವಾಗಿ ಮಾನದಂಡಗಳ ಮೂಲಕ ಅಧ್ಯಾಯನ ಮಾಡಿ, ವಸ್ತು ನಿಷ್ಠ ವರದಿ ಆಧಾರದ ಮೇಲೆ ಹಿಂದುಳಿದಿರುವಿಕೆಯನ್ನು ಪರಿಗಣಿಸಿದೇ ಕೇವಲ ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಪಟ್ಟಿಯನ್ನು ತಿದ್ದಿ, ತೇಪೆಹಚ್ಚಿ, ಮರು ವರ್ಗೀಕರಿಸಿ ಮೇಲ್ನೋಟಕ್ಕೆ ಐದು ಗುಂಪುಗಳನ್ನಾಗಿ ಮಾಡುತ್ತಿರುವುದು ಕಾರ್ಯಸಾಧುವಲ್ಲ, ಇದು ಅವೈಜ್ಞಾನಿಕ, ಅಸಂವಿಧಾನಿಕ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ವಸ್ತುನಿಷ್ಠವಾಗಿ ಅಧ್ಯಯನ ಮಾಡಿಲ್ಲ, ರಾಜ್ಯ ಸರ್ಕಾರ ಮಾಡಿರುವ ಮೀಸಲಾತಿ ಪ್ರಮಾಣದ ಹಂಚಿಕೆ ಅವೈಜ್ಞಾನಿಕವಾಗಿದೆ. ಸಹೋದರ ಸಮುದಾಯಗಳನ್ನು ಅಸ್ಪೃಶ್ಯರು, ಸ್ಪೃಶ್ಯರು ಎಂಬ ಶಬ್ಧಗಳಿಂದ ಕರೆಯುವ ಮೂಲಕ ಸರ್ಕಾರವೇ ಅಧಿಕೃತವಾಗಿ ಅಸ್ಪೃಶ್ಯತೆ ಆಚರಣೆಗೆ ಕರೆ ನೀಡಿದಂತಾಗಿದೆ ಈ ರೀತಿಯಲ್ಲಿ ಸಮುದಾಯಗಳನ್ನು ವಿಂಗಡಿಸುವುದು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದರು.
ಪರಿಶಿಷ್ಟರಲ್ಲಿ ಒಳ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ಇ.ವಿ.ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶ ಸರ್ಕಾರದ ಪ್ರಕರಣದಲ್ಲಿ ತೀರ್ಪು ನೀಡಿದೆ. ಒಂದು ಸಮುದಾಯವನ್ನು ಓಲೈಕೆ ಮಾಡಲು ಹೊರಟ ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ನಾಡಿನ ಬಂಜಾರ, ಭೋವಿ, ಕೊರಚ, ಕೊರಮ, ಛಲವಾದಿ ಮತ್ತಿತರರ ಸೂಕ್ಷ್ಮ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದರು.
ಸರ್ಕಾರದ ಅಧಿಕೃತ ತೀರ್ಮಾನದ ಪ್ರತಿ ಸಿಕ್ಕ ಕೂಡಲೇ ಸಭೆ ಕರೆದು ಮುಂದಿನ ಹೋರಾಟಗಳ ಬಗ್ಗೆ ನಿರ್ಧರಿಸಿ, ಕಾನೂನು ಹೋರಾಟವನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಮುಖಂಡರಾದ ಬಿ.ಪಿ.ಲಮಾಣಿ, ಅಮಿತ್ ಚವ್ಹಾಣ, ಶಂಕರ ಚವ್ಹಾಣ, ಅರ್ಜುನ್ ರಾಠೋಡ, ರಾಜು ಚವ್ಹಾಣ, ರೋಹಿದಾಸ ಚವ್ಹಾಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
***
ಒಳ ಮೀಸಲಾತಿ ವಿರೋಧಿಸಿ ಬಿಜೆಪಿಯಲ್ಲಿರುವ ಲಂಬಾಣಿ, ಭೋವಿ ಸಮಾಜದ ಸಚಿವರು ಹಾಗೂ ಶಾಸಕರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಬೇಕು
–ಪ್ರಕಾಶ ರಾಠೋಡ, ಮುಖ್ಯ ಸಚೇತಕ, ವಿಧಾನ ಪರಿಷತ್ ವಿರೋಧ ಪಕ್ಷ
***
ನಾಗಠಾಣ ಕ್ಷೇತ್ರ: ಬಂಜಾರರಿಗೆ ಟಿಕೆಟ್
ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ಬಂಜಾರ ಸಮುದಾಯದ ಮುಖಂಡರಿಗೆ ನೀಡಬೇಕು ಎಂದು ಪ್ರಕಾಶ ರಾಠೋಡ ಒತ್ತಾಯಿಸಿದರು.
ಲಂಬಾಣಿ ಸಮಾಜದ ನಾಲ್ಕು ಜನ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಯಾರಿಗಾದರೂ ಒಬ್ಬರಿಗೆ ನೀಡುವ ಮೂಲಕ ನ್ಯಾಯ ಕಲ್ಪಿಸಬೇಕು ಎಂದು ಪಕ್ಷಕ್ಕೆ ಮನವಿ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.