ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ವಹಣೆ ಜಿಲ್ಲಾ ಪಂಚಾಯ್ತಿಗೆ ವಹಿಸಿ: ವಿಜಯಪುರ ಜಿ.ಪಂ ಹೊಸ ಅಧ್ಯಕ್ಷೆ

ವಿಜಯಪುರ ಜಿಲ್ಲಾ ಪಂಚಾಯ್ತಿ ನೂತನ ಸಾರಥಿ ಸುಜಾತಾ ಕಳ್ಳಿಮನಿ ಹಕ್ಕೊತ್ತಾಯ
Last Updated 7 ಜುಲೈ 2020, 11:56 IST
ಅಕ್ಷರ ಗಾತ್ರ

ವಿಜಯ‍ಪುರ: ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿರುವ ಹಾಗೂ ಸಾವು,ನೋವಿಗೆ ಕಾರಣವಾಗುತ್ತಿರುವ ಕೋವಿಡ್‌–19 ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಆಯಾ ಜಿಲ್ಲಾ ಪಂಚಾಯ್ತಿಗೆ ನೀಡುವುದು ಅಗತ್ಯ.

ವಿಜಯಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಆಯ್ಕೆಯಾದ, ಕಾಂಗ್ರೆಸ್‌ನಸುಜಾತಾ ಸೋಮನಾಥ ಕಳ್ಳಿಮನಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹಕ್ಕೊತ್ತಾಯ ಮಾಡಿದರು.

ಈ ಸಂಬಂಧ ಒಂದು ವಾರದೊಳಗೆ ಜಿಲ್ಲಾ ಪಂಚಾಯ್ತಿ ಸರ್ವಪಕ್ಷ ಸದಸ್ಯರ ನಿಯೋಗವನ್ನು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಬಳಿಗೆ ಕರೆದುಕೊಂಡು ಹೋಗಲಾಗುವುದು. ಕೋವಿಡ್‌ ನಿರ್ವಹಣೆ ಜವಾಬ್ದಾರಿ ಮತ್ತು ಅಗತ್ಯ ಅನುದಾನವನ್ನು ಆಯಾ ಜಿಲ್ಲಾ ಪಂಚಾಯ್ತಿಗೆ ನೀಡುವಂತೆ ಬೇಡಿಕೆ ಸಲ್ಲಿಸಲಾಗುವುದು. ಇದರಿಂದ ಕೋವಿಡ್‌ ನಿರ್ವಹಣೆ ಸುಲಭವಾಗಲಿದೆ ಎಂದರು.

ವಿಜಯಪುರದಲ್ಲಿ ಅತ್ಯಾಧುನಿಕ ಕೋವಿಡ್‌ ಪ್ರಯೋಗಾಲಯವನ್ನು ಆದಷ್ಟು ಶೀಘ್ರ ಆರಂಭಿಸುವಂತೆ ಕೋರಲಾಗುವುದು. ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಗೌರವಧನ ನೀಡುವಂತೆ ಹಾಗೂ ಸದ್ಯ ಇರುವ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಬೆಡ್‌ಗಳನ್ನು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಜೊತೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಗೆ ಅಗತ್ಯ ಅನುದಾನ ನೀಡುವಂತೆ ಹಾಗು ಹೊಸ ಯೋಜನೆಗಳಿಗೂ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಸುಜಾತಾ ಕಳ್ಳಿಮನಿ ಅವರ ಸಂದರ್ಶನದ ಪೂರ್ಣಪಾಠ ಇಂತಿದೆ.

ಜಿ.ಪಂ.ಅಧ್ಯಕ್ಷೆಯಾಗಿ ನಿಮ್ಮ ಪ್ರಥಮ ಆದ್ಯತೆ ಏನು?

ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವಜಿಲ್ಲೆಯ ಜನತೆಯ ನೆರವಿಗೆ ಪ್ರಥಮ ಆದ್ಯತೆ ನೀಡಲಾಗುವುದು. ವಿವಿಧ ನಗರ, ಪಟ್ಟಣಗಳಿಗೆ ದುಡಿಯಲು ಹೋಗಿ, ಇದೀಗ ಮರಳಿ ಜಿಲ್ಲೆಗೆ ಬಂದಿರುವವರ ಕೈಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಒದಗಿಸಲಾಗುವುದು.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಸೇರಿದಂತೆ ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆಯಲ್ಲ?

ಈಗಾಗಲೇ ಡಿಎಚ್‌ಒ ಅವರೊಂದಿಗೆ ಚರ್ಚಿಸಿದ್ದೇನೆ. ಕೋವಿಡ್‌ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಮಾನವೀಯ ನೆಲೆಯಲ್ಲಿ ಗುಣಮಟ್ಟದ ಚಿಕಿತ್ಸೆ ಲಭಿಸುವಂತೆ ನೋಡಿಕೊಳ್ಳಬೇಕು. ಯಾರೂ ತೊಂದರೆಗೆ ಒಳಗಾಗಬಾರದು ಎಂದು ಸೂಚಿಸಿದ್ದೇನೆ.

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಏನು ಕ್ರಮಕೈಗೊಳ್ಳುವಿರಿ?

ಎಂ.ಬಿ.ಪಾಟೀಲ ಸಚಿವರಾಗಿದ್ದಾಗ ಕೆರೆ ತುಂಬುವ ಯೋಜನೆ ಮೂಲಕ ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಿದ್ದಾರೆ. ಇದರ ಹೊರತಾಗಿ ಯಾವುದಾದರೂ ಹಳ್ಳಿಗಳಿಗೆ ನೀರಿನ ಸಮಸ್ಯೆ ಉಂಟಾದರೆ ಆದ್ಯತೆ ಮೇರೆಗೆ ಬಗೆಹರಿಸಲಾಗುವುದು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಇರುವ ಬಯಲು ಶೌಚಾಲಯ ಪದ್ಧತಿ ನಿವಾರಣೆಗೆ ಏನು ಕ್ರಮಕೈಗೊಳ್ಳುವಿರಿ?

ನೀರಿನ ಕೊರತೆಯಿಂದ ಸಮಸ್ಯೆ ಜೀವಂತವಾಗಿದೆ. ಸರ್ಕಾರದ ಸಹಾಯಧನದಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅವಕಾಶವಿದ್ದು, ಇದನ್ನು ಪ್ರತಿ ಮನೆಯಲ್ಲೂ ನಿರ್ಮಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.

ಜಿಲ್ಲಾ ಪಂಚಾಯ್ತಿ ವಿವಿಧ ಇಲಾಖೆಗಳಲ್ಲಿ ಜನಸಾಮಾನ್ಯರ ಕೆಲಸ ವಿಳಂಬವಾಗುತ್ತಿದ್ದು, ಇದರ ನಿವಾರಣೆಗೆ ಏನು ಕ್ರಮಕೈಗೊಳ್ಳುವಿರಿ?

ಜನಸಾಮಾನ್ಯರ ಕೆಲಸ ವಿಳಂಬಕ್ಕೆ ಅವಕಾಶವಿಲ್ಲದಂತೆ ಶೀಘ್ರ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಯಾರಿಗಾದರೂ ತೊಂದರೆಯಾದರೆ ನೇರವಾಗಿ ನನಗೆ ದೂರು ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು.

ಜಿ.ಪಂ.ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸದಸ್ಯರು ಬಿಜೆಪಿ ಬೆಂಬಲಿಸಲು ಕಾರಣವೇನು?

ಇದು ನಮಗೂ ತಿಳಿಯದ ಯಕ್ಷಪ್ರಶ್ನೆಯಾಗಿದೆ. ಕೆಲ ಸದಸ್ಯರು ಸ್ವಾರ್ಥಕ್ಕಾಗಿ ಬಿಜೆಪಿಯ ಆಮಿಷಕ್ಕೆ ಬಲಿಯಾದರು. ತಾಯಿ ಸ್ವರೂಪದ ಪಕ್ಷಕ್ಕೆ ಹಾಗೂ ರಾಜಕೀಯವಾಗಿ ಬೆಳೆಸಿದ್ದ ನಾಯಕರಿಗೆ ನಿರ್ಣಯಕ ಹಂತದಲ್ಲಿ ಹೀಗೆ ಮಾಡಬಾರದಿತ್ತು. ರಾತ್ರೋರಾತ್ರಿ ರಾಜೀನಾಮೆ ನಾಟಕ ಆಡಿದರು. ಅಧಿಕಾರಕ್ಕಾಗಿ ಬಿಜೆಪಿ ಅಡ್ಡದಾರಿ ಹಿಡಿಯಿತು. ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಸದಸ್ಯರು ಭಾಗವಹಿಸದಂತೆ ತಡೆಯಲು ಬಸ್ಸಿನ ಮೇಲೆ ಕಲ್ಲು ತೂರಿ, ಗಲಾಟೆ ಎಬ್ಬಿಸಿದರು.

ಹಾಗಾದರೆ, ಜಿಲ್ಲಾ ಪಂಚಾಯ್ತಿ ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್‌ ಕೂಡ ಆಮಿಷ ಒಡ್ಡಿತ್ತೆ?

ಬಿಜೆಪಿಯ ಯಾವೊಬ್ಬ ಸದಸ್ಯರಿಗೂ ನಾವು ಯಾವುದೇ ಆಸೆ, ಆಮಿಷ ಒಡ್ಡಲ್ಲಿಲ್ಲ. ಆದರೆ, ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ, ಗೌರವ ಸಿಗದಿರುವುದರಕ್ಕೆ ನೊಂದು, ಬೇಸತ್ತು ಕಾಂಗ್ರೆಸ್‌ ತತ್ವ, ಸಿದ್ಧಾಂತ ಹಾಗೂ ಜಿಲ್ಲಾ ಮುಖಂಡರ ಸಮರ್ಥ ನಾಯಕತ್ವ ಮೆಚ್ಚಿ ಬೆಂಬಲಿಸಿದ್ದಾರೆ.

ಕಾಂಗ್ರೆಸ್‌, ಬಿಜೆಪಿ ನಡುವಿನ ಜಿದ್ದಾಜಿದ್ದಿನ ನಡುವೆ ನಿಮ್ಮ ಗೆಲುವು ಸುಲಭವಾದದ್ದು ಹೇಗೆ?

ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಅಲಗೂರ ಮತ್ತು ಮಾಜಿ ಶಾಸಕ ನಾಡಗೌಡ ಅವರ ಒಗ್ಗಟ್ಟಿನ ಫಲವಾಗಿ ಪಕ್ಷಕ್ಕೆ ಗೆಲುವಾಗಿದೆ.

ಉತ್ತಮ ಆಡಳಿತಕ್ಕೆ ಪ್ರಥಮ ಆದ್ಯತೆ

ಕೋವಿಡ್‌ ಹಾವಳಿ ನಿವಾರಣೆಯಾದ ಬಳಿಕ ಗ್ರಾಮ ವಾಸ್ತವ್ಯ ಮತ್ತು ಬಾಲಕಿಯರ ವಸತಿ ನಿಲಯಗಳಲ್ಲಿ ವಾಸ್ತವ್ಯ ಮಾಡುವ ಯೋಜನೆ ಇದೆ. ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಸೃಷ್ಠಿಗೆ ಆದ್ಯತೆ ನೀಡಲಾಗುವುದು. ಇರುವ ಕಡಿಮೆ ಅವಧಿಯಲ್ಲಿ ಪಕ್ಷಕ್ಕೆ ಉತ್ತಮ ಹೆಸರು ಬರುವಂತ ಆಡಳಿತ ಮಾಡುವ ಮೂಲಕ ಮುಂಬರುವ ಗ್ರಾಮ ಪಂಚಾಯ್ತಿ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಆದ್ಯತೆ ನೀಡಲಾಗುವುದು ಎನ್ನುತ್ತಾರೆ ಸುಜಾತಾ

ಸನ್ಮಾನ ಬದಲು ನಿಧಿ ಸಂಗ್ರಹ

ತಮ್ಮನ್ನು ಸನ್ಮಾನಿಸಲು ಕಚೇರಿಗೆ ಬರುವ ಪಕ್ಷದ ಕಾರ್ಯಕರ್ತರು, ಬೆಂಬಲಿಗರಿಗೆ ಹಾರ, ಶಾಲು, ಸನ್ಮಾನ ಬೇಡ, ಅದೇ ಹಣವನ್ನು ಕೋವಿಡ್‌ ಪರಿಹಾರ ನಿಧಿಗೆ ನೀಡಿ ಎಂದು ಸುಜಾತಾ ಮನವಿ ಮಾಡುತ್ತಿದ್ದಾರೆ. ಅಲ್ಲದೇ, ತಾವೇ ಒಂದು ಹುಂಡಿಯನ್ನು ಮಾಡಿ, ಕೋವಿಡ್‌ ನಿಧಿ ಸಂಗ್ರಹಿಸುತ್ತಿದ್ದಾರೆ.

‘ಸಂಗ್ರಹವಾದ ಹಣವನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಲ್ಲಿಸಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT