ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝಳಕಿ: ಸಮಗ್ರ ನೀರಾವರಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ

ಜಿಲ್ಲಾಧಿಕಾರಿ ಸ್ಥಳಕ್ಕೆ ಬರಲು ರೈತರ ಬಿಗಿಪಟ್ಟು; ಪೊಲೀಸರೊಂದಿಗೆ ವಾಗ್ವಾದ
Last Updated 20 ಸೆಪ್ಟೆಂಬರ್ 2021, 13:05 IST
ಅಕ್ಷರ ಗಾತ್ರ

ಇಂಡಿ(ವಿಜಯಪುರ): ಇಂಡಿ ತಾಲ್ಲೂಕು ಸಮಗ್ರ ನೀರಾವರಿಗೆ ಆಗ್ರಹಿಸಿವಿವಿಧ ಗ್ರಾಮಗಳ ರೈತರು ಸೋಮವಾರ ಝಳಕಿ ಗ್ರಾಮದ ಬಳಿ ಮೂರು ತಾಸು ವಿಜಯಪುರ–ಸೋಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ, ಪ್ರತಿಭಟನೆ ನಡೆಸಿದರು.

ಎತ್ತಿನಬಂಡಿಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ರಸ್ತೆಯ ಮೇಲೆ ನಿಲ್ಲಿಸಿ ಹೆದ್ದಾರಿ ಬಂದ್‌ ನಡೆಸಿದರು. ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಹೆದ್ಆರಿಯ ಎರಡೂ ಕಡೆ ಸುಮಾರು ಎರಡು ಕಿ.ಮೀಗೂ ಹೆಚ್ಚು ವಾಹನಗಳು ನಿಂತಿದ್ದರಿಂದ ಪ್ರವಾಸಿಗರು ಪರದಾಡುವಂತಾಯಿತು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಡಿ.ಪಾಟೀಲ ಮಾತನಾಡಿ, ಇಂಡಿ ತಾಲ್ಲೂಕನ್ನು ಸಮಗ್ರ ನೀರಾವರಿಗೆ ಒಳಪಡಿಸಬೇಕೆಂದು 20 ದಿನಗಳಿಂದ ಇಂಡಿ ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತಿದ್ದರೂ ಕೂಡಾ ಸರ್ಕಾರದ ಯಾವುದೇ ಪ್ರತಿನಿಧಿಗಳು ಭೇಟಿ ನೀಡಿ ಆಹವಾಲು ಆಲಿಸಲಿಲ್ಲ. ನೀರಾವರಿ ಸಚಿವರೂ ಕೂಡಾ ಬಂದಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಭರವಸೆ ಕೂಡಾ ನೀಡಿಲ್ಲ ಎಂದು ಆರೋಪಿಸಿದರು.

ತಾಲ್ಲೂಕನ್ನು ನೀರಾವರಿಗೆ ಒಳಪಡಿಸುವವರೆಗೂ ನಮ್ಮ ಹೋರಾಟ ನಿಲ್ಲದು. ನೀರಾವರಿಗಾಗಿ ಪೊಲೀಸರ ಗುಂಡಿಗೂ ಕೂಡಾ ಹೆದರುವುದಿಲ್ಲ. ತಾಲ್ಲೂಕಿನ ರೈತರು ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದರೂ ಕೂಡಾ ಸರ್ಕಾರ ಹೊರಳಿ ಕೂಡಾ ನೋಡುತ್ತಿಲ್ಲ. ಕೆರೆ ತುಂಬುವ ಯೋಜನೆಗಳು ಪೂರ್ಣಗೊಂಡಿಲ್ಲ. ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತಿವೆ. ಸರ್ಕಾರ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿ, ಇಲ್ಲದಿದ್ದರೆ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ.ಪಾಟೀಲ ಹಲಸಂಗಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಲಸಂಪನ್ಮೂಲ ಸಚಿವರಾಗಲಿ ಭೇಟಿ ನೀಡುತ್ತಿಲ್ಲ. ರೈತರು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದರೂ ಸೌಜನ್ಯಕ್ಕಾದರೂ ಭೇಟಿ ನೀಡಬೇಕಾಗಿತ್ತು. ಉಸ್ತುವಾರಿ ಸಚಿವರು ನೀರಾವರಿ ಇಲಾಖೆಯಲ್ಲಿ ಸಿಂದಗಿಯ ರಾಂಪೂರದಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ವಸ್ತು ಸ್ಥಿತಿ ಗೊತ್ತಿದ್ದು ಭೇಟಿ ನೀಡದೇ ಇರುವುದು ಸಚಿವರಿಗೆ ಶೋಭೆತರುವುದಿಲ್ಲ ಎಂದರು.

ಮಾಜಿ ಶಾಸಕ ರವಿಕಾಂತ ಪಾಟೀಲ ಮಾತನಾಡಿ, ಬಿಜೆಪಿಯವರು ನೀರಿನ ಯೋಜನೆಗಳ ಪರವಾಗಿ ಅಲ್ಲ, ಕಾರ್ಪೊರೇಟ್‌ ಕಂಪನಿಗಳ ಪರವಾಗಿ ಇದ್ದಾರೆ. ಆಲಮಟ್ಟಿ ಆಣೆಕಟ್ಟೆ ಎತ್ತರ 524 ಮೀ. ಆಗಬೇಕು. ಇಂಡಿ ತಾಲ್ಲೂಕಿನ ಎಲ್ಲ ಕಾಲುವೆಗಳಲ್ಲಿ ನೀರು ಹರಿಯಬೇಕು. ಅಲ್ಲಿಯ ವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದರು.

ವಿಜಯಕುಮಾರ ಭೋಸಲೆ ಮಾತನಾಡಿ, ಗುತ್ತಿ ಬಸವಣ್ಣ ಕಾಲುವೆ 97 ಕಿ.ಮಿ.ಯಿಂದ 147 ಕಿ.ಮಿ ಕಾರ್ಯ ಮುಗಿದಿದ್ದು, ಇಂಡಿ ತಾಲ್ಲೂಕಿನಲ್ಲಿ ನೀರೆ ಬರುವುದಿಲ್ಲ. ಈ ದಿಶೆಯಲ್ಲಿ ನೀರು ಹರಿಸುವ ಅಗತ್ಯತೆ ಇದೆ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರಾಮು ರಾಠೋಡ, ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಮರೆಪ್ಪ ಗಿರಣಿವಡ್ಡರ, ಬಸವರಾಜ ಹಂಜಗಿ, ನಾಗೇಶ ತಳಕೇರಿ, ಮಹಿಬೂಬ ಬೇವನೂರ, ಮಾಣಿಕ ಜನಾಬ, ವಿಠ್ಠಲ ಅಂಕಲಗಿ, ಶಿವಪುತ್ರ ದುದ್ದಗಿ, ಮನೋಹರ ಬಿರಾದಾರ, ತಾನಾಜಿ ಪವಾರ, ಶಿವಕುಮಾರ ಭೋಸಲೆ, ಅಂಬಣ್ಣ ವಾಗೆ, ರಾಜಕುಮಾರ ಬನಗೊಂಡೆ, ಬಸವರಾಜ ದುದ್ದಗಿ, ವಿಕಾಸ ನಿಕಂ, ಶ್ರೀಮಂತ ಕಾಪಸೆಹೋರಾಟದಲ್ಲಿ ಪಾಲ್ಗೊಂಡಿದ್ದರು.

***

100ಕ್ಕೂ ಅಧಿಕ ಎತ್ತಿನ ಗಾಡಿ, ಟ್ರ್ಯಾಕ್ಟರ್‌ ಭಾಗಿ

ಸಾವಿರಾರು ರೈತರಿಂದ ಪ್ರತಿಭಟನೆ

ಸುಮಾರು ಮೂರು ತಾಸು ಹೆದ್ದಾರಿ ತಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT