ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ‘ಕಂದಗಲ್ಲ’ ರಂಗಮಂದಿರ ನವೀಕರಣ ವಿಳಂಬ

₹ 75 ಲಕ್ಷ ಮೊತ್ತದಲ್ಲಿ ರಂಗಮಂದಿರಕ್ಕೆ ಹೊಸ ರೂಪ
Last Updated 22 ಜುಲೈ 2021, 19:30 IST
ಅಕ್ಷರ ಗಾತ್ರ

ವಿಜಯಪುರ: ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಇರುವ ಏಕೈಕ ರಂಗಮಂದಿರವಾಗಿರುವ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದ ನವೀಕರಣ ಕಾರ್ಯ ಕುಂಟುಂತಾ ಸಾಗಿದೆ. ಒಂದೂವರೆ ವರ್ಷವಾದರೂ ನವೀಕರಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲದಿರುವುದು ಅಸಮಾದಾನಕ್ಕೆ ಕಾರಣವಾಗಿದೆ.

‘ಕನ್ನಡದ ಶೇಕ್ಸ್‌ಪಿಯರ್‌’ ಎಂದೇ ಖ್ಯಾತರಾದ ಜಿಲ್ಲೆಯ ಪ್ರಸಿದ್ಧ ನಾಟಕಕಾರ ಕಂದಗಲ್‌ ಹನುಮಂತರಾಯ ಅವರ ಸ್ಮರಣಾರ್ಥ 1993ರಲ್ಲಿ ನಿರ್ಮಾಣವಾಗಿರುವ ಈ ರಂಗಮಂದಿರ ಸಾಹಿತ್ಯಿಕ, ಸಾಂಸ್ಕೃತಿಕ, ರಂಗಚಟುವಟಿಕೆಗಳ ಆಯೋಜನೆ, ಸಂಘಟನೆಗೆ ಹಾಗೂ ಪ್ರದರ್ಶನಕ್ಕೆ ಮುಖ್ಯ ವೇದಿಕೆಯಾಗಿದೆ. ಆದರೆ, ಮೂಲಸೌಲಭ್ಯಗಳ ಕೊರತೆಯಿಂದ ಬಳಲುತ್ತಿತ್ತು.

ಇದೀಗ ₹ 75 ಲಕ್ಷ ಮೊತ್ತದಲ್ಲಿ ರಂಗಮಂದಿರದ ನವೀಕರಣ ಕಾರ್ಯಕೈಗೊಳ್ಳಲಾಗಿದೆ.ರಂಗಮಂದಿರದಲ್ಲಿಮುಖ್ಯವಾಗಿ ವಿದ್ಯುತ್‌ ವೈರಿಂಗ್‌, ಧ್ವನಿವರ್ಧಕ ಅಳವಡಿಕೆ, ಮುಖ್ಯ ವೇದಿಕೆಗೆ ಹೊಸ ಪರದೆ, ಚಾವಣಿ ಅಳವಡಿಕೆ ಹಾಗೂ ಇಡೀ ಕಟ್ಟಡಕ್ಕೆ ಬಣ್ಣ ಬಳಿಯುವ ಕಾರ್ಯಗಳನ್ನು ಕೈಗೊಳ್ಳಲಾಗಿದೆ.ಆದರೆ, ಕಾಮಗಾರಿ ಕುಂಟುತಾ ಸಾಗಿದೆ.

ಜೊತೆಗೆ ರಂಗಮಂದಿರದಲ್ಲಿ ಪ್ರೇಕ್ಷಕರಿಗೆ ಕೂಲು ಇರುವ ಕುರ್ಚಿಗಳು ಹಳೇಯದಾಗಿವೆ. ಕೆಲವು ಮುರಿದು ಹೋಗಿವೆ. ಫ್ಯಾನ್‌ ಬದಲು ಹವಾನಿಯಂತ್ರಣ ವ್ಯವಸ್ಥೆ ಮಾಡಬೇಕು ಎಂಬುದು ಬೇಡಿಕೆ ಇತ್ತು. ನವೀಕರಣ ಕಾರ್ಯದಲ್ಲಿ ಇದಕ್ಕೆ ಗಮನ ಹರಿಸಿಲ್ಲ. ಹೀಗಾಗಿ ನವೀಕರಣ ಕಾರ್ಯ ಎಂಬುದು ಹೆಸರಿಗಷ್ಟೇ ಎಂಬಂತಾಗಿದೆ.

ಸೋರುತ್ತಿರುವ ಚಾವಣಿ:

ರಂಗಮಂದಿರದಲ್ಲೇ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರ ಕಚೇರಿ ಚಾವಣಿ ಶಿಥಿಲವಾಗಿದ್ದು, ಮಳೆ ನೀರು ಸೋರುತ್ತಿದೆ. ಪರಿಣಾಮ ಕಾಗದ ಪತ್ರಗಳು, ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಸಿಬ್ಬಂದಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವುದು ಕಷ್ಟವಾಗಿದೆ.

ಕಚೇರಿಯ ಚಾವಣಿ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಇಲಾಖೆಯ ಸಹಾಯಕ ನಿರ್ದೇಶಕಈರಪ್ಪ ಆಶಾಪೂರ ‘ಪ್ರಜಾವಾಣಿ’ಗೆ ತಿಳಿಸಿದರು.

***

ಪಾಳು ಬಿದ್ದ ಬಯಲು ರಂಗಮಂದಿರ!

ವಿಜಯಪುರ: ಕಂದಗಲ್ ಹನುಮಂತರಾಯ ರಂಗಮಂದಿರದ ಹಿಂಭಾಗದಲ್ಲಿ₹ 71 ಲಕ್ಷ ಮೊತ್ತದಲ್ಲಿ ನಿರ್ಮಿಸಿರುವ ‘ಹಂದಿಗನೂರು ಸಿದ್ದರಾಮಪ್ಪ’ ಬಯಲು ರಂಗಮಂದಿರ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಬಯಲು ರಂಗಮಂದಿರದ ವೇದಿಕೆ, ಕಲಾವಿದರ ಡ್ರೆಸ್ಸಿಂಗ್‌ ಕೊಠಡಿ, ಶೌಚಾಲಯ ಪಾಳುಬಿದ್ದಿವೆ.ಸುಮಾರು 300 ಪ್ರೇಕ್ಷಕರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಕಾಂಕ್ರೀಟ್‌ ನೆಲಹಾಸು ನಿರ್ಮಿಸುವ ಕಾರ್ಯ ನಡೆದಿಲ್ಲ. ಅವೈಜ್ಞಾನಿಕವಾಗಿ ಕಾಮಗಾರಿ ನಡೆದಿದೆ ಎಂದು ಜಿಲ್ಲೆಯ ರಂಗ ಕಲಾವಿದರು ಬೇಸರ ವ್ಯಕ್ತಪಡಿಸಿದ್ದಾರೆ.

***

ರಂಗಮಂದಿರ ನವೀಕರಣ ಕಾಮಗಾರಿ ಮಾಡುತ್ತಿದ್ದ ಮುಖ್ಯ ಗುತ್ತಿಗೆದಾರರು ಕೋವಿಡ್‌ನಿಂದ ಸಾವಿಗೀಡಾದ ಪರಿಣಾಮ ವಿಳಂಬವಾಗಿದೆ. ಎರಡು ತಿಂಗಳೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ

–ಈರಪ್ಪ ಆಶಾಪೂರ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

***

ಜಿಲ್ಲಾ ಕೇಂದ್ರದಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜನೆಗೆ ಇರುವ ಏಕೈಕ ಕಂದಗಲ್‌ ರಂಗಮಂದಿರ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಸಾರ್ವಜನಿಕರ ಬಳಕೆಗೆ ಒದಗಿಸಬೇಕು

–ಹಾಸಿಂಪೀರ ವಾಲಿಕಾರ

ಅಧ್ಯಕ್ಷ, ಮಾನವ ಹಕ್ಕುಗಳ ಕಲ್ಯಾಣ ಮಂಡಳಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT