ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಕಾಂಗ್ರೆಸ್ ಟಿಕೆಟ್‌ಗೆ ಸಂಯುಕ್ತಾ ಅರ್ಜಿ

ಹಮೀದ್‌ ಮುಶ್ರೀಫ್‌, ಮಕ್ಬುಲ್‌ ಬಾಗವಾನ ಸೇರಿದಂತೆ ಅರ್ಧ ಡಜನ್‌ಗೂ ಅಧಿಕ ಆಕಾಂಕ್ಷಿಗಳು
Last Updated 15 ನವೆಂಬರ್ 2022, 19:30 IST
ಅಕ್ಷರ ಗಾತ್ರ

ವಿಜಯಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಅರ್ಧ ಡಜನ್‌ಗೂ ಅಧಿಕ ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.

ಕ್ಷೇತ್ರದಲ್ಲಿ ನಿರಂತರ ಪಕ್ಷ ಸಂಘಟನೆ, ಹೋರಾಟದಲ್ಲಿ ನಿರತವಾಗಿರುವಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಅಬ್ದುಲ್‌ ಹಮೀದ್‌ ಮುಶ್ರೀಪ್‌ ಪ್ರಬಲ ಆಕಾಂಕ್ಷಿಯಾಗಿದ್ದು ಟಿಕೆಟ್‌ ಸಲ್ಲಿಸಿದ್ದಾರೆ. ಇವರ ಜೊತೆಗೆ ಡಿಸಿಸಿ ಬ್ಯಾಂಕ್‌ ನಿರ್ದೇಶಕಿ ಸಂಯುಕ್ತಾ ಪಾಟೀಲ,ಮಾಜಿ ಶಾಸಕ ಡಾ.ಮಕ್ಬುಲ್‌ ಬಾಗವಾನ ಅರ್ಜಿ ಸಲ್ಲಿಸಿರುವ ಪ್ರಮುಖರಾಗಿದ್ದಾರೆ.‌

ವಿಜಯಪುರ ನಗರ ಕ್ಷೇತ್ರದಲ್ಲಿಮೊದಲಿನಿಂದಲೂ ಮುಸ್ಲಿಮರನ್ನು ಕಣಕ್ಕಿಳಿಸುತ್ತಾ ಬಂದಿರುವ ಕಾಂಗ್ರೆಸ್‌ ಈ ಬಾರಿ ಬದಲಾವಣೆಗೆ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ವಿಜಯಪುರದಲ್ಲಿ ಬಲಾಡ್ಯರಾಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸೋಲಿಸಬೇಕೆಂದರೆ ಹಿಂದು–ಮುಸ್ಲಿಂ ಮತಗಳನ್ನು ಸೆಳೆಯಬಲ್ಲ ಜಾತ್ಯತೀತ ಹಾಗೂಮುಸ್ಲಿಮೇತರ ಹುರಿಯಾಳನ್ನು ಕಣಕ್ಕಿಳಿಸಲು ಇದುವರೆಗಿನ ತನ್ನ ಸಂಪ್ರದಾಯವನ್ನು ದಾಟಲು ಯೋಚನೆ ನಡೆಸಿದೆ ಎಂದುಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಶಾಸಕ ಶಿವಾನಂದ ಪಾಟೀಲ ಅವರು ಈ ಬಾರಿ ಬಸವನ ಬಾಗೇವಾಡಿ ಕ್ಷೇತ್ರ ಬದಲಾವಣೆ ಮಾಡಿ ವಿಜಯಪುರ ನಗರ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆ ನಾಲ್ಕೈದು ತಿಂಗಳಿಂದ ಜೋರಾಗಿತ್ತು. ಅಲ್ಲದೇ, ಸ್ವತಃ ಶಿವಾನಂದ ಪಾಟೀಲ ಅವರೇ ವಿಜಯಪುರ ನಗರ ಅಥವಾ ಬಬಲೇಶ್ವರ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವು ನೀಡಿದ್ದರು. ಈ ವಿಷಯವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಶಿವಾನಂದ ಪಾಟೀಲ ಅವರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಪರಸ್ಪರ ಸವಾಲು, ಜವಾಬು ನಡೆದಿತ್ತು. ಆದರೆ, ಇದೀಗ ಶಿವಾನಂದ ಪಾಟೀಲ ಅವರು ಬಸವನ ಬಾಗೇವಾಡಿಯಲ್ಲೇ ಸ್ಪರ್ಧಿಸಲು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಆದರೆ,ಅವರ ಪುತ್ರಿ, ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಯುಕ್ತಾ ಪಾಟೀಲ ಅವರು ವಿಜಯಪುರ ನಗರ ಕ್ಷೇತ್ರದ ಟಿಕೆಟ್‌ಗೆ ಅರ್ಜಿ ಸಲ್ಲಿಸಿರುವುದು ಇದೀಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ವಿಜಯಪುರ ಕ್ಷೇತ್ರದಲ್ಲಿ ರಾಜಕೀಯವಾಗಿ ಹೆಚ್ಚು ಪ್ರಭಾವ ಮತ್ತು ಹಿಡಿತ ಇರುವ ಶಾಸಕ ಶಿವಾನಂದ ಪಾಟೀಲ ಅವರು ತಮ್ಮ ಪುತ್ರಿಯನ್ನು ಕಣಕ್ಕಿಳಿಸುವ ಮೂಲಕ ತಮ್ಮ ವಿರೋಧಿಗಳಿಗೆ ಪ್ರತ್ಯುತ್ತರ ನೀಡಲು ವ್ಯೂಹ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಂಯುಕ್ತಾ ಪಾಟೀಲ, ವಿಜಯಪುರ ನಗರ ಕ್ಷೇತ್ರದ ಟಿಕೆಟ್‌ಗೆ ಅರ್ಜಿ ಸಲ್ಲಿಸಿರುವುದು ನಿಜ. ಕ್ಷೇತ್ರ ನನಗೆ ಹೊಸದಲ್ಲ, ವಿಜಯಪುರ ನಗರದೊಂದಿಗೆ ನಮ್ಮ ಕುಟುಂಬ ಮೊದಲಿನಿಂದಲೂ ಹೆಚ್ಚು ಸಂ‍ಪರ್ಕದಲ್ಲಿ ಇದೆ ಎಂದು ತಿಳಿಸಿದರು.

‘ವಿಜಯಪುರ ನಗರ ಕ್ಷೇತ್ರಕ್ಕೆ ಜಾತ್ಯತೀತ ಹಾಗೂ ಅಭಿವೃದ್ಧಿ ಆಧರಿಸಿ ಕೆಲಸ ಮಾಡುವ ಜನಪ್ರತಿನಿಧಿ ಅಗತ್ಯವಿದೆ. ವಿಜಯಪುರದ ಜನ ಈ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಮಾಡಲಿದ್ದಾರೆ’ ಎಂದು ಹೇಳಿದರು.

‘ಕೆಪಿಸಿಸಿಗೆ ಅರ್ಜಿ ಸಲ್ಲಿಸಿ ಆಗಿದೆ. ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸುವೆ. ಇಲ್ಲವಾದರೆ, ಯಾರಿಗೆ ಟಿಕೆಟ್‌ ನೀಡಿದರೂ ಅವರ ಪರವಾಗಿ ಪಕ್ಷದ ನೆಲೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವೆ. ಒಮ್ಮತದ ಅಭ್ಯರ್ಥಿಯನ್ನು ಈ ಬಾರಿ ಪಕ್ಷ ಕಣಕ್ಕಿಳಿಸಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT