ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ನಡೆಯದ ಕೆಡಿಪಿ ಸಭೆ; ಜಿಲ್ಲೆ ಅಭಿವೃದ್ಧಿ ನಿರ್ಲಕ್ಷ್ಯ

ಐದು ವರ್ಷದಲ್ಲಿ ಕೇವಲ ಏಳು ಸಭೆ; ಅಧಿಕಾರಿಗಳ ಕಾರುಬಾರು
Last Updated 23 ಜನವರಿ 2023, 19:30 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪ್ರತಿ ಮೂರು ತಿಂಗಳಿಗೆ ಒಮ್ಮೆ ನಡೆಯುವ ಕರ್ನಾಟಕ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯು ಆಯಾ ಜಿಲ್ಲೆಗಳ ಅಭಿವೃದ್ಧಿ ದೃಷ್ಟಿಯಿಂದ, ಜನಪರ ಆಡಳಿತ ನಡೆಸಲು ಹಾಗೂ ಅಧಿಕಾರಿಗಳ ಕಾರ್ಯವೈಕರಿಗೆ ಸಾಣೆ ಹಚ್ಚಲು ಮಹತ್ವ ಪೂರ್ಣವಾಗಿದೆ. ಆದರೆ, ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಕೆಡಿಪಿ ಸಭೆಗಳು ಸಮರ್ಪಕವಾಗಿ ನಡೆಯದೇ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಹೌದು, 2018ರಿಂದ 2023ರ ವರೆಗೆ ಅಂದರೆ, ಐದು ವರ್ಷಗಳ ಅವಧಿಯಲ್ಲಿ ಒಟ್ಟು 20 ಪ್ರಗತಿ ಪರಿಶೀಲನಾ ಸಭೆಗಳು ನಡೆಯಬೇಕಿತ್ತು. ಆದರೆ, ಕೇವಲ ಏಳು ಸಭೆಗಳಷ್ಟೇ ನಡೆದಿವೆ. ಅದರಲ್ಲೂ ಒಂದೆರಡು ಸಭೆ ಹೊರತು ಪಡಿಸಿದರೆ ಉಳಿದ ಕೆಡಿಪಿ ಸಭೆಗಳು ಕಾಟಾಚಾರಕ್ಕೆ ಎಂಬಂತೆ ನಡೆದಿವೆ.

ಪರಿಣಾಮ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳದ್ದೇ ಕಾರುಬಾರು ನಡೆದಿದೆ. ಜಿಲ್ಲೆಗೆ ವಿವಿಧ ಇಲಾಖೆಗಳಿಗೆ ಎಷ್ಟು ಅನುದಾನ ಬಂದಿದೆ? ಸಮರ್ಪಕವಾಗಿ ಬಳಕೆಯಾಗಿದೆಯೇ? ಎಷ್ಟು ಅನುದಾನಕ್ಕೆ ಬೇಡಿಕೆ ಇತ್ತು? ಸರ್ಕಾರರಿಂದ ಎಷ್ಟು ಅನುದಾನ ಬಿಡುಗಡೆಯಾಗಿದೆ? ಫಲಾನುಭವಿಗಳಿಗೆ ತಲುಪಿದೆಯೇ ಅಥವಾ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳ ಹಿಂಬಾಲಕರ ಪಾಲಾಯಿತೇ? ಬಳಕೆಯಾಗದೇ ಸರ್ಕಾರಕ್ಕೆ ಮರಳಿ ಹೋಯಿತೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗದಾಗಿದೆ.

ಜೊತೆಗೆ ಎರಡು ವರ್ಷಗಳಿಂದ ಜಿಲ್ಲಾ ಪಂಚಾಯ್ತಿಗೆ ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗಳೂ ನಡೆಯದೇ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಶಾಸಕರು ಕೆಡಿಪಿ ಸಭೆ ನಡೆಸುವ ಮೂಲಕ ಒಂದಷ್ಟು ಅಭಿವೃದ್ಧಿ ಕಾರ್ಯಗಳ ಮೇಲೆ ನಿಗಾ ವಹಿಸಿದ್ದಾರೆ. ಆದರೆ, ಜಿಲ್ಲಾಮಟ್ಟದಲ್ಲಿ ಕೆಡಿಪಿ ಸಭೆಗಳು ನಡೆಯದೇ ಇರುವುದು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹಿನ್ನಡೆಯಾಗಿದೆ.

ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜೆಡಿಎಸ್‌ನ ದಿ.ಎಂ.ಸಿ.ಮನಗೂಳಿ ಅವರ ಅಧ್ಯಕ್ಷತೆಯಲ್ಲಿ ಮೂರು ಬಾರಿ ತ್ರೈಮಾಸಿಕ ಕೆಡಿಪಿ ಸಭೆ ನಡೆದಿದೆ. ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಸಚಿವರಾಗುವ ಭಾಗ್ಯ ಲಭಿಸದ ಕಾರಣ ಅನ್ಯ ಜಿಲ್ಲೆಯವರ ಹೆಗಲಿಗೆ ಉಸ್ತುವಾರಿ ಹೊಣೆ ವಹಿಸಲಾಯಿತು. ಈ ಸಚಿವರು ಜಿಲ್ಲೆಯ ಒಳರಾಜಕೀಯದಿಂದ ಬೇಸತ್ತು ಜಿಲ್ಲೆಯ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡದೇ ನಿರ್ಲಕ್ಷ್ಯ ಮಾಡಿ, ಕಾಟಾಚಾರಕ್ಕೆ ಎಂಬಂತೆ ಒಂದೆರಡು ಸಭೆ ನಡೆಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಬಂದ ಸಿ.ಸಿ.ಪಾಟೀಲ, ಶಶಿಕಲಾ ಜೊಲ್ಲೆ ಅವರು ತಲಾ ಒಂದೊಂದು ಕೆಡಿಪಿ ಸಭೆ ನಡೆಸಿದ್ದಾರೆ. ಸಚಿವ ದಿ. ಉಮೇಶ ಕತ್ತಿ ಅವರು ಎರಡು ಕೆಡಿಪಿ ಸಭೆ ನಡೆಸಿದ್ದಾರೆ. ಉಮೇಶ ಕತ್ತಿ ಅವರು ನಿಧನರಾದ ಬಳಿಕ ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕವಾಗದ ಕಾರಣ ಇದುವರೆಗೆ ಅಂದರೆ, ಕಳೆದ ಏಳು ತಿಂಗಳಿಂದ ಒಂದೇ ಒಂದು ಕೆಡಿಪಿ ಸಭೆ ನಡೆದಿಲ್ಲ.

ಸದ್ಯ ಜಿಲ್ಲೆಯ ಜನರ ಸಮಸ್ಯೆಯನ್ನು ಆಲಿಸಲು ಯಾವೊಬ್ಬ ಸಚಿವರು ಇಲ್ಲದೇ ಇರುವುದರಿಂದ ಜಿಲ್ಲೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅಧಿಕಾರಿಗಳದ್ದೇ ಕಾರುಬಾರಾಗಿದ್ದು, ಜನರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪದೇ ಅನರ್ಹರ ಪಾಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಗುರಿ ತಲುಪಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.

***

ಕೆಡಿಪಿ ಸಭೆಗಳು ನಡೆಯದೇ ಇದ್ದರೂ ಸಹ ಇಲಾಖಾವಾರು ಪ್ರಗತಿಪರಿಶೀಲನೆಯನ್ನು ಆಗಾಗ ಮಾಡುವು ಮೂಲಕ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಲ್ಲದಂತೆ ಹಾಗೂ ಅನುದಾನ ಸಮರ್ಪಕವಾಗಿ ಬಳಕೆಯಾಗುವಂತೆ ಕ್ರಮವಹಿಸಲಾಗಿದೆ

–ರಾಹುಲ್‌ ಶಿಂಧೆ, ಸಿಇಒ

ಜಿಲ್ಲಾ ಪಂಚಾಯ್ತಿ, ವಿಜಯಪುರ

***

ಜಿಲ್ಲೆಯ ಅಭಿವೃದ್ಧಿ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಒಂದಷ್ಟು ಚಿಂತೆ ಇಲ್ಲ ಎಂಬುದಕ್ಕೆ ಕೆಡಿಪಿ ಸಭೆಗಳು ನಡೆಯದೇ ಇರುವುದೇ, ಜಿಲ್ಲೆಗೆ ಏಳು ತಿಂಗಳಾದರೂ ಒಬ್ಬ ಉಸ್ತುವಾರಿ ಸಚಿವರನ್ನು ನೇಮಕ ಮಾಡದಿರುವುದು ಸಾಕ್ಷಿಯಾಗಿದೆ

–ಸೋಮನಾಥ ಕಳ್ಳಿಮನಿ, ಪ್ರಧಾನ ಕಾರ್ಯದರ್ಶಿ,
ಜಿಲ್ಲಾ ಕಾಂಗ್ರೆಸ್‌ ಸಮಿತಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT