ಮಂಗಳವಾರ, ನವೆಂಬರ್ 30, 2021
23 °C
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ

ಪೊಲೀಸ್ ಕೇಸರಿಕರಣ ವಿರೋಧಿಸಿ ಕಾಂಗ್ರೆಸ್‌ನಿಂದ ಪೊಲೀಸರಿಗೆ ಖಾಕಿ ಸಮವಸ್ತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಪೊಲೀಸ್ ಕೇಸರಿಕರಣ ವಿರೋಧಿಸಿ ಚುನಾವಣೆ ಬಳಿಕ ಕಾಂಗ್ರೆಸ್‌ನಿಂದ ಪೊಲೀಸ್ ಠಾಣೆ ಎದುರು ರಾಷ್ಟ್ರ ಧ್ವಜ ಹಾರಿಸಿ, ಪೊಲೀಸರಿಗೆ ಖಾಕಿ ಸಮವಸ್ತ್ರ ಉಡುಗೊರೆ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಸಿಂದಗಿ ತಾಲ್ಲೂಕಿನ ಬಳಗಾನೂರಿನಲ್ಲಿ ಮಂಗಳವಾರ ಕಾಂಗ್ರೆಸ್ ಚುನಾವಣಾ ಪ್ರಚಾರಸಭೆಯಲ್ಲಿ ಅವರು ಮಾತನಾಡಿದರು.

ಆಯುಧಪೂಜೆ ಹಬ್ಬದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ತಮ್ಮ ಸಮವಸ್ತ್ರ ಕಳಚಿ ಕೇಸರಿ ಬಟ್ಟೆ ಧರಿಸಿರುವುದು ದೇಶಕ್ಕೆ ಅಪಾಯಕಾರಿ ಬೆಳವಣಿಗೆ. ಇದು ಪ್ರತಿಯೊಬ್ಬ ಭಾರತೀಯನನ್ನು ಕೆರಳಿಸುವ ವಿಚಾರ. ಉಪಚುನಾವಣೆ ಇಲ್ಲದಿದ್ದರೆ, ನಾನೇ ಹೋಗಿ ಪೊಲೀಸ್ ಠಾಣೆ ಮುಂದೆ ರಾಷ್ಟ್ರಧ್ವಜ ಹಾರಿಸುತ್ತಿದ್ದೆ ಎಂದು ಹೇಳಿದರು.

ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿದ ಮುಖ್ಯಮಂತ್ರಿಗಳು, ಗೃಹ ಸಚಿವರು, ಪೊಲೀಸ್ ಅಧಿಕಾರಿಗಳು ಪೊಲೀಸ್ ಠಾಣೆಯನ್ನೂ ಕೇಸರಿಕರಣ ಮಾಡಲು ಹೊರಟಿದ್ದಾರೆ. ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಕಾಪಾಡಲು ಸಂವಿಧಾನದಲ್ಲಿ ಪೊಲೀಸರಿಗೆ ಅಧಿಕಾರ ನೀಡಿದ್ದಾರೆ. ಆದರೆ ಅದಕ್ಕೆ ಅಗೌರವ ತರುವಂತೆ ಪೊಲೀಸರು ವರ್ತಿಸುತ್ತಿದ್ದಾರೆ. ಸರ್ಕಾರ ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದಾಗ ಅದನ್ನು ನೋಡಿಕೊಂಡು ಕೂರಲು ಹೇಗೆ ಸಾಧ್ಯ? ಎಂದರು.

ಜೆಡಿಎಸ್ ಜಾತ್ಯತೀತ ಅಲ್ಲ

ಜೆಡಿಎಸ್ ಜಾತ್ಯತೀತ ಅಲ್ಲ. ಹೆಸರು ಮಾತ್ರ ಜಾತ್ಯತೀತ. ಆದರೆ, ಕೋಮುವಾದಿಗೊಳ ಜೊತೆ ಭಾಯಿ, ಭಾಯಿ. ಈ ಒಳ ಒಪ್ಪಂದಕ್ಕೆ ಸಿಂದಗಿ ಮತದಾರರು ಮನ್ನಣೆ ನೀಡಬಾರದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್‌ಗೆ ಕೊಡುವ ವೋಟ್ ಬಿಜೆಪಿಗೆ ಕೊಟ್ಟಂತೆ. ಹೀಗಾಗಿ ಒಂದೇ ಒಂದು ವೋಟನ್ನು ಜೆಡಿಎಸ್‌ಗೆ ಹಾಕಬೇಡಿ ಎಂದು ಮತದಾರರಿಗೆ ವಿನಂತಿಸಿದರು.

ಜೆಡಿಎಸ್ ಉದ್ದೇಶ ಏನೆಂಬುದು ಅಲ್ಪಸಂಖ್ಯಾತರಿಗೆ ಮನವರಿಕೆಯಾಗಿದೆ. ಅವರು ತಿಳಿದುಕೊಂಡಷ್ಟು ಮತದಾರರು ದಡ್ಡರಲ್ಲ ಎಂದರು.

ಜೆಡಿಎಸ್‌ ಟಿಕೆಟ್‌ ಬಿಜೆಪಿ ಕಚೇರಿಯಲ್ಲಿ ನಿರ್ಧಾರ:

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಮಾತನಾಡಿ, ಜೆಡಿಎಸ್ ಯಾವತ್ತೂ ಬಿಜೆಪಿ ಪರವಾದ ಪಕ್ಷ. ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಯಾರಿಗೆ ನೀಡಬೇಕೆಂಬುದು ಬಿಜೆಪಿ ಕಚೇರಿಯಲ್ಲಿ ನಿರ್ಧಾರವಾಗಿದೆ. ಜೆಡಿಎಸ್ ಪಕ್ಷವು ಬಿಜೆಪಿಯ ’ಬಿ ಟೀಮ್ ಎಂದು ಆರೋಪಿಸಿದರು.

****

ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಬುದ್ದಿ ಇಲ್ಲದವರು  ಇಂತಹ ಹೇಳಿಕೆ ಕೊಡುತ್ತಾರೆ. ಅವರನ್ನು ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸಬೇಕು

–ರಣದೀಪ್ ಸಿಂಗ್ ಸುರ್ಜೆವಾಲ, ಕಾಂಗ್ರೆಸ್ ರಾಜ್ಯ ಉಸ್ತುವಾರಿ

****

ಕಟೀಲ್ ಹುಚ್ಚನ ರೀತಿ ಮಾತನಾಡುತ್ತಾನೆ. ಅವನನ್ನು ನಿಮ್ಹಾನ್ಸ್ ಗೆ ಸೇರಿಸಬೇಕು. ಮಾನಹಾನಿಕರ ಹೇಳಿಕೆ ನೀಡಿರುವ ಕಟೀಲ್ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಅಧ್ಯಕ್ಷ ಸ್ಥಾನದಿಂದ ತಕ್ಷಣ ಕಿತ್ತೊಗೆಯಬೇಕು

ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು