ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷ್ಣಾ ನ್ಯಾಯಾಧೀಕರಣದ ಅಂತಿಮ ತೀರ್ಪು: ಗೆಜೆಟ್‌ ಅಧಿಸೂಚನೆಗೆ ಸಿಎಂ ಒತ್ತಾಯ

Published : 21 ಆಗಸ್ಟ್ 2024, 14:52 IST
Last Updated : 21 ಆಗಸ್ಟ್ 2024, 14:52 IST
ಫಾಲೋ ಮಾಡಿ
Comments

ವಿಜಯಪುರ: ಕೃಷ್ಣಾ ನ್ಯಾಯಾಧೀಕರಣದ ಅಂತಿಮ ತೀರ್ಪು ಹೊರಡಿಸುವ ಸಂಬಂಧ ಪ್ರಧಾನಮಂತ್ರಿ ಅವರು ತಕ್ಷಣ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಭೆ ಕರೆದು ಚರ್ಚಿಸಿ, ತೀರ್ಮಾನಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ಆಲಮಟ್ಟಿಯಲ್ಲಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಸಾಗರಕ್ಕೆ ಬುಧವಾರ ಗಂಗಾಪೂಜೆ ಸಲ್ಲಿಸಿ ಹಾಗೂ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಆಲಮಟ್ಟಿ ಜಲಾಶಯದ ಎತ್ತರವನ್ನು ಈಗಿರುವ 519.60 ಮೀಟರ್‌ನಿಂದ 524.25 ಮೀಟರ್‌ಗೆ ಎತ್ತರಿಸಬೇಕು ಎಂದಾದರೆ ಕೇಂದ್ರ ಸರ್ಕಾರ ಮೊದಲು ಗೆಜೆಟ್‌ ನೋಟಿಫಿಕೇಶ್‌ ಹೊರಡಿಸಬೇಕು. ಆಗ ಮಾತ್ರ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸಿ, ನಮ್ಮ ಪಾಲಿನ ನೀರು ಪಡೆಯಲು ಸಾಧ್ಯವಾಗಲಿದೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ, ಪುನರ್ವಸತಿಗೆ ರಾಜ್ಯ ಸರ್ಕಾರ ಸಿದ್ಧವಿದೆ. ಈ ಸಂಬಂಧ ಪ್ರತಿ ವರ್ಷ ₹20 ಸಾವಿರ ಕೋಟಿಯಂತೆ ₹1 ಲಕ್ಷ ಕೋಟಿ ಅನುದಾನವನ್ನು ಮೀಸಲಿಡಲು ಉದ್ದೇಶಿಸಲಾಗಿದೆ ಎಂದರು.

ಆಲಮಟ್ಟಿ ಜಲಾಶಯದ ಎತ್ತರವನ್ನು 524.25 ಮೀಟರ್‌ಗೆ ಹೆಚ್ಚಿಸುವ ಹಾಗೂ ಭೂಸ್ವಾಧೀನ, ಪುನರ್ವಸತಿ, ಪುನರ್‌ನಿರ್ಮಾಣ ಬಗ್ಗೆ ಚರ್ಚಿಸುವ ಸಂಬಂಧ ಶೀಘ್ರದಲ್ಲೇ ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆದು ನಿರ್ಧರಿಸುತ್ತೇವೆ ಎಂದರು.

ಕೃಷ್ಣಾ ಅರತಿ:

ಗಂಗಾ ಆರತಿ ಮಾದರಿಯಲ್ಲಿ ಕೃಷ್ಣಾ ನದಿಗೂ ಆರತಿ ಮಾಡಲು ಈ ಭಾಗದ ಜನಪ್ರತಿನಿಧಿಗಳಿಂದ ಬೇಡಿಕೆ ಇದೆ. ಅಲ್ಲದೇ. ಪ್ರವಾಸೋದ್ಯಮಕ್ಕೂ ಅನುಕೂಲ ಆಗುವುದರಿಂದ ಕೃಷ್ಣಾ ಆರತಿ ಏರ್ಪಡಿಸಲು ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT