ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ, ವಿಧಾನಸಭಾ ಚುನಾವಣೆಗೆ ಕೆಆರ್‌ಎಸ್‌ ಸ್ಪರ್ಧೆ

ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ
Last Updated 23 ಜುಲೈ 2022, 14:51 IST
ಅಕ್ಷರ ಗಾತ್ರ

ವಿಜಯಪುರ: ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಮಹಾನಗರ ಪಾಲಿಕೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿಯು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಸಮಿತಿಯ ಅಧ್ಯಕ್ಷ ರವಿಕೃಷ್ಣ ರೆಡ್ಡಿ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರೈತರು, ಕೂಲಿಕಾರ್ಮಿಕರ ಪರವಾಗಿಜನಪರ ರಾಜಕಾರಣ ಮಾಡಬೇಕು ಎಂಬ ಉದ್ದೇಶದಿಂದ ಕರ್ನಾಟಕ ರಾಷ್ಟ್ರ ಸಮಿತಿ ಚುನಾವಣಾ ರಾಜಕಾರಣಕ್ಕೆ ಪ್ರವೇಶ ಮಾಡಿದೆ. ಈಗಾಗಲೇ ನಡೆದ 10 ಉಪ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿದೆ. ಈ ಮೂಲಕ ರಾಜಕಾರಣದಲ್ಲಿ ಒಂದಷ್ಟು ಬದಲಾವಣೆಗೆ ಕಾರಣವಾಗುತ್ತಿದೆ ಎಂದು ಹೇಳಿದರು.

ಜನ ಲೋಕಾಯುಕ್ತವಾಗಿ ಆರ್‌ಕೆಎಸ್‌ ಕಾರ್ಯನಿರ್ವಹಿಸತೊಡಗಿದೆ.ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರ, ಲಂಚಗುಳಿತದ ಬಗ್ಗೆ ಕೆೆಆರ್‌ಎಸ್‌ ಬಯಲು ಮಾಡಿದೆ. ಕಚೇರಿಗಳ ಮೇಲೆ ದಾಳಿ ಮಾಡಿ, ವಿಡಿಯೊ ಮಾಡಿ ಸಾಕ್ಷಿ ಸಹಿತ ಬಹಿರಂಗ ಮಾಡಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಲೋಕಾಯುಕ್ತ, ಎಸಿಬಿ ಅಧಿಕಾರಿಗಳು ಭ್ರಷ್ಟರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದೆ ಎಂದರು.

ಪೊಲೀಸರು ಲೋಕಲ್‌ ರೌಡಿಗಳಂತೆ ವರ್ತಿಸುತ್ತಿರುವ ಬಗ್ಗೆಯೂ ಕೆಆರ್‌ಎಸ್‌ ಧ್ವನಿ ಎತ್ತಿದೆ. ಪರಿಣಾಮ ಹತ್ತಾರು ವರ್ಷಗಳಿಂದಒಂದೇ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರನ್ನು ಸರ್ಕಾರ ವರ್ಗಾವಣೆಗೆ ಕ್ರಮಕೈಗೊಂಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಇದುವರೆಗೆ ಕೆಟ್ಟ ಆಡಳಿತ ನಡೆಸಿರುವ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳು ಸರ್ಕಾರಿ ಅಧಿಕಾರಿಗಳನ್ನು ಏಜೆಂಟರಂತೆ ಬಳಸಿಕೊಂಡು ಜನಸಾಮಾನ್ಯರ ತೆರಿಗೆ ಹಣವನ್ನು ಲೂಟಿ ಮಾಡಿವೆ ಎಂದು ಆರೋಪಿಸಿದರು.

ಜೆಸಿಬಿ(ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ) ಪಕ್ಷಗಳಂತೆ ಭ್ರಷ್ಟ ಮಾರ್ಗದ ಮೂಲಕ ಚುನಾವಣೆ ಎದುರಿಸಲು ನಮಗೆ ಸಾಧ್ಯವಿಲ್ಲ. ಹೀಗಾಗಿಪಕ್ಷಕ್ಕೆ ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕಾಗಿ ಜನರಿಂದ ದೇಣಿಗೆ ಪಡೆಯುತ್ತಿದ್ದೇವೆ. ಜೊತೆಗೆ ಆನ್‌ಲೈನ್‌ ಮೂಲಕ ಸಮಿತಿಗೆ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರೇ ವಾಹನಗಳನ್ನು ನೀಡಿದ್ದಾರೆ. ದೇಣಿಗೆ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ ಎಂದರು.

ವಿಜಯಪುರ ಜಿಲ್ಲೆಯಲ್ಲೂ ಆರ್‌ ಕೆಎಸ್‌ಗೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜನರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.

ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯದೇ ಮೂರು ವರ್ಷವಾಯಿತು. ಸ್ಥಳೀಯ ಶಾಸಕರಿಗೆ ಪಾಲಿಕೆ ಚುನಾವಣೆ ಅಗತ್ಯವಿಲ್ಲ. ಪಾಲಿಕೆ ಸದಸ್ಯರಿದ್ದರೆ ಶೇ 40ರಷ್ಟು ಕಮಿಷನ್‌ ಸಿಗುವುದಿಲ್ ಎಂಬ ಕಾರಣಕ್ಕೆ ಚುನಾವಣೆ ನಡೆಯದಂತೆ ನೋಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಅಭ್ಯರ್ಥಿಗಳ ಘೋಷಣೆ:

ಮುಂಬರುವ ವಿಧಾನಸಭಾ ಚುನಾವಣೆಗೆ ದೇವರ ಹಿಪ್ಪರಗಿ ಕ್ಷೇತ್ರದಿಂದ ಶಿವಾನಂದ ಯಡಹಳ್ಳಿ, ಇಂಡಿ ಕ್ಷೇತ್ರದಿಂದ ಶಂಕರ ಬಿರಾದಾರ ಮತ್ತು ಸಿಂದಗಿ ಕ್ಷೇತ್ರದಿಂದ ಪುಂಡಲೀಕ ಬಿರಾದಾರ ಅವರನ್ನು ಕೆಆರ್‌ಎಸ್‌ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲಾಗುವುದು ಎಂದು ಘೋಷಣೆ ಮಾಡಿದರು.

ಕೆಆರ್‌ಎಸ್‌ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಎಸ್‌.ಎಚ್‌., ಜಿಲ್ಲಾ ಉಸ್ತುವಾರಿ ವಿಜಯಕುಮಾರ್‌, ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಯಡಹಳ್ಳಿ, ಅಬ್ದುಲ್‌ ಹಮೀದ್‌, ಬಿ.ಕ.ಎ ಪ್ರಸನ್ನ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT