ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ್ ಜಿಹಾದ್ ನಿಯಂತ್ರಣಕ್ಕೆ ಕಾನೂನು: ನಳಿನ್ ಕುಮಾರ್ ಕಟೀಲ್

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
Last Updated 17 ಫೆಬ್ರುವರಿ 2021, 12:54 IST
ಅಕ್ಷರ ಗಾತ್ರ

ವಿಜಯಪುರ: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವಂತೆ ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ನಿಯಂತ್ರಣ ಮಾಡುವ ಕಾನೂನನ್ನು ರಾಜ್ಯ ಸರ್ಕಾರ ಜಾರಿಗೆ ತರಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಭಾರತೀಯ ಜನತಾ ಪಾರ್ಟಿ ರಾಜ್ಯ ಪ್ರಕೋಷ್ಠಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀರಾಮನ ಜನ್ಮ ಸ್ಥಳ ಅಯೋಧ್ಯೆ ಎಂದು ಬಿಜೆಪಿಯಾಗಲಿ, ಆರ್‌ಎಸ್‌ಎಸ್‌ ಆಗಲಿ, ಯಾವುದೇ ಸ್ವಾಮೀಜಿಗಳು ಹೇಳಿದ್ದಲ್ಲ. ಈ ದೇಶದ ಸುಪ್ರೀಂಕೋರ್ಟ್‌ ನೀಡಿದ ತೀರ್ಪಾಗಿದೆ. ಸುಪ್ರೀಂ ಕೋರ್ಟ್ ರಚಿಸಿರುವ ಟ್ರಸ್ಟ್ ಮೂಲಕ ಮಂದಿರ ನಿರ್ಮಾಣವಾಗುತ್ತಿದೆ. ಆದರೆ, ಅಯೋಧ್ಯೆಯನ್ನು ವಿವಾದಿತ ಪ್ರದೇಶ ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಸುಪ್ರೀಂಕೋರ್ಟ್‌ಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಈ ಹಿಂದೆ ಡ್ರಗ್ಸ್ ಹಣದಲ್ಲಿ ಸರ್ಕಾರ ನಡೆಯುತ್ತಿತ್ತು. ಆದರೆ, ಯಡಿಯೂರಪ್ಪ ಸರ್ಕಾರ ರಾಜ್ಯವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಿದೆ ಎಂದರು.

ಸಿಎಎ, ರೈತರ ಹೆಸರಲ್ಲಿ ದೇಶದಲ್ಲಿ ಗಲಭೆ ಸೃಷ್ಟಿಸಲು, ಮೋದಿ ಹೆಸರು ಕೆಡಿಸಲು, ಕಳಂಕ ತರಲು ಷಡ್ಯಂತ್ರ ನಡೆದಿದೆ. ಆದರೆ, ಇಂತಹ ಷಡ್ಯಂತ್ರಗಳಿಗೆ, ಹೋರಾಟಗಳಿಗೆ ಮೋದಿ ಹೆದರುವುದಿಲ್ಲ ಎಂದರು.

ಬಿಜೆಪಿ ದೇಶದಲ್ಲಿ ಕೇವಲ ಮತ ಪರಿವರ್ತನೆಯ ರಾಜಕಾರಣ ಮಾಡುತ್ತಿಲ್ಲ, ರಾಷ್ಟ್ರ ಪರಿವರ್ತನೆಯ ರಾಜಕಾರಣ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ, ತುರ್ತು ಪರಿಸ್ಥಿತಿ ಹೇರುವ ಮೂಲಕ ರಾಷ್ಟ್ರ ಭಕ್ತರನ್ನು ಜೈಲಿಗೆ ಹಾಕಿದೆ, ಭ್ರಷ್ಟಾಚಾರ ಮಾಡಿದೆ, ಭಯೋತ್ಪಾದಕರಿಗೆ ಬಿರಿಯಾನಿ ಕೊಟ್ಟಿದೆ, ಸಿಖ್ಖರ ಕಗ್ಗೊಲೆ ಮಾಡಿದೆ, ಕುಟುಂಬ ರಾಜಕಾರಣ ಮಾಡಿದೆ. ಅಧಿಕಾರ ಇಲ್ಲದಿರುವಾಗ ಕಾಂಗ್ರೆಸ್ ಗಲಭೆ ಮಾಡುತ್ತದೆ. ಕಾಂಗ್ರೆಸ್ ದೇಶದಲ್ಲಿ ವಿರೋಧ ಪಕ್ಷವಾಗಲೂ ನಾಲಾಯಕ್ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ವಿವಿಧ ಸಮಾಜಗಳನ್ನು, ಯುವ ಜನರನ್ನು, ಹೊಸಬರನ್ನು ಪಕ್ಷಕ್ಕೆ ಕರೆತರುವ ಕೆಲಸ ಬಿಜೆಪಿ ಪ್ರಕೋಷ್ಠಗಳಿಂದ ಆಗಬೇಕು ಎಂದರು.

ಧಾರವಾಡ, ಬೆಳಗಾವಿ, ಕಲಬುರ್ಗಿ, ಬಳ್ಳಾರಿ ಸೇರಿದಂತೆ ರಾಜ್ಯದ ನಾಲ್ಕು ಪ್ರಕೋಷ್ಠಗಳ 14 ಜಿಲ್ಲೆಗಳ 640 ಸಂಚಾಲಕರು, ಸಹ ಸಂಚಾಲಕರು ಪಾಲ್ಗೊಂಡಿದ್ದರು.

ಸಂಸದ ರಮೇಶ ಜಿಗಜಿಗಣಿ, ಶಾಸಕರಾದ ಪಿ.ರಾಜೀವ್‌, ಸೋಮನಗೌಡ ಪಾಟೀಲ ಸಾಸನೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ವಿಧಾನ ಪರಿಷತ್‌ ಮಾಜಿ ಸದಸ್ಯ ಭಾನುಪ್ರಕಾಶ್, ಶಿವಯೋಗಿ ಸ್ವಾಮಿ, ಸಂಜೀವ ಬೆಟದೂರ, ಚಂದ್ರಶೇಖರ ಕವಟಗಿ, ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಪೂರ, ವಿಜಯಗೌಡ ಪಾಟೀಲ, ಎಸ್‌.ಕೆ.ಬೆಳ್ಳುಬ್ಬಿ, ರಮೇಶ ಭೂಸನೂರು ಇದ್ದರು.

****

ಇದುವರೆಗೆ ಕಾಂಗ್ರೆಸ್‌ಗೆ ಸ್ವಾತಂತ್ರ್ಯ ಸಂಗ್ರಾಮದ ಪುಣ್ಯ ಇತ್ತು, ಮಹಾತ್ಮ ಗಾಂಧಿಯವರ ಪುಣ್ಯ ಇತ್ತು. ಆದರೆ, ಈಗ ಕಾಂಗ್ರೆಸ್ ಅಕೌಂಟ್ ಖಾಲಿಯಾಗಿದೆ

-ನಳಿನ್‌ಕುಮಾರ್‌ ಕಟೀಲ್‌, ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕ

****

ಯತ್ನಾಳಗೆ ಶಿಸ್ತು ಸಮಿತಿ ನೋಟಿಸ್‌

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ವೈಯಕ್ತಿಕವಾಗಿ ಹರಿಹಾಯುತ್ತಿರುವ ಶಾಸಕ ಬಸನಗೌಡ ಪಾಟೀಲ ಅವರಿಗೆ ಬಿಜೆಪಿ ಶಿಸ್ತು ಸಮಿತಿಯಿಂದ ನೋಟಿಸ್‌ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಸ್ತು ಸಮಿತಿ ಈಗಾಗಲೇ ಯತ್ನಾಳ ಅವರಿಗೆ ನೋಟಿಸ್‌ ಕಳುಹಿಸಿದೆ. ಅದು ಬಂದ ಬಳಿಕ ಅವರು ಉತ್ತರ ನೀಡಲಿದ್ದಾರೆ ಎಂದರು.

ಸಿಂದಗಿ ಸೇರಿದಂತೆಮೂರು ವಿಧಾನಸಭೆ, ಬೆಳಗಾವಿ ಲೋಕಸಭೆ ಉಪ ಚುನಾವಣೆ ಕುರಿತು ಪಕ್ಷ ಇನ್ನೂ ಯೋಚನೆ ಮಾಡಿಲ್ಲ. ಎಲ್ಲರ ಅಭಿಪ್ರಾಯ ಪಡೆದು ಸೂಕ್ತವಾದವರನ್ನು ಕಣಕ್ಕೆ ಇಳಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌, ಜೆಡಿಎಸ್‌ನ ಅಸಮದಾನಿತ 15 ರಿಂದ 20 ಶಾಸಕರು ಬಿಜೆಪಿ ಸೇರ್ಪಡೆಗೆ ಬರುವುದಾಗಿ ಹೇಳುತ್ತಿದ್ದಾರೆ. ಆದರೆ, ನಮಗೆ ಅವರ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT