ಶುಕ್ರವಾರ, ಡಿಸೆಂಬರ್ 2, 2022
21 °C
ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿಯಿಂದ ಜಾತಿ ಅಸ್ತ್ರ

ಬಿಜೆಪಿಯಿಂದಲೇ ಲಿಂಗಾಯತ ಟಾರ್ಗೆಟ್: ಕಾಂಗ್ರೆಸ್‌ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕಾಂಗ್ರೆಸ್ ಎಂದಿಗೂ ಲಿಂಗಾಯತ, ಒಕ್ಕಲಿಗ ಸೇರಿದಂತೆ ಯಾವುದೇ ಸಮಾಜ, ಜಾತಿ, ಧರ್ಮವರನ್ನು ಟಾರ್ಗೆಟ್ ಮಾಡಿಲ್ಲ. ಬಿಜೆಪಿಯೇ ಲಿಂಗಾಯತರನ್ನು ಟಾರ್ಗೆಟ್ ಮಾಡಿದೆ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ರವಿಕುಮಾರ ಬಿರಾದಾರ ಆರೋಪಿಸಿದರು. 

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ತಾನು ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕಾಂಗ್ರೆಸ್‌ ವಿರುದ್ಧ ಕೊನೆಯ ಪ್ರಯತ್ನವಾಗಿ ಜಾತಿ, ಧರ್ಮ, ಸಮಾಜವನ್ನು ಬಳಸಿಕೊಳ್ಳುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನ ಪೇಸಿಎಂ ಅಭಿಯಾನದಿಂದ ದಿಕ್ಕೆಟ್ಟಿರುವ ಬಿಜೆಪಿ ಜನರನ್ನು ಬೇರೆಡೆ ಸೆಳೆಯಲು ಲಿಂಗಾಯತ ಮುಖ್ಯಮಂತ್ರಿಯನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ತಿರುಚುತ್ತಿದ್ದಾರೆ ಎಂದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಅವರ ಪಕ್ಷದ ಶಾಸಕರೇ ಹೇಳಿದ್ದಾರೆ. ಈ ಕುರಿತು ಕಾಂಗ್ರೆಸ್‌ ಪೇಸಿಎಂ ಅಭಿಯಾನ ಮಾಡುತ್ತಿದೆ ಎಂದರು.

ಲಿಂಗಾಯತ ಸ್ವತಂತ್ರ ಧರ್ಮವಾಗಿದ್ದರೇ ಅಲ್ಪಸಂಖ್ಯಾತ ಸ್ಥಾನ ಮಾನ ಸಿಗುತ್ತಿತ್ತು. ಆದರೆ, ಈ  ವಿಷಯದಲ್ಲಿ ಬಿಜೆಪಿ, ಸಂಘ ಪರಿವಾರದವರು ಲಿಂಗಾಯತರು ಒಗ್ಗೂಡದಂತೆ ಮಾಡಿದರು ಎಂದು ಆರೋಪಿಸಿದರು.

ಈಗಲೂ ಲಿಂಗಾಯತರನ್ನು ಒಡೆಯುವ ಕೆಲಸ ಬಿಜೆಪಿ ಮಾಡುತ್ತಿದೆ. ಲಿಂಗಾಯತ ಪಂಚಮಸಾಲಿಗಳು ನಡೆಸುತ್ತಿರುವ 2 ‘ಎ’ ಮೀಸಲಾತಿ ಹೋರಾಟದಲ್ಲಿ ಒಡಕುಂಟು ಮಾಡುತ್ತಿರುವವರೇ ಬಿಜೆಪಿಯವರು. ಪಂಚಮಸಾಲಿ ಸಮಾಜದ ನಡುವೆ ಒಳಜಗಳ ಹಚ್ಚಿ ಕೂತಿದ್ದಾರೆ. ಪಂಚಮಸಾಲಿ ಮೂರನೇ ಪೀಠ ಆರಂಭಕ್ಕೂ ಬಿಜೆಪಿ ಸಚಿವರು, ಶಾಸಕರೇ ಕಾರಣ ಎಂದು ಆರೋಪಿಸಿದರು.

ಲಿಂಗಾಯತ ಸಮಾಜದ ಬಿ.ಎಸ್‌. ಯಡಿಯೂರಪ್ಪ ಕಣ್ಣೀರು ಹಾಕಿಕೊಂಡು ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವಂತೆ ಮಾಡಿದ್ದು ಯಾವ ಪಕ್ಷ? ಲಿಂಗಾಯತ ಸಮಾಜಕ್ಕೆ ಸೇರಿದ ಬೆಳಗಾವಿಯ ಗುತ್ತಿಗೆದಾರ ಸಂತೋಷ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಯಾರು ಕಾರಣ? ಲಿಂಗಾಯತ ಮಠಕ್ಕೆ ಅನುದಾನ ನೀಡುವಲ್ಲೂ ಕಮಿಷನ್ ಪಡೆದ ಸರ್ಕಾರ ಯಾವುದು? ಎಂದು ಪ್ರಶ್ನಿಸಿದ ಅವರು ಬಿಜೆಪಿ, ಆರ್‌ಎಸ್‌ಎಸ್‌ ಲಿಂಗಾಯತರನ್ನು ಬಳಸಿ ಬಿಸಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಎಂದರೆ ಭ್ರಷ್ಟಾಚಾರ, ಬಿಜೆಪಿ ಎಂದರೆ ಬಿ ರಿಪೋರ್ಟ್ ಎಂದು ಆರೋಪಿಸಿದರು.

‘ಪೇ ಸಿಎಂ’ ಅಭಿಯಾನದಿಂದ ಕಂಗೆಟ್ಟಿರುವ ಬಿಜೆಪಿಗೆ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯ ವಸ್ತು ಇಲ್ಲದೇ ಪ್ರತಿಯಾಗಿ ಸುಳ್ಳು ಆರೋಪ ಮಾಡುತ್ತಿದೆ. ಗಲಾಟೆ ಆದಾಗ ಪೊಲೀಸ್‌ ಠಾಣೆಗೆ ಒಬ್ಬರು ದೂರು ನೀಡಿದರೆ, ಮತ್ತೊಬ್ಬರು ಪ್ರತಿದೂರು ದಾಖಲಿಸಿದಂತೆ ಕಾಂಗ್ರೆಸ್ ಅಭಿಯಾನಕ್ಕೆ ಪ್ರತಿ ಅಭಿಯಾನ ನಡೆಸುತ್ತಿದ್ದಾರೆ. ಆದರೆ, ಇದರಲ್ಲಿ ಯಾವುದೇ ಹುರುಳಿಲ್ಲ ಎಂದರು.

ಕಾಂಗ್ರೆಸ್‌ ಮುಖಂಡರಾದ ಲಿಂಗಪ್ಪ ಸಂಗಾಪೂರ, ವಸಂತ ಹೊನಮೋಡೆ ಇದ್ದರು.

***

ಭ್ರಷ್ಟಾಚಾರವನ್ನು ಲಿಂಗಾಯತ, ಒಕ್ಕಲಿಗ ಯಾರೇ ಮಾಡಿದರೂ ಅದಕ್ಕೆ ಜಾತಿ ಲೇಪನ ಮಾಡುವುದು ಸರಿಯಲ್ಲ. ಭ್ರಷ್ಟಾಚಾರ ಎಂಬುದು ಜಾತ್ಯತೀತ. ‌ಅದಕ್ಕೆ ಯಾವುದೇ ಜಾತಿ, ಧರ್ಮ ಇಲ್ಲ

–ಡಾ.ರವಿಕುಮಾರ ಬಿರಾದಾರ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ವೈದ್ಯಕೀಯ ಘಟಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು