ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಸೌಲಭ್ಯ ಕಲ್ಪಿಸದಿದ್ದರೆ ಕರ್ನಾಟಕ ಸೇರುತ್ತೇವೆ: ಮಹಾರಾಷ್ಟ್ರ ಕನ್ನಡಿಗರು

Last Updated 27 ನವೆಂಬರ್ 2022, 6:31 IST
ಅಕ್ಷರ ಗಾತ್ರ

ವಿಜಯಪುರ: ನೀರಾವರಿ ಸೌಲಭ್ಯ ಕಲ್ಪಿಸದಿದ್ದರೆ ವಿಜಯಪುರ ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರ ಗಡಿ ಭಾಗದ 42 ಹಳ್ಳಿಗಳ ಜನರು ಕರ್ನಾಟಕ ರಾಜ್ಯ ಸೇರಿಕೊಳ್ಳುತ್ತೇವೆ ಎಂದು ಜತ್ ತಾಲ್ಲೂಕು ನೀರಾವರಿ ಸಮಿತಿ ಅಲ್ಲಿಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನ ಉಮದಿಯಲ್ಲಿ ಇತ್ತೀಚೆಗೆ ಸಭೆ ನಡೆಸಿರುವ ನೀರಾವರಿ ಹೋರಾಟಗಾರರು, ಮಹಾರಾಷ್ಟ್ರ ಸರ್ಕಾರದ ಮಲತಾಯಿ ಧೋರಣೆ ಮತ್ತು ನಿರ್ಲಕ್ಷ್ಯದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ಎಂಟು ದಿನಗಳ ಒಳಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರು ಉಮದಿಗೆ ಭೇಟಿ ನೀಡಿ, ಸ್ಪಷ್ಟ ಭರವಸೆ ನೀಡಿ, ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಗಡುವು ನೀಡಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಜತ್ ತಾಲ್ಲೂಕಿನ ಜನರ ಬೇಡಿಕೆಗೆ ಸ್ಪಂದಿಸದೇ ಇದ್ದರೆ ಕರ್ನಾಟಕ ಮುಖ್ಯಮಂತ್ರಿಗೆ ಜತ್ ಗೆ ಆಹ್ವಾನ ನೀಡುತ್ತೇವೆ. ಕರ್ನಾಟಕ ಸೇರ್ಪಡೆಗೆ ನಿರ್ಧಾರ ಪ್ರಕಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹಾರಾಡಿದ ಕನ್ನಡ ಬಾವುಟ: ಜತ್ ತಾಲ್ಲೂಕಿನ ತಿಕ್ಕುಂಡಿಯಲ್ಲಿ ಸಭೆ, ಪ್ರತಿಭಟನಾ ಜಾಥಾ ನಡೆಸಿರುವ ಕನ್ನಡಿಗರು, ಕನ್ನಡ ಬಾವುಟಗಳನ್ನು ಹಿಡಿದು ಕನ್ನಡ ಪರ ಘೋಷಣೆ ಹಾಕಿದ್ದಾರೆ. ಗ್ರಾಮ ಪಂಚಾಯಿತಿ ಕಟ್ಟಡ, ಸಾರ್ವಜನಿಕ ಕಟ್ಟಡಗಳ ಮೇಲೆ ಕನ್ನಡದ ಬಾವುಟ ಹಾರಿಸಿದ್ದಾರೆ. ಜೈ ಕರ್ನಾಟಕ ಎಂಬ ಬರಹ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರ, ಕರ್ನಾಟಕ ನಕ್ಷೆ ಒಳಗೊಂಡ ಫಲಕದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.

ಕನ್ನಡ, ಕರ್ನಾಟಕ ಪರ ಫಲಕ, ಬಾವುಟಗಳನ್ನು ಮಹಾರಾಷ್ಟ್ರ ಪೊಲೀಸರು ತೆರವುಗೊಳಿಸಿದ್ದಾರೆ.

ಮಹಾರಾಷ್ಟ್ರದ ಹಲವು ಕನ್ನಡಪರ ಹೋರಾಟಗಾರರು, ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ, ಸೋಲಾಪುರ, ಲಾತೂರು ಗಡಿ ಭಾಗದ ಹಲವು ಹಳ್ಳಿಗಳನ್ನು ಒಳಗೊಂಡಂತೆ ಕರ್ನಾಟಕದ ಹೊಸ ನಕ್ಷೆ ರೂಪಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಹೋರಾಟದ ಕಾವನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT