ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದ ಜತ್‌ನಲ್ಲಿ 'ಮಹಾ' ಸರ್ಕಾರದ ವಿರುದ್ಧ ಕನ್ನಡಿಗರ ಪ್ರತಿಭಟನೆ

Last Updated 28 ನವೆಂಬರ್ 2022, 13:58 IST
ಅಕ್ಷರ ಗಾತ್ರ

ಜತ್‌(ಮಹಾರಾಷ್ಟ್ರ): ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ರಾಜ್ಯದ ಗಡಿ ಭಾಗದಲ್ಲಿರುವ ಗ್ರಾಮಗಳಲ್ಲಿ ಅಭಿವೃದ್ದಿ ಕಡೆಗಣಿಸಿದೆ. ಶಿಕ್ಷಣ, ಆರೋಗ್ಯ, ರಸ್ತೆ, ಸಾರಿಗೆ, ನೀರಾವರಿ ಸೌಲಭ್ಯ ಸೇರಿದಂತೆ ಮೂಲಸೌಕರ್ಯ ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಸಾಂಗ್ಲಿ ಜಿಲ್ಲೆ ಜತ್‌ ತಾಲ್ಲೂಕಿನ ಸಿದ್ದನಾಥ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಮಹಾರಾಷ್ಟ್ರದ ಕನ್ನಡ ಪರ ಸಂಘಟನೆಗಳ ಮುಖಂಡರು ಗ್ರಾಮದಲ್ಲಿ ಸಭೆ ನಡೆಸಿ, ಕನ್ನಡ ಧ್ವಜ ಹಿಡಿದು ಮೆರವಣಿಗೆ ಮಾಡಿದರು. ‘ಬೇಕೇ ಬೇಕು ನ್ಯಾಯ ಬೇಕು, ಕರ್ನಾಟಕ ಸರ್ಕಾರಕ್ಕೆ ಜಯವಾಗಲಿ, ಮಹಾರಾಷ್ಟ್ರ ಸರ್ಕಾರಕ್ಕೆ ದಿಕ್ಕಾರ’ ಎಂಬ ಘೋಷಣೆ ಕೂಗಿದರು.

‘ಮಹಾರಾಷ್ಟ್ರ ಸರ್ಕಾರ ನಮ್ಮ ಗ್ರಾಮಗಳನ್ನು ಸಂಪೂರ್ಣ ನಿರ್ಲಕ್ಷ್ಯಿಸಿದೆ. ಸೌಲಭ್ಯ ಕೊಡುತ್ತೇವೆ ಎಂದು ನಾಲ್ಕೈದು ದಶಕದಿಂದ ಕೇವಲ ಆಶ್ವಾಸನೆ ನೀಡುತ್ತಾರೆ. ಇದುವರೆಗೂ ಯಾವುದೇ ಸೌಲಭ್ಯ ಒದಗಿಸುತ್ತಿಲ್ಲ. ಈ ಕಾರಣಕ್ಕೆ ನಾವು ಮಹಾರಾಷ್ಟ್ರ ತೊರೆದು, ಕರ್ನಾಟಕಕ್ಕೆ ಸೇರಲು ಸಿದ್ದರಾಗಿದ್ದೇವೆ’ ಎಂದು ಪ್ರತಿಭಟನಾಕಾರರು ತಿಳಿಸಿದರು.

‘ಶಿಕ್ಷಣ, ಆರೋಗ್ಯ ಸೌಲಭ್ಯಕ್ಕಾಗಿ ನಾವು ದೂರದ ಸಾಂಗ್ಲಿ, ಪುಣೆಗೆ ಹೋಗಬೇಕು. ಆದರೆ, ಸಿದ್ದನಾಥ ಗ್ರಾಮದಿಂದ ಕೇವಲ 40 ಕಿ.ಮೀ. ದೂರದಲ್ಲಿರುವ ವಿಜಯಪುರದಲ್ಲಿ ನಮಗೆ ಎಲ್ಲ ಸೌಲಭ್ಯ ಸಿಗುತ್ತವೆ. ಅಲ್ಲದೇ, ನೀರಾವರಿ ಸೌಲಭ್ಯವೂ ಮಹಾರಾಷ್ಟ್ರದಿಂದ ಸಿಗುತ್ತಿಲ್ಲ. ಗಡಿ ಭಾಗದಲ್ಲಿ ಕರ್ನಾಟಕದಿಂದ ನೀರಾವರಿ ಸೌಲಭ್ಯ ಸಿಗುತ್ತಿರುವುದರಿಂದ ನಾವು ಕರ್ನಾಟಕಕ್ಕೆ ಸೇರಲು ನಿರ್ಣಯಕೈಗೊಂಡಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT