ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಪ್ರಭಾ ಯೋಜನೆ; ಅವವ್ಯಹಾರ ಆರೋಪ ಸುಳ್ಳು: ಎಂ.ಬಿ.ಪಾಟೀಲ ಸ್ಪಷ್ಟತೆ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಸ್ಪಷ್ಟತೆ
Last Updated 10 ಅಕ್ಟೋಬರ್ 2022, 12:46 IST
ಅಕ್ಷರ ಗಾತ್ರ

ವಿಜಯಪುರ:ಮಲಪ್ರಭಾ ಯೋಜನೆಯಡಿ ಅವವ್ಯಹಾರ ನಡೆದಿದೆ ಎಂದು ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಆರೋಪವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದುಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

ಬಬಲೇಶ್ವರ ಕ್ಷೇತ್ರದ ದೇವಾಪುರ ಗ್ರಾಮದಲ್ಲಿ ಬಬಲಾದ-ದೇವರಗೆಣ್ಣೂರ-ಲಿಂಗದಳ್ಳಿ-ದೇವಾಪುರ-ಕೊಡಬಾಗಿವರೆಗೆ ₹ 9 ಕೋಟಿ ವೆಚ್ಚದಲ್ಲಿ 6.10ಕಿ.ಮೀ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರುಮಾತನಾಡಿದರು.

ಕಾಲುವೆಗಳು ಎಲ್ಲೆಲ್ಲಿ ಬರುತ್ತವೆ ಎಂಬುದರ ಬಗ್ಗೆ ಅರಿವೇ ಇಲ್ಲದ ಕಟೀಲ್‌ ತಮ್ಮ ಮನಸ್ಸಿಗೆ ಬಂದಂತೆ ಮಾತಾನಾಡುತ್ತಾರೆ ಅದಕ್ಕೆ ಗಮನ ಕೊಡುವ ಅಗತ್ಯವಿಲ್ಲ ಎಂದರು.

ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಮುಖ್ಯಕಾಲುವೆಗಳನ್ನು ನಿರ್ಮಾಣ ಮಾಡಲಾಗಿದೆ. ನಂತರ ಶಾಖಾ ಕಾಲುವೆಗಳು ಯಡಿಯೂರಪ್ಪನವರ ಅವಧಿಯಲ್ಲಿ ನಿರ್ಮಾಣಗೊಂಡವು. ಆದರೆ, ಮುಖ್ಯಕಾಲುವೆಗಿಂತಲೂ ಹೆಚ್ಚು ಹಣ ಶಾಖಾ ಕಾಲುವೆಗಳಿಗೆ ಬಿಜೆಪಿ ಖರ್ಚು ಮಾಡಿದ್ದಾರೆ. ಇದರಲ್ಲಿ ಯಾರು ಕಮಿಷನ್ ಪಡೆದಿದ್ದಾರೆ ಎಂದು ಗೊತ್ತಾಗುತ್ತದೆ ಎಂದರು.

‘ಸದ್ಯದ ಸರ್ಕಾರ ಆರ್ಥಿಕ ಪರಿಸ್ಥಿತಿಯನ್ನು ಗಂಭೀರ ಸ್ಥಿತಿಗೆ ತಂದಿದೆ. ಸರ್ಕಾರದ ಬಳಿ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲ. ಈ ಹಿಂದೆ ಮಾಡಿದ ಅಭಿವೃದ್ಧಿ ಯೋಜನೆಗಳ ಬಾಕಿ ಬಿಲ್‌ ಬಿಡುಗಡೆಗೊಳಿಸದೇ ಹೊಸ ಯೋಜನೆಗಳಿಗೆ ಸಿದ್ಧತೆ ನಡೆದಿದ್ದಾರೆ. ಇವುಗಳಿಂದ ಟೆಂಡರ್ ಪಡೆದ ಗುತ್ತಿಗೆದಾರರು ಬಿಲ್ ದೊರಕದೆ ಸಾಲಕ್ಕೆ ಮೊರೆ ಹೋಗಿ, ನಂತರ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.

ಪ್ರತಿ ಬಾರಿ ಅಭಿವೃದ್ಧಿಗಾಗಿ ನನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಲ್ಲಿ ಕನಿಷ್ಠ ಶೇ 50 ರಷ್ಟು ಅನುದಾನವನ್ನು ಮಮದಾಪುರ ಹೋಬಳಿಗೆ ಮೀಸಲಿಟ್ಟಿದ್ದೇನೆ. ನಂತರ ಉಳಿದ ಅನುದಾನವನ್ನು ತಿಕೋಟಾ ಮತ್ತು ಬಬಲೇಶ್ವರ ಹೋಬಳಿಗಳಿಗೆ ವ್ಯಯಿಸಲಾಗುತ್ತಿದೆ. ದೊಡ್ಡ ಮೊತ್ತದ ಈ ಅನುದಾನದಲ್ಲಿ ಗುಣಮಟ್ಟ ರಸ್ತೆ ಕಾಮಗಾರಿಗಳನ್ನು ಮಾಡಿಸುತ್ತೇನೆ. ರಸ್ತೆ ನಿರ್ಮಾಣವಾಗುವುದಕ್ಕಿಂತ ಮುಂಚೆ ನೀರಿನ ಪೈಪ್, ವಿದ್ಯುತ್ ತಂತಿ ಅಳವಡಿಕೆಗೆ ಅವಕಾಶವಿದೆ ನಂತರ ಅವಕಾಶವಿಲ್ಲ. ನೀರು ನಿಲ್ಲುವ ಸ್ಥಳಗಳಲ್ಲಿ ಕಾಂಕ್ರಿಟ್ ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕಾಗಿ ಸಾರ್ವಜನಿಕರು ಸಹಕರಿಸಬೇಕು ಎಂದರು.

ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಎಚ್.ಮುಂಬಾರೆಡ್ಡಿ, ನಂದಿ ಸಕ್ಕರೆ ಕಾರ್ಖಾನೆ ಮಾಜಿ ಸದಸ್ಯ ಎಚ್.ಎಸ್.ಕೋರಡ್ಡಿ, ನಿವೃತ್ತ ಶಿಕ್ಷಕ ವಿ.ವಿ.ಅರಕೇರಿ, ಗುತ್ತಿಗೆದಾರ ಮುಜುಮದಾರ, ಮುಖಂಡರಾದ ಟಿ.ಆರ್.ಪಚ್ಚೇನವರ, ಕೃಷ್ಣಾಜಿ ಕುಲಕರ್ಣಿ, ಮಲ್ಲಿಕಾರ್ಜುನ ಗಂಗೂರ, ಪಂಚಯ್ಯ ಹಿರೇಮಠ, ಬಸನಗೌಡ ಪಾಟೀಲ, ಶಿವನಗೌಡ ಪಾಟೀಲ ತಾಜಪೂರ, ಸಂಗಮೇಶ ನಾಯ್ಕರ, ಗೌಡಪ್ಪಗೌಡ ಪಾಟೀಲ, ರಮೇಶ ಜೈನಾಪುರ, ರವಿ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT