ಭಾನುವಾರ, ಮೇ 29, 2022
23 °C
ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ದೇವಸ್ಥಾನ ಆದಾಯ ಸೋರಿಕೆ ತಡೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿರುವ ದೇವಸ್ಥಾನಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಹಣ ಸೋರಿಕೆ ತಡೆಯಲು ಕ್ರಮಕೈಗೊಳ್ಳಬೇಕು ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಧರ್ಮದಾಯ ದತ್ತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರದ ಅಧಿಸೂಚಿತ ‌ಜಿಲ್ಲೆಯ ‘ಬಿ’ ಮತ್ತು ‘ಸಿ’ ದರ್ಜೆಯ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಮಂಡಳಿ ರಚನೆ ಮಾಡುವಂತೆ ತಿಳಿಸಿದರು.

ಅರ್ಚಕರ ಸಮಸ್ಯೆಗಳು, ದೇವಸ್ಥಾನಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕಲ್ಪಿಸಲು ವ್ಯವಸ್ಥಾಪನಾ ಮಂಡಳಿಗಳ ರಚನೆಯ ಜೊತೆಗೆ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯನ್ನು ಪ್ರತಿ ತಿಂಗಳು ನಡೆಸಲು ಕ್ರಮಕೈಗೊಳ್ಳಬೇಕು ಮತ್ತು ಅರ್ಚಕರ ಸಮಾವೇಶ ಮಾಡುವ ಕುರಿತು ಸಿದ್ಧತೆ ಮಾಡಿಕೊಳ್ಳುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ಸರ್ಕಾರಿ ಅಧೀನದ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಆಸ್ತಿಪಾಸ್ತಿ, ಭೂ ಒತ್ತುವರಿ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರದ ಆಸ್ತಿ ಬೇರೆಯವರ ಪಾಲಾಗದಂತೆ ನೋಡಿಕೊಳ್ಳಬೇಕು ಎಂದರು.

‘ಸಿ’ ದರ್ಜೆಯ ದೇವಸ್ಥಾನಗಳ ಸಮೀಕ್ಷೆ ನಡೆಸಿ ಆಡಳಿತಾಧಿಕಾರಿ ಇಲ್ಲದ ಕಡೆ ಆಡಳಿತ ಮಂಡಳಿ ರಚಿಸಬೇಕು. ಈ ಮೂಲಕ ದೇವಸ್ಥಾನಗಳ ಆಸ್ತಿ ಪಾಸ್ತಿ ರಕ್ಷಣೆ ಮಾಡುವಂತೆ ಸಲಹೆ ನೀಡಿದರು.

ಸರ್ಕಾರಿ ದೇವಸ್ಥಾನಗಳಿಗೆ ಬರುವ ಕಾಣಿಕೆ ಮತ್ತು ಹುಂಡಿಯನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸುವಂತಾಗಬೇಕು ಎಂದರು.

ಮುದ್ದೇಬಿಹಾಳದ ಯಲಗೂರೇಶ್ವರ ದೇವಸ್ಥಾನಕ್ಕೆ ಸರ್ಕಾರದಿಂದ ನೇಮಿಸಿದ ವ್ಯವಸ್ಥಾಪನ ಸಮಿತಿ ರಚನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಪವಾಡ ಬಸವೇಶ್ವರ ದೇವಸ್ಥಾನಕ್ಕೆ ಭದ್ರತೆ, ಮೂಲಸೌಕರ್ಯ ಭಕ್ತಾದಿಗಳ ಹುಂಡಿ ಮತ್ತು ಕಾಣಿಕೆಯ ಬಗ್ಗೆ ನಿಖರ ಮಾಹಿತಿಯನ್ನು ಇಟ್ಟುಕೊಂಡು, ದೇವಸ್ಥಾನದ ಅಭಿವೃದ್ಧಿಗೆ ಸದ್ಬಳಕೆಯಾಗುವಂತೆ ನೋಡಿಕೊಳ್ಳಲು ಸೂಚಿಸಿದರು. 

ಶಾಸಕರಾದ ಎ.ಎಸ್ ಪಾಟೀಲ ನಡಹಳ್ಳಿ, ದೇವಾನಂದ ಚವ್ಹಾಣ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ಈರಣ್ಣ ಆಶಾಪೂರ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ ಸಭೆಯಲ್ಲಿ ಉಪಸ್ಥಿತರಿದ್ದರು.

***

ಸರ್ಕಾರದ ಕೋವಿಡ್-19 ನಿಯಮಗಳನ್ನನುಸರಿಸಿ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಪ್ರವೇಶ ನೀಡಬೇಕು ಹಾಗೂ ಜಾತ್ರೆಗಳಿಗೂ ಅವಕಾಶ ನೀಡಬೇಕು
–ಕೋಟ ಶ್ರೀನಿವಾಸ ಪೂಜಾರಿ
ಧಾರ್ಮಿಕ ದತ್ತಿ ಸಚಿವ  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.