ಮಂಗಳವಾರ, ಜನವರಿ 31, 2023
19 °C
ಬಿಜೆಪಿ ಶಾಸಕ ಯತ್ನಾಳಗೆ ಸಚಿವ ಮುರುಗೇಶ ನಿರಾಣಿ ಸವಾಲು

ಏನ್‌ ಹುಡುಗಾಟ ಹಚ್ಚೀ? ತಾಕತ್ತಿದ್ದರೆ ಚುನಾವಣೆ ಗೆಲ್ಲು.. ಯತ್ನಾಳ್‌ಗೆ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ‘ನಿನಗೆ ತಾಕತ್ತಿದ್ದರೇ ಈ ಬಾರಿ ಎಲೆಕ್ಷನ್‌ ಗೆದ್ದು ಬಾ, ನಿನಗೆ ಕಾಲ ಕೂಡಿ ಬಂದಿದೆ, ಇನ್ನು ಮೂರು ತಿಂಗಳು ಬಾಕಿ ಇದೆ, ವಿಜಯಪುರ ಮತದಾರರು ನಿನಗೆ ಪಾಠ ಕಲಿಸಲು ಸಜ್ಜಾಗಿದ್ದಾರೆ, ಕಾದು ನೋಡು’ ಎಂದು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ತಮ್ಮದೇ ಸಮಾಜದ ಹಾಗೂ ಪಕ್ಷದ ಶಾಸಕ ಬಸವನಗೌಡ ಪಾಟೀಲ ಯತ್ನಾಳಗೆ ಸವಾಲು ಹಾಕಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ವಿಜಯಪುರ ನಗರ ಬಿಜೆಪಿ ಟಿಕೆಟ್‌ ಯಾರಿಗೆ ಸಿಗುತ್ತದೆ ಎಂದು ನೋಡೋಣ? ನನ್ನ ಬಳಿ ಅಧಿಕಾರ ಇದ್ದರೆ ಈಗಲೇ ಹೇಳುತ್ತಿದ್ದೆ’ ಎಂದರು.

‘ಮುಖ್ಯಮಂತ್ರಿ ಬೊಮ್ಮಾಯಿ, ಮುಖಂಡರಾದ ಬಿ.ಎಸ್‌. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಹರಿಹರ ಪೀಠ ಮತ್ತು ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೇ ಇನ್ನು ಮುಂದೆ ಸರಿ ಇರುವುದಿಲ್ಲ, ಏನ್‌ ಹುಡುಗಾಟ ಹಚ್ಚೀ?’ ಎಂದು ಏಕ ವಚನದಲ್ಲೇ ತರಾಟೆಗೆ ತೆಗೆದುಕೊಂಡರು.

‘ಬೊಮ್ಮಾಯಿ ತಾಯಿ ಆಣೆ ಮಾಡಿದ್ದಾರೆ, ತಂದೆ ಆಣೆ ಮಾಡಿದ್ದಾರೆ, ಮೋಸ ಮಾಡಿದ್ದಾರೆ ಎಂದು ಲೂಸ್‌ ಟಾಕ್‌ ಆಡುವುದನ್ನು ಬಿಡು. ಇನ್ನು ಮುಂದೆ ಮಾತನಾಡುವಾಗ ಎಚ್ಚರ ಇರಲಿ’ ಎಂದು ತಾಕೀತು ಮಾಡಿದರು.

‘ನಾನೂ ಇದೇ ಜಿಲ್ಲೆಯವನು, ಕೃಷ್ಣಾ ನದಿ ನೀರು ಕುಡಿದು ಬೆಳೆದಿದ್ದೇನೆ, ಇಲ್ಲೇ ನನ್ನ ಎಲ್ಲ ಸಂಬಂಧಗಳಿವೆ. ನಿನಗೆ ಗೊತ್ತಿರುವ ಭಾಷೆ, ಬೈಗುಳಕ್ಕಿಂತ ಹೆಚ್ಚು ನನಗೂ ಗೊತ್ತಿವೆ, ಹಾಗಂತ ನಾನು ಬಳಸುವುದಿಲ್ಲ’ ಎಂದರು. 

‘ರಾಜಕಾರಣಕ್ಕೆ ಬರುವ ಮೊದಲು ನೀವು ಹೇಗಿದ್ದೀರಿ? ಯಾವ ಫುಟ್‌ ಪಾತ್‌ ಮೇಲೆ ನಿಲ್ಲುತ್ತಿದ್ದೀರಿ? ಎಲ್ಲಿ ಕೂರುತ್ತಿದ್ದಿರೀ? ಯಾವ ಗಾಡಿ ಹೊಡಿತಿದ್ದಿರೀ? ಎಂಬುದನ್ನು ಆತ್ಮಾವಲೋಕ ಮಾಡಿಕೊಳ್ಳಿ’ ಎಂದು ಕೆಣಕಿದರು.

‘ಪಂಚಮಸಾಲಿ ಮತ್ತು ಬಣಜಿಗ ಸಮಾಜದವರು ಹಿಂದಿನಿಂದ ಅಣ್ಣತಮ್ಮಿಂದಿಯರ ರೀತಿ ಬಂದಿದ್ದೇವೆ. ಯಾವುದೇ ಸಮಾಜದ ಜೊತೆ ಬೇಧಬಾವ ಇಲ್ಲದೇ ನಡೆದಕೊಂಡು ಬಂದಿದ್ದೇವೆ. ಸಭೆ, ಸಮಾರಂಭದಲ್ಲಿ ಅನ್ಯ ಸಮಾಜದ ಬಗ್ಗೆ ಹಗರುವಾಗಿ ಮಾತನಾಡಿ, ಚಪ್ಪಾಳೆ ಹೊಡೆಸಿಕೊಳ್ಳುವುದು ಬಿಡಿ. ನಿಮ್ಮ ಮಾತುಗಳಿಂದ ಇಡೀ ಪಂಚಮಸಾಲಿ ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದೆ’ ಎಂದು ಹೇಳಿದರು.

‘ಹಿರಿಯ ಮಾತಿಗೆ ಗೌರವ ಕೊಟ್ಟು ಇಲ್ಲಿವರೆಗೆ ನಿಮ್ಮ ಟೀಕೆ, ಬೈಗುಳಗಳಿಗೆ ಉತ್ತರ ನೀಡದೇ ಸುಮ್ಮನಿದ್ದೇ. ಇದು ನನ್ನ ದೌರ್ಬಲ್ಯ ಅಲ್ಲ‘ ಎಂದು ಹೇಳಿದರು.

‘ಬೇರೆ ಪಕ್ಷದಲ್ಲಿ ಇದ್ದಾಗ ಟೊಪ್ಪಿ ಹಾಕಿಕೊಂಡು ಹಿಂದುಗಳನ್ನು ಬೈಯ್ದಿದ್ದೀರಿ, ಈಗ ಟೊಪ್ಪಿ ತೆಗೆದು ಅವರನ್ನೇ ಬೈಯುತ್ತಿದ್ದೀರಿ, ನಿಮಗೆ ಎರಡು ನಾಲಿಗೆ ಇವೆಯೇ’ ಎಂದು ಪ್ರಶ್ನಿಸಿದರು.

‘ನಿರಾಣಿಗೆ ಪಕ್ಷ ಮತ್ತು ಸಮಾಜ ಎರಡನೇ ತಾಯಿ ಇದ್ದ ಹಾಗೆ. ಎಂದೂ ಪಕ್ಷ ಬಿಟ್ಟು ಹೋಗಿಲ್ಲ, ಸಮಾಜದ ಬಗ್ಗೆ ಒಡಕಿನ ಮಾತು ಆಡಿಲ್ಲ’ ಎಂದರು.

‘ಕಾರ್ಖಾನೆ ಸ್ಥಾಪಿಸಿ ಇನ್ನೊಬ್ಬರನ್ನು ನಿರ್ದೇಶಕನನ್ನಾಗಿ ಮಾಡಿ ಟೊಪ್ಪಿ ಹಾಕಿ ಬಂದಿಲ್ಲ, ಹಾಲಿನ ಡೇರಿ ಮಾಡಿ ಷೇರು ತೆಗೆದುಕೊಂಡು ಓಡಿ ಹೋಗಿಲ್ಲ, ವಸತಿ ಶಾಲೆ ಮಾಡಿ ಯಾರ ಕೊರಳಿಗೆ ಕಟ್ಟಿಲ್ಲ. ನಿರಾಣಿ ಗ್ರೂಪ್‌ನಲ್ಲಿ ಒಂದೇ ಒಂದು ಪೈಸೆ ಯಾರ ಷೇರು ಇಲ್ಲ. ಯಾರ ಹೊಲ, ಮನೆ ಮೇಲೆ ಒಂದು ರೂಪಾಯಿ ಸಾಲ ತೆಗೆದಿಲ್ಲ. ಎಲ್ಲವನ್ನು ಮರುಪಾವತಿ ಮಾಡುತ್ತಿದ್ದೇನೆ. ಯಾರಿಗೂ ಕೈ ಎತ್ತಿ ಓಡಿ ಹೋಗಿಲ್ಲ. ಹೀಗಾಗಿ ನಾನು ಬೇಡಿದಷ್ಟು ಸಾಲ ಬ್ಯಾಂಕುಗಳಿಂದ ಲಭಿಸುತ್ತಿದೆ, ಸಂಘ, ಸಂಸ್ಥೆ ಮಾಡಿ ಬೇರೆಯವರ ರೊಕ್ಕ ಹಾಕಿ ನಾನು ಗಾಡಿ ತೆಗೆದುಕೊಂಡು ಅಡ್ಡಾಡುತ್ತಿಲ್ಲ. 21 ಕಾರ್ಖಾನೆ ಕಟ್ಟಿದ್ದೇನೆ, 72 ಸಾವಿರ ಜನಕ್ಕೆ ಉದ್ಯೋಗ ನೀಡಿದ್ದೇನೆ’ ಎಂದರು.

‘ಪಂಚಮಸಾಲಿ ಸಮಾಜದ ಮೂರು ಪೀಠ ಆಗಲು ನನ್ನ ಅಳಿಲು ಸೇವೆ ಇದೆ. ಎಲ್ಲ ಪೀಠಕ್ಕೂ ನನ್ನ ಕೊಡುಗೆ ಇದೆ. ಸಮಾಜಕ್ಕೆ ನಿಮ್ಮ ಕೊಡುಗೆ ಏನು’ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಸುರೇಶ ಬಿರಾದಾರ, ಚಂದ್ರಶೇಖರ ಕವಟಗಿ, ಭೀಮಾಶಂಕರ ಹದನೂರ, ವಿವೇಕಾನಂದ ಡಬ್ಬಿ, ರಾಜೇಶ್‌ ತೌಸೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು