ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸೌಲಭ್ಯ ದುರ್ಬಳಕೆ ಸಹಿಸಲಾಗದು- ಎ.ಎಸ್.ಪಾಟೀಲ ನಡಹಳ್ಳಿ

ಗ್ರಾಪಂ ಮಟ್ಟದ ವಸತಿ ಯೋಜನೆ ಫಲಾನುಭವಿಗಳ ಸಭೆ: ಮಹಿಳೆಯರಿಗೆ ಬಟ್ಟೆ ವಿತರಿಸಿದ ಶಾಸಕ ನಡಹಳ್ಳಿ
Last Updated 4 ಜುಲೈ 2022, 16:02 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಸರ್ಕಾರದ ಸೌಲಭ್ಯಗಳು ಇರುವುದು ಬಡಜನರಿಗೆ, ದೀನದಲಿತರಿಗೆ. ಇಂಥ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುವವರು ಯಾರೇ ಆಗಿದ್ದರೂ ಸಹಿಸುವುದಿಲ್ಲ. ಪ್ರಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಎಚ್ಚರಿಕೆ ನೀಡಿದರು.

ಇಲ್ಲಿನ ದಾಸೋಹ ನಿಲಯದಲ್ಲಿ ಸೋಮವಾರ ಏರ್ಪಡಿಸಿದ್ದ ವಿವಿಧ ಗ್ರಾ.ಪಂ.ನ ವಸತಿ ಯೋಜನೆಗಳಡಿ ಆಯ್ಕೆಯಾಗಿರುವ ಫಲಾನುಭವಿಗಳ ಸಭೆ ಮತ್ತು ಅವರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಸತಿ ನಿವೇಶನ, ಮನೆ ಮತ್ತು ಮನೆ ಕಟ್ಟಿಕೊಳ್ಳಲು ಸರ್ಕಾರ ವಸತಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಅರ್ಹರಿಗೆ ತಲುಪಬೇಕು. ಅರ್ಹರು ತಮಗೆ ನಿವೇಶನ, ಮನೆ ಅಥವಾ ಮನೆ ಕಟ್ಟಿಕೊಳ್ಳಲು ಸಹಾಯಧನ ಬೇಕಾದರೆ ನೇರವಾಗಿ ಸಂಬಂಧಿಸಿದವರಿಗೆ ದಾಖಲೆ ಸಮೇತ ಅರ್ಜಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೊರೆ ಹೋಗುವುದಾಗಲಿ, ಅವರಿಗೆ ಲಂಚ ಕೊಡುವುದಾಗಲಿ ಮಾಡಬಾರದು. ಒಂದು ವೇಳೆ ಲಂಚ ಕೊಟ್ಟದ್ದು ನನ್ನ ಗಮನಕ್ಕೆ ಬಂದರೆ ಅಂಥವರಿಗೆ ಸರ್ಕಾರದ ಸೌಲಭ್ಯಗಳನ್ನೇ ಕೊಡಿಸುವುದಿಲ್ಲ. ಮೊದಲು ಫಲಾನುಭವಿಗಳು ಜಾಗೃತರಾದರೆ ಲಂಚದ ಹಾವಳಿ ತಾನಾಗೇ ನಿಂತು ಹೋಗುತ್ತದೆ ಎಂದು ಕಿವಿಮಾತು ಹೇಳಿದರು.

ಓಟು ಹಾಕಿದವರು, ಹಾಕದವರು ಎನ್ನುವ ಭೇದ ಮಾಡೋದಿಲ್ಲ. ಮತಕ್ಷೇತ್ರದ 2.50 ಲಕ್ಷ ಜನರೂ ನನ್ನವರು ಎಂದು ಭಾವಿಸಿ ಎಲ್ಲರಿಗೂ ಸಮಾನ ಅವಕಾಶ ಒದಗಿಸಿಕೊಡುವ ಜವಾಬ್ಧಾರಿ ನನ್ನದು ಎಂದರು.

ಬಟ್ಟೆ ವಿತರಣೆ:

ಶಾಸಕರು ಪ್ರತಿಯೊಬ್ಬರಿಗೂ ಬಟ್ಟೆ ನೀಡಿ ಶುಭ ಕೋರಿದರು. ಅಂದಾಜು 400ವರೆಗೆ ಮಹಿಳೆಯರು ಪ್ರಯೋಜನ ಪಡೆದುಕೊಂಡರು.

ನೆರವು:

ಕಾಳಗಿ ಗ್ರಾಮದ ಮಹಿಳೆ ಚಂದ್ರವ್ವ ಕೂಡಗಿ ಎಂಬುವವರು ಇರಲು ಮನೆ ಇಲ್ಲ. ಹಿರಿಯರ ಹೆಸರಿನಲ್ಲಿರುವ ಮನೆಯಲ್ಲೇ ವಾಸವಿದ್ದು ಅದರ ತಗಡು, ಒಂದು ಬದಿಯ ಗೋಡೆ ಕುಸಿದು ಬಿದ್ದಿದೆ. ನನ್ನ ಗಂಡ ತೀರಿ ಹೋಗಿದ್ದಾನೆ. ಇದ್ದೊಬ್ಬ ಮಗಳ ಮದುವೆ ಮಾಡಿಕೊಟ್ಟರೂ ಆಕೆಯ ಗಂಡನೂ ತೀರಿ ಹೋಗಿದ್ದರಿಂದ ಆಕೆ ಈಗ ನನ್ನ ಹತ್ತಿರವೇ ಇದ್ದಾಳೆ. ನಮಗೊಂದು ಸೂರು ದೊರಕಿಸಿಕೊಡಿ ಎಂದು ಅಲವತ್ತುಕೊಂಡು ಕಣ್ಣೀರು ಸುರಿಸಿದಳು.

ಮಹಿಳೆಯ ಸಂಕಷ್ಟ ಆಲಿಸಿದ ಶಾಸಕರು ಸ್ಥಳಲ್ಲೇ ₹10 ಸಾವಿರ ನಗದು ವಿತರಿಸಿದರು. ಸರ್ಕಾರದ ಸೌಲಭ್ಯ ಒದಗಿಸುವಂತೆ ಪಿಡಿಓ ಹಿರೇಕುರುಬರಗೆ ಸೂಚಿಸಿದರು.

₹ 35 ಲಕ್ಷ ನೆರವು:

ಪುರಸಭೆ ಸದಸ್ಯೆ ಮತ್ತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್‍ನ ನಾಮ ನಿರ್ದೇಶಿತ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಮೃತ ಯೋಜನೆ ಅಡಿ ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಮೀಕ್ಷೆ ನಡೆಸಿ ರಚಿಸಲಾಗಿರುವ ಸ್ತ್ರೀ ಶಕ್ತಿ ಸಂಘಗಳಿಗೆ ಪ್ರತಿಯೊಂದಕ್ಕೆ ತಲಾ ₹ 1 ಲಕ್ಷದಂತೆ ಒಟ್ಟು ₹ 35 ಲಕ್ಷ ಆರ್ಥಿಕ ನೆರವು ಮಂಜೂರಾಗಿದೆ. ಇದಕ್ಕೆ ಶಾಸಕ ನಡಹಳ್ಳಿಯವರ ಪ್ರಯತ್ನ ಕಾರಣವಾಗಿದೆ ಎಂದರು.

ತಾಪಂ ಇ.ಓ ಶಿವಾನಂದ ಹೊಕ್ರಾಣಿ, ಪಿಡಿಓಗಳಾದ ಆನಂದ ಹಿರೇಮಠ, ಪಿ.ಎಸ್.ಕಸನಕ್ಕಿ, ವೀರೇಶ ಹೂಗಾರ ಇದ್ದರು.

ನಾಗರಬೆಟ್ಟ, ಹಿರೇಮುರಾಳ, ತಂಗಡಗಿ, ಆಲೂರ, ಢವಳಗಿ, ಕಾಳಗಿ ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳು, ಆಯಾ ಪಂಚಾಯಿತಿಯ ಕಾರ್ಯದರ್ಶಿಗಳು ಸೇರಿ ಹಲವರು ಉಪಸ್ಥಿತರಿದ್ದರು.

*****
ಚುನಾವಣೆ ಬಂದಾಗ ಮಾತ್ರ ರಾಜಕೀಯ ಚರ್ಚಿಸೋಣ. ಉಳಿದ ದಿನಗಳಲ್ಲಿ ಅಭಿವೃದ್ಧಿ ಮತ್ತು ಸರ್ವರಿಗೂ ಸಮಬಾಳು, ಸಮಪಾಲು ಅನ್ನೋ ಸಂವಿಧಾನದ ಆಶಯವನ್ನು ಈಡೇರಿಸೋಣ. ಇದಕ್ಕೆ ನೀವೆಲ್ಲ ನನಗೆ ಶಕ್ತಿ ತುಂಬಬೇಕು.
-ಎ.ಎಸ್.ಪಾಟೀಲ ನಡಹಳ್ಳಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT