ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಿರ್ವಹಣೆ ನನ್ನ ಜವಾಬ್ದಾರಿ, ಜನರ ಜೀವನವೇ ನನಗೆ ಮುಖ್ಯ: ಯತ್ನಾಳ

Last Updated 29 ಏಪ್ರಿಲ್ 2021, 15:25 IST
ಅಕ್ಷರ ಗಾತ್ರ

ವಿಜಯಪುರ: ‘ನನ್ನ ಮತಕ್ಷೇತ್ರದ ಜನರ ಜೀವನವೇ ನನಗೆ ಮುಖ್ಯ. ಕೊರೊನಾದಿಂದ ತೀವ್ರತರವಾದ ಪರಿಣಾಮ ಆಗದಂತೆ ನೋಡಿಕೊಳ್ಳುವುದು ಈ ಕ್ಷೇತ್ರದ ಶಾಸಕನಾದ ನನ್ನ ಜವಾಬ್ದಾರಿ. ಅದಕ್ಕಾಗಿ ಎಲ್ಲರಿಗೂ ಲಸಿಕೆ ಹಾಕಿಸಲು ಶ್ರಮಿಸುತ್ತಿರುವೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಜಲನಗರದ ಶಿವಶರಣೆ ನಿಂಬಕ್ಕ ಸಭಾ ಭವನದಲ್ಲಿ ಹಾಗೂ ನೇತಾಜಿ ಸುಭಾಸಚಂದ್ರ ಭೋಸ್ ರಸ್ತೆಯ ಐಯ್ಯಪ್ಪಸ್ವಾಮಿ ನಗರದ ಶಿವಾಲಯ ಗುಡಿ ಆವರಣದಲ್ಲಿ ಉಚಿತ ಕೋವಿಡ್ ಲಸಿಕೆ ಆಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಒಂದು ಕಡೆ ಲಸಿಕೆ ಕಾರ್ಯಕ್ರಮ ಮಾಡುತ್ತಿದ್ದು, ಇನ್ನೋಂದಡೆ ಕೋವಿಡ್ ರೋಗಿಗಳಿಗಾಗಿ ಬೆಡ್ ಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಕಳೆದ 15 ದಿನಗಳಿಂದ ವಜ್ರ ಹನುಮಾನ್‌ ನಗರದಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳೊಂದಿಗೆ ಪ್ರಾರಂಭ ಮಾಡಿದ್ದು, ಇದುವರೆಗೆ ನಗರದಲ್ಲಿ ಶೇ 52 ರಷ್ಟು ಜನರು ಲಸಿಕೆ ಪಡೆದುಕೊಂಡಂತಾಗಿದೆ. ಇದಕ್ಕೆ ನಮ್ಮ ಎಲ್ಲ ಆರೋಗ್ಯ ಅಧಿಕಾರಿಗಳು, ನಿರಂತರವಾಗಿ ಜನರನ್ನು ಲಸಿಕಾ ಕೇಂದ್ರಕ್ಕೆ ಕರೆ ತರುವ ಮೂಲಕ ಲಸಿಕೆ ಪಡೆಯುವಂತೆ ಮಾಡಿದ ಸಿದ್ದೇಶ್ವರ ಸಂಸ್ಥೆ ಮತ್ತು ಸಿದ್ಧಸಿರಿ ಸೌಹಾರ್ದ ಸಹಕಾರಿ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾಗಿದೆ' ಎಂದರು.

'ಲಸಿಕೆ ಪಡೆದ ಎಲ್ಲರೂ ಈ ರೋಗದಿಂದ ಪಾರಾಗಬಹುದಾಗಿದ್ದು, ಲಸಿಕೆ ಪಡೆದಾಗಲೂ ಸಹ ಕೆಲವೊಮ್ಮೆ ರೋಗ ಲಕ್ಷಣ ಕಾಣಬಹುದು. ಆದರೆ, ಪ್ರಾಣಕ್ಕೆ ಏನು ತೊಂದರೆಯಾಗುವುದಿಲ್ಲ. ತೀವ್ರ ಸ್ವರೂಪದ ಅಪಾಯಗಳಾಗುವುದಿಲ್ಲ, ರೋಗದಿಂದ ಆರೋಗ್ಯದಲ್ಲಿ ತೀವ್ರ ತೊಂದರೆಯಾಗುವುದನ್ನು ತಪ್ಪಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ತಪ್ಪದೆ ಸಲಿಕೆ ಪಡೆಯಿರಿ' ಎಂದು ಸಲಹೆ ನೀಡಿದರು.

‘ಸಿದ್ಧೇಶ್ವರ ಸಂಸ್ಥೆ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಹಯೋಗದಲ್ಲಿ ಸೊಲ್ಲಾಪುರ ರಸ್ತೆಯ ಜೈನ್ ಕಾಲೇಜಿನಲ್ಲಿ 100 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ. ಸಿದ್ದೇಶ್ವರ ಸಂಸ್ಥೆಯ ಈಶ್ವರಗೌಡ ಪಾಟೀಲ ಯತ್ನಾಳ ಡಯಾಲಿಸೆಸ್ ಸೆಂಟರ್ ನಲ್ಲಿ ಕೋವಿಡ್ ರೋಗಿಗಳಿಗಾಗಿ 27 ಬೆಡ್, ಆಕ್ಷಿಜನ್ ಹಾಗೂ ವೆಂಟಿಲೇಟರ್ ಹಾಗೂ ಊಟ ಉಪಹಾರದ ವ್ಯವಸ್ಥೆ ಇರುವಂತಹ ಸುಸಜ್ಜಿತವಾದಂತಹ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೆರಡು ದಿನದಲ್ಲಿ ಅದು ಸಹ ಪ್ರಾರಂಭವಾಗಲಿದೆ’ ಎಂದು ಮಾಹಿತಿ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಕವಿತಾ ದೊಡ್ಡಮನಿ, ಮುಖಂಡರಾದ ಚಂದ್ರು ಚೌಧರಿ, ಶ್ರೀನಿವಾಸ ಬೆಟಗೇರಿ, ಸಂತೋಷ ಪಾಟೀಲ, ಪಾಂಡುಸಾಹುಕಾರ ಡೊಡ್ಡಮನಿ, ಸಂತೋಷ ತಳಕೇರಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT