ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ ಚುನಾವಣೆ; ಬಹಿರಂಗ ಪ್ರಚಾರಕ್ಕೆ ತೆರೆ

ವಿಜಯಪುರ–ಬಾಗಲಕೋಟೆ ದ್ವಿಸದಸ್ಯ ಕ್ಷೇತ್ರ
Last Updated 7 ಡಿಸೆಂಬರ್ 2021, 13:39 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ–ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ದ್ವಿ ಸದಸ್ಯ ಕ್ಷೇತ್ರಕ್ಕೆ ಡಿ.10ರಂದು ನಡೆಯಲಿರುವ ಚುನಾವಣಾ ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆ ಬಿದ್ದಿದೆ.

ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಏಳು ಅಭ್ಯರ್ಥಿಗಳು ಕಣದಲ್ಲಿದ್ದು, ಚುನಾವಣಾ ಕಣ ರಂಗು ಪಡೆದಿದೆ. ಈಗಾಗಲೇ ಭರ್ಜರಿ ಪ್ರಚಾರ ನಡೆಸಿರುವ ಅಭ್ಯರ್ಥಿಗಳು ಮತದಾರರ ಓಲೈಕೆಗೆ ಕೊನೆಯ ಕಸರತ್ತು ಆರಂಭಿಸಿದ್ದಾರೆ.

ಅಗತ್ಯ ಕ್ರಮ:

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಚುನಾವಣಾಧಿಕಾರಿ ಪಿ.ಸುನೀಲ್‌ಕುಮಾರ್‌,ಡಿ.10ರಂದುನ್ಯಾಯ ಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆಯಾ ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ. ಚುನಾವಣಾ ಅಕ್ರಮ ತಡೆಯುವ ನಿಟ್ಟಿನಲ್ಲಿ ಎಫ್ ಎಸ್ ಟಿ ಹಾಗೂ ವಿ ಎಸ್ ಟಿ ಮತ್ತು ಎಂ ಸಿ ಸಿ ತಂಡಗಳು ಕಾರ್ಯಪ್ರವೃತ್ತವಾಗಿದ್ದು, ಯಾವುದೇ ರೀತಿಯ ದೂರುಗಳಲ್ಲಿದ್ದಲ್ಲಿ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಲಿಖಿತವಾಗಿ ಸಲ್ಲಿಸಲು ಅವರು ಸೂಚನೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ಅನಕ್ಷರಸ್ಥ, ಅಂಧ ಹಾಗೂ ಅಸ್ವಸ್ಥ ಮತದಾರರು ಜೊತೆಗಾರರೊಬ್ಬರನ್ನು ಪಡೆಯುವ ಸಂದರ್ಭದಲ್ಲಿ ಚುನಾವಣಾ ನಿಯಮಾವಳಿಗಳನ್ನು ಪಾಲಿಸಲು ತಿಳಿಸಲಾಗಿದೆ. ಅನಕ್ಷರಸ್ಥ ಮತದಾರರಿಗೂ ಮತದಾನದ ಬಗ್ಗೆ ಸೂಕ್ತ ತರಬೇತಿ ನೀಡಲಾಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮನೆಮನೆಗೆ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಸಿಂಧು ಹಾಗೂ ಅಸಿಂಧು ಮತಗಳ ಬಗ್ಗೆ ಮತದಾರರಲ್ಲಿ ಸೂಕ್ತ ಮನವರಿಕೆ ಮಾಡುವಂತೆ ಅವರು ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ತೀವ್ರ ನಿಗಾ ಇಡಲಾಗುತ್ತದೆ. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣಾ ಮಾರ್ಗಸೂಚಿಗಳನ್ನು ಪಾಲಿಸಬೇಕು. ಮತದಾನ ಮತ್ತು ಮತ ಎಣಿಕೆ ಸಂದರ್ಭದಲ್ಲಿ ಸೂಕ್ತ ನಿಯಮಾವಳಿ ಪಾಲಿಸಬೇಕು ಎಂದರು.

ಮತ ಎಣಿಕೆಯು ನಗರದ ದರ್ಬಾರ್ ಶಾಲೆಯಲ್ಲಿ ಡಿ.14 ರಂದು ನಡೆಯಲಿದ್ದು, 2 ಕೊಠಡಿಗಳಲ್ಲಿ ತಲಾ 7 ಟೇಬಲ್‍ಗಳಂತೆ ಒಟ್ಟು 14 ಟೇಬಲ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.

ಒಂದು ಟೇಬಲ್‍ಗೆ ಒಬ್ಬರು ಏಜೆಂಟರನ್ನು ರಾಜಕೀಯ ಪಕ್ಷಗಳವರು ನಿಯೋಜಿಸಬೇಕು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ಹಾದಿಮನಿ, ಚೋರಗಸ್ತಿ ಸೇರಿದಂತೆ ವಿವಿಧ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT