ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಮುಂಗಾರು: ಸರ್ವಸನ್ನದ್ಧರಾಗಿರಲು ಸೂಚನೆ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ
Last Updated 26 ಮೇ 2020, 12:36 IST
ಅಕ್ಷರ ಗಾತ್ರ

ವಿಜಯಪುರ: ಹವಾಮಾನ ಇಲಾಖೆ ವರದಿ ಪ್ರಕಾರ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಂಗಾರು ಪ್ರವಾಹ ಮುನ್ನೆಚ್ಚರಿಕಾ ಕ್ರಮದ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ನದಿ ತೀರದಲ್ಲಿ ಮುಳುಗಡೆಯಾಗಬಹುದಾದ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ವಾಸಿಸುವ ಸಾರ್ವಜನಿಕರನ್ನು ಮುಂಚಿತವಾಗಿಯೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಕಂಟ್ರೋಲ್ ರೂಂ ತೆರೆದು 24X7 ಗಂಟೆಗಳ ಕಾಲ ಸಹಾಯವಾಣಿಯನ್ನು ಪ್ರಾರಂಭಿಸಿ ಸಿಬ್ಬಂದಿ ನೇಮಕ ಮಾಡಬೇಕು ಎಂದರು.

ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯಿಂದ ತಾಲ್ಲೂಕುವಾರು ಪ್ರವಾಹ ಮುನ್ನೆಚ್ಚರಿಕೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಕೃಷಿ ತೋಟಗಾರಿಕೆ ಇಲಾಖೆಯವರು ಪ್ರತಿದಿನ ಬೆಳಿಗ್ಗೆ 11 ಗಂಟೆಯೊಳಗೆ ಮಳೆ ವರದಿ ಪ್ರಕೃತಿ ವಿಕೋಪದಿಂದ ಉಂಟಾಗುವ ಮಾನವ ಜಾನುವಾರು, ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ ಮತ್ತು ಮಳೆಗೆ ಬಿದ್ದಿರುವ ಮನೆಗಳ ವರದಿಯನ್ನು ಪ್ರತಿದಿನ ಸಲ್ಲಿಸಬೇಕು ಎಂದರು.

ಪ್ರತಿ ಹಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ, ಪಿಡಿಒ, ಕಾರ್ಯದರ್ಶಿಗಳು ತಮ್ಮ ತಮ್ಮ ಕೇಂದ್ರ ಸ್ಥಾನಲ್ಲಿದ್ದು, ಅತಿವೃಷ್ಟಿಯಿಂದ ತೊಂದರೆಯಾಗುವ ಸಂಭವವಿದ್ದಲ್ಲಿ ಆ ಕುರಿತು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಬೇಕು ಎಂದು ಹೇಳಿದರು.

ಗ್ರಾಮ ಪಂಚಾಯ್ತಿ, ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು. ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದ ಸಮಸ್ಯೆಯಾಗುವ ಪ್ರಸಂಗ ಕಂಡುಬಂದಲ್ಲಿ ಜನರನ್ನು ಎತ್ತರದ ಸ್ಥಳಕ್ಕೆ ಸಾಗಿಸಲು ಹಾಗೂ ಸಮುದಾಯ ಭವನ, ದೊಡ್ಡ ಕಟ್ಟಡಗಳನ್ನು ಗುರುತಿಸಿ ಇಟ್ಟುಕೊಂಡಿರಬೇಕು ಎಂದರು.

ಸಂತ್ರಸ್ತರಿಗೆ ಗಂಜಿಕೇಂದ್ರ ತೆರೆಯಲು ಹಾಗೂ ಅಡುಗೆ ಸಾಮಾನು ವ್ಯವಸ್ಥೆ ಮಾಡಿಕೊಡಬೇಕು. ಬಿಸಿಯೂಟದ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು. ಈಗಲೇ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ನದಿಗಳಲ್ಲಿ ಪ್ರವಾಹ ಉಂಟಾದರೆ ತೀರದ ಹಳ್ಳಿಯ ಜನರ ರಕ್ಷಣೆಗೆ ಬೋಟುಗಳ ಅವಶ್ಯಕತೆ ಬಗ್ಗೆ ಅಗ್ನಿ ಶಾಮಕ ಸಿಬ್ಬಂದಿ ಪರಿಶೀಲಿಸಬೇಕು. ಹೋಂಗಾರ್ಡ್ ಸಿಬ್ಬಂದಿಯನ್ನು ಸಂಪರ್ಕದಲ್ಲಿಟ್ಟುಕೊಂಡು ಜನರ ಸಂರಕ್ಷಣೆಗೆ ನಿಲ್ಲಬೇಕು ಎಂದರು.

ಆರೋಗ್ಯ ಇಲಾಖೆ ಔಷಧಗಳ ದಾಸ್ತಾನು ಮಾಡಿಕೊಳ್ಳಬೇಕು. ದನಕರುಗಳಿಗೆ ಮೇವು, ಔಷಧ ವ್ಯವಸ್ಥೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಹಾವು ಇನ್ನಿತರ ವಿಷ ಜಂತುಗಳ ಕಡಿತದಿಂದ ತೊಂದರೆಗಳಾಗುವ ಜನರಿಗೆ ಸೂಕ್ತ ಔಷಧೋಪಚಾರ ನೀಡಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚಿಸಿದರು.

ಕೆಬಿಜೆಎನ್‍ಎಲ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್‌.ಪಿ. ಕುಲಕರ್ಣಿ ಮಾತನಾಡಿ, ಜಿಲ್ಲೆಯ ಹಾಗೂ ಮಹಾರಾಷ್ಟ್ರದ ಜಲಾಶಯಗಳತ್ತ ದಿನಂಪ್ರತಿ ನಿಗಾ ಇಡಲಾಗಿದ್ದು, ಜಲಾಶಯಗಳ ನೀರಿನ ಪ್ರಮಾಣ, ಶೇಖರಣೆ ಹಾಗೂ ಜಲಾಶಯಗಳಿಂದ ಹರಿಬಿಡುವ ನೀರಿನ ಪ್ರಮಾಣದ ಮೇಲೆ ನಿಗಾ ಇಡಲಾಗಿದೆ. ಆಕಸ್ಮಿಕ ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡದಂತಿರಲು ಕರ್ನಾಟಕ ನೀರಾವರಿ ನಿಗಮಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗುವುದು ಎಂದರು.

ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆಯಾಗಿ ನಾರಾಯಣಪೂರ ಜಲಾಶಯದಲ್ಲಿ 3 ಟಿಎಂಸಿ ಹಾಗೂ ಆಲಮಟ್ಟಿಯಲ್ಲಿ 7 ಟಿಎಂಸಿ ನೀರನ್ನು ಸಂಗ್ರಹಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಇಂಡಿ ಉಪವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT