ವಿಜಯಪುರ: ‘ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಕೀಲ ರವಿ ಮೇಲಿನಮನಿ ಎಂಬುವರನ್ನು ಆಗಸ್ಟ್ 8 ರಂದು ಕಾರಿನಿಂದ ಡಿಕ್ಕಿ ಹೊಡೆದು, ಬಳಿಕ ಎರಡು ಕಿ.ಮೀ. ದೂರ ಶವವನ್ನು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದರು.
‘ಪ್ರಕರಣಕ್ಕೆ ಸಂಬಂಧಿಸಿದಂತೆ ತುಳಸಿರಾಮ ಹರಿಜನ, ಅಲೆಕ್ಸ್ ಗೊಲ್ಲರ, ಷಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ ಮತ್ತು ಮುರುಗೇಶ ಉಳ್ಳಾಗಡ್ಡಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. ಕೊಲೆಯಾದ ವಕೀಲ ರವಿ ಮೇಲಿನಮನಿ ಮತ್ತು ಆರೋಪಿ ತುಳಸಿರಾಮ ಹರಿಜನ ನಡುವೆ ಐದು ತಿಂಗಳ ಹಿಂದೆ ಹೊಡೆದಾಟ ನಡೆದಿತ್ತು. ಆಗ ತುಳಸಿರಾಮಗೆ ರವಿ ಮೇಲಿನಮನಿ ಕೊಲೆ ಬೆದರಿಕೆ ಹಾಕಿದ್ದ. ಅಲೆಕ್ಸ್ ಗೊಲ್ಲರಗೂ ಕೊಲೆ ಬೆದರಿಕೆ ಹಾಕಿದ್ದ. ಆ ಸಿಟ್ಟಿಗೆ ಎಲ್ಲರೂ ಸೇರಿ, ಕೃತ್ಯವಸೆಗಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ’ ಎಂದು ಅವರು ತಿಳಿಸಿದರು.