ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಮಸೀದಿ ದರ್ಶನಕ್ಕೆ ಹಿಂದೂ –ಮುಸ್ಲಿಂ ಸಮಾಗಮ

ನಮಾಜ್‌ನಲ್ಲಿ ಪಾಲ್ಗೊಂಡ ಹಿಂದುಗಳು; ಪುಸ್ತಕ ವಿತರಣೆ
Last Updated 11 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿನ ಮನಗೂಳಿ ರಸ್ತೆಯ ಕೀರ್ತಿ ನಗರದಲ್ಲಿರುವ ‘ಅಲ್‌ ಅಕ್ಸಾ’ ಮಸೀದಿಯಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ‘ಮಸೀದಿ ದರ್ಶನ’ ವಿನೂತನ ಕಾರ್ಯಕ್ರಮವು ಹಿಂದೂ–ಮುಸ್ಲಿಮರ ಸಮಾಗಮಕ್ಕೆ ಸಾಕ್ಷಿಯಾಯಿತು.

ಅಲ್‌ ಅಕ್ಸಾ ಮಸ್‌ಜಿದ್‌ ಉರ್ಫ್‌ ಮಸ್‌ಜಿದ್‌ ಎ ಮನ್‌ ಖಾದರಿ ವೆಲ್‌ಫೇರ್‌ ಸೊಸೈಟಿಯ ಆಹ್ವಾನದ ಮೇರೆಗೆ ಮಸೀದಿಗೆ ಬಂದಿದ್ದ ಹಿಂದುಗಳಿಗೆ ಮಸೀದಿ ಎಂದರೆ ಏನು? ಮಸೀದಿ ಒಳಗೆ ಏನು ಬೋಧಿಸಲಾಗುತ್ತದೆ? ಮಸೀದಿಯೊಳಗೆ ಏನೇನು ಇರುತ್ತದೆ? ಮಸೀದಿ ಆವರಣದಲ್ಲಿ ಯಾವ ರೀತಿ ಇಸ್ಲಾಂ ಧಾರ್ಮಿಕ ಆಚರಣೆಗಳನ್ನು ಪಾಲಿಸಲಾಗುತ್ತದೆ? ಎಂಬ ಕುರಿತು ಮುಸ್ಲಿಂ ಧರ್ಮ ಗುರುಗಳು, ಮೌಲ್ವಿಗಳು, ಮುಖಂಡರು ಎಳೆಎಳೆಯಾಗಿ ಮನವರಿಕೆ ಮಾಡಿದರು.

‘ನಾವು ನಿಮ್ಮವರೇ, ನೀವೂ ನಮ್ಮವರೇ. ಪರಸ್ಪರರಲ್ಲಿ ದ್ವೇಷ ಬೇಡ, ಪ್ರೀತಿ ಇರಲಿ, ಬನ್ನಿ ಪರಸ್ಪರ ಅರಿಯೋಣ, ಸಹೋದರತೆ, ಬಾಂಧವ್ಯ, ಧಾರ್ಮಿಕ ಸೌಹಾರ್ದತೆ ಬೆಳೆಸೋಣ’ ಎಂದು ಮಸೀದಿಯೊಳಗೆ ಹಿಂದುಗಳನ್ನು ಆಹ್ವಾನಿಸಿದರು.

ಹಿಂದುಗಳ ಸಮ್ಮುಖದಲ್ಲೇ ಕುರಾನ್‌ ಪಠಣ, ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಮಸೀದಿಯೊಳಗೆ ಮುಚ್ಚುಮರೆಯಾಗಿ ಏನೂ ನಡೆಯುತ್ತಿಲ್ಲ ಎಂಬುದನ್ನು ಸಾಬೀತು ಪಡಿಸಿದರು.

ಪುಸ್ತಕ ವಿತರಣೆ:‘ಮಸೀದಿಗಳು ಒಂದು ಪರಿಚಯ’, ‘ಅಲ್ಲಾಹು ಅಕ್ಬಾರ್‌...ಏನಿದು ಕರೆ?’, ‘ತಪ್ಪು ಕಲ್ಪನೆಗಳು’ ಎಂಬ ಹೊತ್ತಿಗೆಗಳನ್ನು ಮಸೀದಿಗೆ ಬಂದವರ ಕೈಗೆ ನೀಡಿ, ಲಘು ಉಪಹಾರವನ್ನು ಕೊಟ್ಟು ಆಥಿತ್ಯ ನೀಡಲಾಯಿತು.

ಆಕರ್ಷಣೀಯ ಸ್ಥಳವಲ್ಲ:‘ಮಸೀದಿ ಎಂಬುದು ಆಕರ್ಷಣೀಯ ಸ್ಥಳವಲ್ಲ, ದಿನಕ್ಕೆ ಐದು ಬಾರಿ ಸಾಮೂಹಿಕವಾಗಿ ನಮಾಜ್‌ ಮಾಡಲು ಒಂದುಗೂಡುವ ಸ್ಥಳ ಮಸೀದಿಯಾಗಿದೆ. ಮಸೀದಿಗಳು ಗುಂಬಜ್‌, ಮಿನಾರ್‌ ಮತ್ತು ವಿಶಾಲವಾದ ಪ್ರಾರ್ಥನಾ ಸಭಾಂಗಣ ಹೊಂದಿರುತ್ತದೆ‘ ಎಂದು ಡಾ.ಅಮೀರ್‌ವುದ್ದೀನ್‌ ಖಾಜಿ ತಿಳಿಸಿದರು.

‘ಮಸೀದಿಯೊಳಗೆ ಪ್ರವೇಶಿಸುವ ಮುನ್ನಾ ಕೈಕಾಲು, ಬಾಯಿ ಸ್ವಚ್ಛಗೊಳಿಸಿಕೊಂಡು ಪ್ರವೇಶಿಸಬೇಕು. ಬಳಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.

‘ಪ್ರಾರ್ಥನೆ ಸಂದರ್ಭದಲ್ಲಿ ಯಾವುದೇ ಮೂರ್ತಿ, ಚಿತ್ರ, ಪಳೆಯುಳಿಕೆ ಅಥವಾ ಪವಿತ್ರ ಗ್ರಂಥವನ್ನು ಮುಂಭಾಗದಲ್ಲಿ ಇಡುವ ಕ್ರಮ ಇಲ್ಲ‘ ಎಂದು ಹೇಳಿದರು.

‘ನಮಾಜ್‌ಗಾಗಿ ಮಸೀದಿಯನ್ನು ಪ್ರವೇಶಿಸುವಾಗ ಯಾವುದೇ ಶುಲ್ಕ ನೀಡಬೇಕಾಗಿಲ್ಲ, ತೆಂಗಿನಕಾಯಿ, ಸಿಹಿತಿಂಡಿ, ಅಗರಬತ್ತಿ, ಚಾದರ ಅರ್ಪಿಸಬೇಕಾಗಿಲ್ಲ’ ಎಂದರು.

‘ನಮಾಜ್‌ ಸಂದರ್ಭದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತದೆ. ಬಡವ, ಶ್ರೀಮಂತ ಎಲ್ಲರೂ ಒಂದೇ, ಯಾರಿಗೂ ವಿಶೇಷ ಮರ್ಯಾದೆ ನೀಡುವುದಾಗಲಿ ಅಥವಾ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಂತಸ್ತಿನ ಆಧಾರದಲ್ಲಿ ಮುಂದಿನ ಸಾಲಿನಲ್ಲಿ ಸ್ಥಳ ಕಾಯ್ದಿರಿಸುವುದಿಲ್ಲ’ ಎಂದು ತಿಳಿಸಿದರು.

***
ಮಸೀದಿ ಒಳಗೆ ಯಾವುದೇ ಉಗ್ರ ಚಟುವಟಿಕೆಗಳಿಗೆ ತರಬೇತಿ ನೀಡುವುದಿಲ್ಲ. ಪ್ರಾರ್ಥನೆ ಹೊರತು ಬೇರೇನೂ ನಡೆಯಲ್ಲ. ತಪ್ಪು ತಿಳಿವಳಿಕೆ ಬೇಡ, ನಾವು ನಿಮ್ಮ ಸಹೋದರರೇ ಹೊರತು ಬೇರಲ್ಲ.
–ಎಸ್‌.ಎಂ.ಪಾಟೀಲ ಗಣಿಹಾರ, ಅಧ್ಯಕ್ಷ, ಅಲ್‌ ಅಕ್ಸಾ ಮಸೀದಿ

****

ಮಸೀದಿ, ಮಂದಿರಗಳ ಪಾವಿತ್ರ್ಯ ಕಾಪಾಡಬೇಕು. ಊಹಾಪೂಹಳಿಗೆ ಯಾರೂ ಕಿವಿಗೊಡಬಾರದು. ಧರ್ಮ, ಜಾತಿಗಿಂತ ಮೊದಲು ಮಾನವ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು
–ಪ್ರೇಮಾನಂದ ಬಿರಾದಾರ, ಸದಸ್ಯ, ಮಹಾನಗರ ಪಾಲಿಕೆ, ವಿಜಯಪುರ

****

ಭಾರತ ಸರ್ವಧರ್ಮಗಳ ಶಾಂತಿಯ ತೋಟ. ಸಂವಿಧಾನವೇ ನಮ್ಮ ಧರ್ಮಗ್ರಂಥವಾಗಬೇಕು. ಸೌಹಾರ್ದದಿಂದ ಬದುಕಬೇಕು. ಪರಸ್ಪರ ಗೌರವ ನೀಡಬೇಕು

–ಡಾ.ರವಿ ಬಿರಾದಾರ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT