ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಬರದ ನಾಡಲ್ಲಿ ಹೆಚ್ಚಿದ ಅಂತರ್ಜಲ

ಬದು, ಹೊಂಡ ನಿರ್ಮಾಣಕ್ಕೆ ಆದ್ಯತೆ; ಹೂಳೆತ್ತಿದ ಕೆರೆಗಳಲ್ಲಿ, ಚೆಕ್‌ ಡ್ಯಾಂಗಳಲ್ಲಿ ಮಳೆ ನೀರು ಸಂಗ್ರಹ
Last Updated 5 ಜೂನ್ 2020, 4:25 IST
ಅಕ್ಷರ ಗಾತ್ರ

ವಿಜಯಪುರ: ‘ಬರದ ನಾಡು ಬಿಜಾಪುರ’ ಎಂದೇ ಕರೆಯಲ್ಪಡುವ ಜಿಲ್ಲೆಯಲ್ಲಿ ವಾರ್ಷಿಕ ಕೇವಲ 40 ದಿನಗಳ ಕಾಲ 657 ಮಿ.ಮೀ.ವಾಡಿಕೆ ಮಳೆಯಾಗುತ್ತದೆ.ಈ ಮಳೆ ನೀರನ್ನು ಸಂಗ್ರಹಿಸಲು ಹಾಗೂ ಭೂಮಿಯಲ್ಲಿ ಇಂಗಿಸಲು ಜಿಲ್ಲೆಯಲ್ಲಿ ಪ್ರಯತ್ನಗಳು ನಡೆದಿವೆ.

ಕೃಷ್ಣಾ ಮತ್ತು ಭೀಮಾ ಎರಡು ನದಿಯ ನಡುವೆ ಸುಮಾರು 80 ರಿಂದ 90 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ವಿಜಯಪುರ ಜಿಲ್ಲೆ ಭೌಗೋಳಿಕವಾಗಿ ಇಳಿಜಾರಿನಿಂದ ಕೂಡಿದೆ. ಹೀಗಾಗಿ ಎಷ್ಟೇ ಮಳೆಯಾದರೂ ಭೂಮಿಯಲ್ಲಿ ನೀರು ನಿಲ್ಲದೇ ವೇಗವಾಗಿ ಓಡಿ ನದಿ ಸೇರುತ್ತದೆ. ಅಲ್ಲದೇ, ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಗುಣವೂ ಈ ಮಣ್ಣಿಗೆ ಇಲ್ಲದಿರುವುದರಿಂದ ನೀರಿಗಾಗಿ ಜನ, ಜಾನುವಾರು ಪ್ರತಿ ವರ್ಷ ಪರದಾಡುವುದು ಸಾಮಾನ್ಯವಾಗಿದೆ.

ರಾಜಸ್ಥಾನ ಬಿಟ್ಟರೆ ದೇಶದಲ್ಲಿ ಅತೀ ಕಡಿಮೆ ಮಳೆಯಾಗುವ ಪ್ರದೇಶವೆಂದೇ ಗುರುತಿಸಿಕೊಂಡಿರುವ ಜಿಲ್ಲೆಯಲ್ಲಿ ಮಳೆ ನೀರು ಸಂಗ್ರಹಕ್ಕೆ ಇತ್ತೀಚಿನ ವರ್ಷಗಳಲ್ಲಿ ಆದ್ಯತೆ ಸಿಕ್ಕಿದೆ. ಕೃಷಿಕರು ಜಾಗೃತರಾಗಿದ್ದಾರೆ. ತಮ್ಮ ಹೊಲದಲ್ಲಿ ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ ಮಾಡಿಕೊಳ್ಳತೊಡಗಿದ್ದಾರೆ.

ಹೂಳೆತ್ತುವ ಮೂಲಕ ಕೆರೆಗಳನ್ನು ಪುನಶ್ಚೇತನಗೊಳಿಸಲು, ಚೆಕ್‌ ಡ್ಯಾಂ ನಿರ್ಮಾಣದ ಮೂಲಕ ಓಡುವ ನೀರನ್ನು ತಡೆದು ನಿಲ್ಲಿಸಲುಜಿಲ್ಲಾ ಪಂಚಾಯ್ತಿ ಆದ್ಯತೆ ನೀಡಿದೆ. ಪರಿಣಾಮ ಬೇಸಿಗೆಯ ದಿನಗಳಲ್ಲೂ ರೈತರ ಹೊಲದಲ್ಲಿ ಬೆಳೆ ಕಾಣಬಹುದಾಗಿದೆ. ಲಿಂಬೆ, ದ್ರಾಕ್ಷಿ, ದಾಳಿಂಬೆ, ಬಾಳೆ ಸೇರಿದಂತೆ ಇನ್ನಿತರ ತೋಟಗಾರಿಕಾ ಪ್ರದೇಶ ವರ್ಷದಿಂದ ವರ್ಷಕ್ಕೆ ವಿಸ್ತರಿಸತೊಡಗಿದೆ. ಹೈನುಗಾರಿಕೆಗೂ ಅನುಕೂಲವಾಗಿದೆ. ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ತಗ್ಗಿದೆ. ಸಾವಿರಾರು ಅಡಿ ಆಳದಲ್ಲಿ ಸಿಗುತ್ತಿದ್ದ ಅಂತರ್ಜಲ ನೂರಾರು ಅಡಿಗಳಿಗೆ ಸಿಗತೊಡಗಿದೆ.

ಮಳೆ ನೀರು ಸಂಗ್ರಹ ಕುರಿತು ಜಿಲ್ಲಾ ಪಂಚಾಯ್ತಿ ಕೈಗೊಂಡಿರುವ ವಿವಿಧ ಯೋಜನೆಗಳ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (ಎನ್‌ಆರ್‌ಇಜಿ) ಜಿಲ್ಲೆಯಲ್ಲಿ ಕೃಷಿ ಹೊಂಡ, ಚೆಕ್‌ ಡ್ಯಾಂ, ಬದು ನಿರ್ಮಾಣ ಮತ್ತು ಕೆರೆ ಹೂಳೆತ್ತಲು ಆದ್ಯತೆ ನೀಡಲಾಗಿದೆ. ಈ ಮೂಲಕ ಮಳೆ ನೀರು ವ್ಯರ್ಥವಾಗಿ ಹರಿದುಹೋಗುವುದನ್ನು ತಡೆದು ನಿಲ್ಲಿಸಲಾಗುತ್ತಿದೆ ಎಂದರು.

ಚೆಕ್‌ ಡ್ಯಾಂಗಳಲ್ಲಿ ಮಳೆ ನೀರು ಸಂಗ್ರಹವಾಗುತ್ತಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಕೊಳವೆಬಾವಿಗಳು ಪುನಶ್ಚೇತನವಾಗುತ್ತಿದ್ದು, ದಾಳಿಂಬೆ, ದ್ರಾಕ್ಷಿ, ನಿಂಬೆ, ತೊಗರಿ, ಮೆಕ್ಕೆಜೋಳ ಬೆಳೆಗಾರರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ನಾರಾಯಣಪುರ ಜಲಾಶಯದಿಂದ ಜಿಲ್ಲೆಯ 15 ಬೃಹತ್‌ ಕೆರೆಗಳನ್ನು ಹಾಗೂ ಆಲಮಟ್ಟಿ ಜಲಾಶಯದಿಂದ ಒಂದು ಬೃಹತ್‌ ಕೆರೆಗೆ ಪ್ರತಿ ವರ್ಷ ಕಾಲುವೆ ಮೂಲಕ ನೀರು ತುಂಬಿಸಲಾಗುತ್ತಿದೆ. ಅಲ್ಲದೇ, ಉಳಿದ 20 ಕೆರೆಗಳನ್ನು ಹಿನ್ನೀರಿನಿಂದ ತುಂಬಿಸಲಾಗುತ್ತಿದೆ ಇದರಿಂದ ಕೆರೆಗಳ ಆಜುಬಾಜು ಇರುವ ಕೊಳವೆಬಾವಿಗಳಲ್ಲಿ ನೀರುಕ್ಕುತ್ತಿದೆ. ವರ್ಷ ಪೂರ್ತಿ ಕುಡಿಯುವ ನೀರು ಲಭಿಸುತ್ತಿದೆ ಎಂದರು.

ಜಿಲ್ಲೆಯಲ್ಲಿ 2016–17ರಿಂದ 2020–21ರ ವರೆಗೆ 4071 ಬದು ಮತ್ತು 1727 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ, 177 ಕೆರೆ ಹಾಗೂ 467 ಹಳ್ಳಗಳ ಹೂಳೆತ್ತಲಾಗಿದೆ. 1826 ಚೆಕ್‌ ಡ್ಯಾಂ ನಿರ್ಮಿಸಲಾಗಿದೆ. ಇದರಿಂದ ಸಾವಿರಾರು ಎಕರೆ ಕೃಷಿ ಭೂಮಿ ನೀರಾವರಿಯಾಗಿದೆ ಎಂದು ಹೇಳಿದರು.

ರೈತರ ಜಮೀನುಗಳಲ್ಲಿ ಜಲ ಸಂರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಮೇ 19ರಿಂದ ಜೂನ್‌ 18ರ ವರೆಗೆ ಬದು ನಿರ್ಮಾಣ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿ.ಪಂ. ಸಿಇಒ ಗೋವಿಂದರೆಡ್ಡಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT