ಸೋಮವಾರ, ಮೇ 16, 2022
27 °C

ಪಿಎಸ್‌ಐ ನೇಮಕಾತಿ ಸ್ಥಗಿತ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಕಾರಣಕ್ಕೆ ಆಯ್ಕೆ ಪ್ರಕ್ರಿಯೆನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು ಎಂದು ತಾತ್ಕಾಲಿಕವಾಗಿ ಆಯ್ಕೆಯಾಗಿರುವ ವಿಜಯಪುರ ಜಿಲ್ಲೆಯ ಅಭ್ಯರ್ಥಿಗಳು ಮನವಿ ಮಾಡಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ನಡೆದಿರುವ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. 

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಕುರಿತು ಈಗಾಗಲೇ ಸಿಐಡಿ ಪೊಲೀಸರು ನಡೆಸುತ್ತಿರುವ ತನಿಖೆ ಶೀಘ್ರ ಪೂರ್ಣಗೊಳಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಹಾಗೂ ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. 

ಪಿಎಸ್‌ಐ ನೇಮಕಾತಿ ಪ್ರಕ್ರಿಯಲ್ಲಿ ಆಯ್ಕೆಯಾಗದ ಕಲ್ಯಾಣ ಕರ್ನಾಟಕ ಭಾಗದ ಕೆಲವು ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಾಗೂ ತೇಜೋವಧೆ ಮಾಡುತ್ತಿದ್ದಾರೆ. ಅಲ್ಲದೇ, ನೇಮಕಾತಿ ಪ್ರಕ್ರಿಯೆನ್ನು ಸ್ಥಗಿತಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪಿಎಸ್‌ಐ ಪರೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ಬರೆದು ಆಯ್ಕೆಯಾಗಿರುವ ನಮ್ಮ ಹೆಸರು, ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಇವರೂ ಸಹ ಹಣಕೊಟ್ಟು, ನಕಲು ಮಾಡಿ ಆಯ್ಕೆಯಾಗಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ಅಪಪ್ರಚಾರದಲ್ಲಿ ನಿರತವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಇರುವವರೆಲ್ಲೂ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿಲ್ಲ. ಈಗಾಗಲೇ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಉದ್ಯೋಗಕ್ಕೆ ಸೇರಿಕೊಳ್ಳುತ್ತೇವೆ ಎಂಬ ಆಶಯದಿಂದ ಎರಡು ವರ್ಷಗಳಿಂದ ಬೇರೆ ಕೆಲಸಗಳನ್ನು ಬಿಟ್ಟು ಮನೆಯಲ್ಲೇ ಖಾಲಿ ಕೂತಿದ್ದೇವೆ. ಈಗ ಏನಾದರೂ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಳಿಸಿದರೆ ನ್ಯಾಯಯುತವಾಗಿ, ಪಾರದರ್ಶಕವಾಗಿ ಪರೀಕ್ಷೆ ಬರೆದಿರುವ ನಮಗೆ ಅನ್ಯಾಯವಾಗುತ್ತದೆ ಎಂದು ಹೇಳಿದರು.

ಪಿಎಸ್‌ಐ ಹುದ್ದೆಗೆ ತಾತ್ಕಾಲಿಕವಾಗಿ ಆಯ್ಕೆಯಾಗಿರುವ ವಿಜಯಪುರ ಜಿಲ್ಲೆಯ ಅಭ್ಯರ್ಥಿಗಳಾದ ರಚನಾ ಹನುಮಂತ, ವೀಣಾ ಜಕಾತಿ, ಭರತ್‌ಕುಮಾರ್‌ ಜಿ.ಎಸ್‌., ಶಿವಾನಂದ ಬಿರಾದಾರ, ಯಮನಪ್ಪ ವಾಲಿಕಾರ, ಅಖಂಡೇಶ ಶಿರೋಳ, ಸತೀಶ ಹಿರೇಕುರುಬರ, ಸಚಿನ್‌ ಬಿರಾದಾರ, ಅಕ್ಷತಾ ರಾಠೋಡ, ಪ್ರಭು ಪೂಜಾರಿ, ನಿಖಿಲ್‌ ರಾಠೋಡ, ಮಂಜುನಾಥ ಮೇತ್ರಿ, ಶ್ರೀಕಾಂತ ಪೂಜಾರಿ, ಶರಣಗೌಡ ಮೂಲಿಮನಿ, ಮಂಜುನಾಥ ತಳಕೇರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.