ಶನಿವಾರ, ಫೆಬ್ರವರಿ 4, 2023
17 °C
ನರೇಗಾ ಯೋಜನೆಯಡಿ ನಿರ್ಮಾಣ: ಜಿ.ಪಂ.ಸಿಇಒ ಗೋವಿಂದ ರೆಡ್ಡಿ

ವಿಜಯಪುರ | ಮೈದಳೆಯಲಿವೆ ನ್ಯುಟ್ರೀಶನ್‌‌ ಗಾರ್ಡನ್‌, ಟ್ರೀಪಾರ್ಕ್‌

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಶಾಲಾ ಕಂಪೌಂಡ್‌, ಆಟದ ಮೈದಾನ, ದನಗಳ ಶೆಡ್‌, ಬದು ನಿರ್ಮಾಣ, ಕೃಷಿ ಹೊಂಡ, ಕೆರೆ, ಕಾಲುವೆ ಮತ್ತು ಹಳ್ಳಗಳ ಹೂಳು ತೆಗೆಯುವ ಮೂಲಕ ಜನಾನುರಾಗಿಯಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ(ಎನ್‌ಆರ್‌ಇಜಿ)ಯಡಿ ಇನ್ನು ಮುಂದೆ ಶಾಲೆಗಳಲ್ಲಿ ನ್ಯುಟ್ರೀಶನ್‌‌ ಗಾರ್ಡನ್ ಮತ್ತು ಆಯ್ದ ಗ್ರಾಮಗಳಲ್ಲಿ ಟ್ರೀಪಾರ್ಕ್‌ ನಿರ್ಮಾಣಕ್ಕೆ ವಿಜಯಪುರ ಜಿಲ್ಲಾ ಪಂಚಾಯ್ತಿ ಹೊಸ ಯೋಜನೆ ರೂಪಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯ್ತಿವಾರು ಕಂಪೌಂಡ್‌ ಮತ್ತು ನೀರಿನ ವ್ಯವಸ್ಥೆ ಇರುವ ಎರಡು ಶಾಲೆ ಮತ್ತು ಎರಡು ಅಂಗನವಾಡಿಗಳನ್ನು ಆಯ್ದುಕೊಂಡು ನ್ಯುಟ್ರೀಶನ್‌‌ ಗಾರ್ಡನ್‌ ನಿರ್ಮಾಣ(ತರಕಾರಿ ತೋಟ) ಮಾಡಲು ಉದ್ದೇಶಿಸಲಾಗಿದೆ ಎಂದರು.

ಈ ಕೈತೋಟದಲ್ಲಿ ನುಗ್ಗೆ, ಕರಿಬೇವು, ಟಮೊಟೊ, ಬದನೆ ಮತ್ತಿತರರ ಪೌಷ್ಟಿಕಾಂಶಯುಕ್ತ ತರಕಾರಿ ಗಿಡಗಳನ್ನು ಎನ್‌ಆರ್‌ಇಜಿ ಯೋಜನೆಯಡಿ ಬೆಳೆಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿಯಿಂದ ಈ ಕೈತೋಟಗಳನ್ನು ಎರಡು ತಿಂಗಳು ನಿರ್ವಹಣೆ ಮಾಡಿದ ಬಳಿಕ ಆಯಾ ಶಾಲೆಗಳಿಗೆ ಹಸ್ತಾಂತರಿಸಲಾಗುವುದು. ಕೈತೋಟದಲ್ಲಿ ಬೆಳೆಯುವ ಕಾಯಿಪಲ್ಲೆಯನ್ನು ಆಯಾ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. 

ಕೈತೋಟ ನಿರ್ಮಾಣಕ್ಕೆ ಅಗತ್ಯವಿರುವ ತರಕಾರಿ ಗಿಡ ಅಥವಾ ಬೀಜಗಳನ್ನು ಎನ್‌ಆರ್‌ಇಜಿ ಸಾಮಗ್ರಿ ಮೊತ್ತದಲ್ಲಿ ಖರೀದಿಸಲಾಗುವುದು ಎಂದು ಹೇಳಿದರು.

ಪ್ರತಿ ಶಾಲಾ ಕೈತೋಟ ನಿರ್ಮಾಣಕ್ಕೆ ₹12,299 ಮೀಸಲಿಡಲಾಗಿದೆ. ಶಾಲೆಗಳಲ್ಲಿ ಕೈತೋಟ ನಿರ್ಮಾಣಕ್ಕೆ ಎನ್‌ಆರ್‌ಇಜಿ ಯೋಜನೆಯಡಿ ಕೂಲಿಕಾರ್ಮಿಕರನ್ನು ಬಳಸಿಕೊಳ್ಳಲಾಗುವುದು ಎಂದರು.

ಆಯ್ದ ಗ್ರಾಮಗಳಲ್ಲಿ ಟ್ರೀ ಪಾರ್ಕ್‌: ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ  ಸಾಮಾಜಿಕ ಅರಣ್ಯಗಳಲ್ಲಿ ಟ್ರೀ ಪಾರ್ಕ್‌ ಯೋಜನೆ ರೂಪಿಸಲಾಗುವುದು ಎಂದು ಗೋವಿಂದರೆಡ್ಡಿ ತಿಳಿಸಿದರು.

ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಸಾಮಾಜಿಕ ಅರಣ್ಯಗಳಲ್ಲಿ ಟ್ರೀಪಾರ್ಕ್‌ ನಿರ್ಮಾಣ ಮಾಡುವ ಜೊತೆಗೆ ಸಾರ್ವಜನಿಕರಿಗೆ ವಾಕ್‌ ಮಾಡಲು ಅನುಕೂಲವಾಗುವಂತೆ ಪಾಥ್‌ವೇ, ಕೂರಲು ಆಸನ ಹಾಗೂ ಟ್ರೀ ಪಾರ್ಕ್‌ ಸುತ್ತಲೂ ಸುಸಜ್ಜಿತ ಬೇಲಿ ನಿರ್ಮಾಣ ಮಾಡಲಾಗುವುದು ಎಂದರು.

ಉದಾಹರಣೆಗೆ ಇಂಡಿ ತಾಲ್ಲೂಕಿನ ತೆನ್ನಿಹಾಳದಲ್ಲಿ ಇರುವ ಸಾಮಾಜಿಕ ಅರಣ್ಯದಲ್ಲಿ ಟ್ರೀಪಾರ್ಕ್‌ ನಿರ್ಮಾಣವಾಗಿರುವುದು ನೋಡಬಹುದು ಎಂದು ಹೇಳಿದರು.

ಒಂದು ಎಕರೆಯಿಂದ ಎರಡು ಎಕರೆ ಅಥವಾ ಅದಕ್ಕಿಂತಲೂ ಹೆಚ್ಚಿರುವ ಸಾಮಾಜಿಕ ಅರಣ್ಯಗಳನ್ನು ಟ್ರೀಪಾರ್ಕ್‌ ನಿರ್ಮಾಣಕ್ಕೆ ಅದರಲ್ಲೂ ಗ್ರಾಮಕ್ಕೆ ಹೊಂದಿಕೊಂಡಿರುವ ಸಾಮಾಜಿಕ ಅರಣ್ಯಗಳಲ್ಲಿ ಈ ಯೋಜನೆಯನ್ನು ಎನ್‌ಆರ್‌ಇಜಿಯಡಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು