ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಸಂತ್ರಸ್ತರಿಗೆ ಏಕ ಸ್ವರೂಪದ ಪರಿಹಾರ: ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ

Last Updated 9 ಮಾರ್ಚ್ 2023, 19:46 IST
ಅಕ್ಷರ ಗಾತ್ರ

ವಿಜಯಪುರ: ಕೃಷ್ಣ ಮೇಲ್ದಂಡೆ ಯೋಜನೆ ಹಂತ 3ರಲ್ಲಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಯಾವುದೇ ತಾರತಮ್ಯ ಮಾಡದೆ ಏಕಸ್ವರೂಪದ ಪರಿಹಾರ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಬಬಲೇಶ್ವರ ತಾಲ್ಲೂಕಿನ ಚಿಕ್ಕ ಗಲಗಲಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 3ನೇ ಹಂತದ ಕೃಷ್ಣ ಮೇಲ್ದಂಡೆ ಯೋಜನೆಯಡಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಿಸಿ ಅವರು ಮಾತನಾಡಿದರು.

ಸಂತ್ರಸ್ತರ ಹಿತ ದೃಷ್ಠಿಯಿಂದ ಒಣ ಭೂಮಿಗೆ ಎಕರೆಗೆ ₹ 2 ಲಕ್ಷದಿಂದ ಗರಿಷ್ಠ ₹20 ಲಕ್ಷ ವರೆಗೆ ಪರಿಹಾರ ನೀಡಲಾಗುತ್ತಿದೆ. ನೀರಾವರಿ ಭೂಮಿಗೆ ₹24 ಲಕ್ಷ ಮೊತ್ತದ ಪರಿಹಾರ ನೀಡಿ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗಿದೆ ಎಂದರು.

ಭೂಸ್ವಾಧೀನಕ್ಕೆ ಜಮೀನು ಮನೆ ಕೊಡಲು ಇಚ್ಛಿಸುವವರು ಭೂ ಸ್ವಾಧೀನದ ವಿರುದ್ಧ ನ್ಯಾಯಾಲಯಕ್ಕೆ ಹೋಗುವ ಅವಕಾಶದ ಬಗ್ಗೆ ಕಾನೂನು ತಜ್ಞರ ಸಲಹೆಯನ್ನು ಪಡೆಯಲಾಗುವುದು. ಆರ್ ಅಂಡ್ ಆರ್ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ಕೃಷ್ಣ ಜಲಾಯನ ಪ್ರದೇಶಕ್ಕೆ ಸಂಬಂಧಿಸಿದಂತೆ ಬಿ ಯೋಜನೆಯಲ್ಲಿ 9 ಸ್ಕೀಮ್‍ಗಳಿಗೆ ಆಡಳಿತ ಅನುಮೋದನೆಯನ್ನು ನೀಡಿ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ. ಕೃಷ್ಣ ಮೇಲ್ದಂಡೆ ಬಿ ಯೋಜನೆ ಕುರಿತು ವಿರೋಧ ಪಕ್ಷದ ನಾಯಕರು ವಿಧಾನ ಸಭೆಯಲ್ಲಿಯೇ ಮಾಡಬೇಡಿ, ಸುಪ್ರಿಂ ಕೋರ್ಟ್‌ ನಿಮಗೆ ಛೀಮಾರಿ ಹಾಕುತ್ತದೆ ಎಂದಿದ್ದರು. ಆದರೆ ನಾನು ಪ್ರಜ್ಞಾಪೂರ್ವಕವಾಗಿ ಈ ನಿರ್ಣಯವನ್ನು ತೆಗೆದುಕೊಂಡಿದ್ದೇನೆ ಎಂದರು.

ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ, ಕೊಪ್ಪಳ, ಭೀಮಾ ಏತ ನೀರಾವರಿಗಳನ್ನು ಕೊಟ್ಟು, ಮುಳವಾಡ ಏತ ನೀರಾವರಿಗೆ ನಾನು ಅಡಿಗಲ್ಲನ್ನು ಹಾಕಿದ್ದೆನೆ. ಯಾವುದೇ ಯೋಜನೆಗಳಿರಲಿ ಅದನ್ನು ಸಂಗ್ರಹ ಮಾಡಿದರೆ ಸಾಧನೆಯಲ್ಲ. ಯೋಜನೆಗಳು ರೈತರ ಹೊಲಕ್ಕೆ ಹೋಗಬೇಕು. ಭೂಮಿ ತಾಯಿ ಹಸಿರು ಸೀರೆ ಉಟ್ಟಾಗ ಮಾತ್ರ ಈ ಯೋಜನೆ ಪೂರ್ಣಗೊಳ್ಳುತ್ತದೆ ಎಂದರು.

ಆಂಧ್ರಪ್ರದೇಶ, ತಮಿಳುನಾಡಿನಂತೆ ನೀರಾವರಿಯಲ್ಲಿ ಬೆಳವಣಿಗೆಗಳು ನಮ್ಮ ಕರ್ನಾಟಕದಲ್ಲಿಯೂ ಆಗಬೇಕಿತ್ತು. ಆದರೆ, ಹಿಂದಿನ ಸರ್ಕಾರಗಳು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಿಲ್ಲ. ನೀರಾವರಿಯ ಪ್ರಜ್ಞೆ ಕರ್ನಾಟಕಕ್ಕೆ ತಡವಾಗಿ ಬಂದಿದೆ ಅದಕ್ಕೆ ಸಮಯ ಹಾಳು ಮಾಡದೆ ಈ ಭಾಗದ ಜನತೆ ನೀರು ನೀಡುವ ಮೂಲಕ ಇಲ್ಲಿನ ಜನರಿಗೆ ನ್ಯಾಯ ನೀಡಬೇಕಿದೆ ಎಂದು ಹೇಳಿದರು.

ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ನಮ್ಮ ನಾಡಿನ ಜನ ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದವರು. ಕೃಷ್ಣ ಮೇಲ್ದಂಡೆ ಯೋಜನೆಯಡಿ ಮುಳಗಡೆಯಾದ ಸಂದರ್ಭದಲ್ಲಿ ಜನರ ಪರಿಸ್ಥಿತಿ ಕಂಡಿದ್ದೇವೆ. ಪರಿಹಾರ ರೂಪವಾಗಿ ಒಣ ಬೇಸಾಯದವರಿಗೆ 20 ಲಕ್ಷ, ನೀರಾವರಿಯವರಿಗೆ 24 ಲಕ್ಷ ರೂ ನಿಗದಿಗೊಳಿಸಿದ್ದು, ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ ಮಾತನಾಡಿ, ಬೀಳಗಿ ತಾಲ್ಲೂಕಿಗೆ ಇರುವ ದರ ಪಟ್ಟಿಯನ್ನು ಬಬಲೇಶ್ವರಕ್ಕೂ ನೀಡಲಾಗಿದೆ. ಆದರೆ, ಬಬಲೇಶ್ವರ ಸಂತ್ರಸ್ತರು ಕೋರ್ಟ್‌ಗೆ ಹೋಗಲು ಅವಕಾಶವಿಲ್ಲ. ಇದರಿಂದ ಈ ಭಾಗದ ಜನರಿಗೆ ಅನ್ಯಾಯವಾಗುತ್ತಿದೆ. ಈ ಲೋಪವನ್ನು ಸರಿಪಡಿಸಿ ಬೀಳಗಿ ಮತ್ತು ನಮ್ಮ ತಾಲ್ಲೂಕಿಗೆ ಒಂದೇ ರೀತಿ ನ್ಯಾಯ ನೀಡುವ ಕೆಲಸ ಮಾಡಬೇಕು ಎಂದರು.

ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಸಂಸದ ರಮೇಶ ಜಿಗಜಣಿಗಿ, ಬೀಜ ಮತ್ತು ರಸಗೊಬ್ಬರ ಮಂಡಳಿ ಅಧ್ಯಕ್ಷ ವಿಜುಗೌಡ ಪಾಟೀಲ, ಚಂದ್ರಶೇಖರ್ ಕವಟಗಿ, ನಂದಿ ಶುಗರ್ ಕಾರ್ಖಾನೆಯ ಅಧ್ಯಕ್ಷ ಶಶಿಕಾಂತ ಪಾಟೀಲ, ಮಾಜಿ ಸಚಿವ ಎಸ್‌.ಕೆ ಬೆಳ್ಳುಬ್ಬಿ, ಸೋಮನಗೌಡ ಪಾಟೀಲ ಸಾಸನೂರ, ಮುಖಂಡ ಉಮೇಶ ಕೋಳಕೂರ, ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳು ರಾಕೇಶ್ ಸಿಂಗ್, ಭೂ ಸ್ವಾಧೀನ, ಪುನರ್‍ವಸತಿ ಮತ್ತು ಪುನರ್ ನಿರ್ಮಾಣ ಕೃಷ್ಣಾ ಮೆಲ್ದಂಡೆ ಯೋಜನೆ ಆಯುಕ್ತ ಶಿವಯೋಗಿ.ಸಿ.ಕಳಸದ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ಜಿಲ್ಲಾ ಎಸ್.ಪಿ ಆನಂದಕುಮಾರ ಇದ್ದರು.

ಮೋದಿ ಮೋದಿ ಘೋಷಣೆ!
ವಿಜಯಪುರ:
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಭಾಷಣದ ವೇಳೆ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಕೂಗುವ ಮೂಲಕ ಮುಜುಗರವನ್ನುಂಟು ಮಾಡಿದರು.

ಪ್ರತಿರೋಧ ವ್ಯಕ್ತಪಡಿಸಿದ ಎಂ.ಬಿ. ಪಾಟೀಲ, ‘ನಾನು ಮಾತನಾಡುತ್ತೇನೆ ಸ್ವಲ್ಪ ತಡಿರಿ. ಯಾವುದು ಸತ್ಯ, ಯಾವುದು ಅಸತ್ಯ ಅನ್ನುವುದು ಗೊತ್ತಾಗುತ್ತದೆ. ಇದು ಈ ರೀತಿ ಕೂಗುವುದು ಸರಿಯಾದ ಮಾರ್ಗವಲ್ಲ. ನಾನು ಯಾವುದಕ್ಕೂ ಅಂಜುವವನೂ ಅಲ್ಲ’ ಎಂದು ಘೋಷಣೆ ಕೂಗಿದವರಿಗೆ ತಿರುಗೇಟು ನೀಡಿದರು.

***

ಮುಳುಗಡೆ ಸಂತ್ರಸ್ತರಿಗೆ ನಿವೇಶನ ಮಾತ್ರ ನೀಡದೇ ಇನ್ನು ಮುಂದೆ ಸರ್ಕಾರದಿಂದಲೇ ಮನೆ ಕಟ್ಟಿಸಿಕೊಡಲಾಗುವುದು. ಜೊತೆಗೆ ಪುನರ್ವಸತಿ ಕೇಂದ್ರಗಳಲ್ಲಿ ಶಾಲೆ, ಪಾಲಿಟೆಕ್ನಿಕ್‌ ಕಾಲೇಜು, ಆಸ್ಪತ್ರೆ ನಿರ್ಮಿಸಿಕೊಡಲಾಗುವುದು.
–ಬಸವರಾಜ ಬೊಮ್ಮಾಯಿ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT