ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಆನ್‌ಲೈನ್‌ ತರಗತಿ, ಪೂರ್ಣವಾಗದ ಪಾಠ

ಕನೆಕ್ಟ್‌ ಆಗದ ನೆಟ್‌ವರ್ಕ್‌; ವಿದ್ಯಾರ್ಥಿಗಳ ಪರದಾಟ; ಪುನರ್‌ಮನನ ತರಗತಿ ಭರವಸೆ
Last Updated 20 ಮೇ 2020, 19:45 IST
ಅಕ್ಷರ ಗಾತ್ರ

ವಿಜಯಪುರ: ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲಾ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಆನ್‌ಲೈನ್‌ ಪಾಠದ ಮೊರೆ ಹೋಗಿವೆ. ಈ ಮೂಲಕ ತಮ್ಮ ವಿದ್ಯಾರ್ಥಿ ಸಮೂಹವನ್ನು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿವೆ. ಆದರೆ, ಈ ಯತ್ನ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲವಾದರೂ ವಿದ್ಯಾರ್ಥಿ ಸಮೂಹವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿವೆ.

ನೆಟ್‌ವರ್ಕ್‌ ಸಮಸ್ಯೆ ಜೊತೆ ಹಲವು ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್‌ ಮತ್ತು ಲ್ಯಾಪ್‌ಟಾಪ್‌ ಇಲ್ಲದಿರುವುದರಿಂದ ಆನ್‌ಲೈನ್‌ ತರಗತಿಗಳು ಪೂರ್ಣ ಫಲಪ್ರದವಾಗಿಲ್ಲ ಎಂಬ ಅಭಿಪ್ರಾಯವನ್ನು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಉಪನ್ಯಾಸಕರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

ಕಾಟಾಚಾರಕ್ಕೆ ಆನ್‌ಲೈನ್‌ ಕ್ಲಾಸ್‌:ಬಹುತೇಕ ಶಾಲಾ, ಕಾಲೇಜುಗಳು ಆನ್‌ಲೈನ್‌ ಕ್ಲಾಸ್‌ಗಳನ್ನು ಕಾಟಾಚಾರಕ್ಕೆ ಎಂಬಂತೆ ನಡೆಸುತ್ತಿವೆ. ಇದರಿಂದ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚಾಗಿದೆ ಎಂದು ಪೋಷಕ, ಮ್ಯಾಗ್ನಂ ಕಂಪ್ಯೂಟರ್ಸ್‌ ಎಜುಕೇಷನ್‌ ಸೆಂಟರ್‌ನ ಮುಖ್ಯಸ್ಥ ರವಿ ನಿಂಬಾಳ್ಕರ್‌ ಎಂದು ದೂರಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ಪ್ರತಿದಿನ ನಾಲ್ಕೈದು ತಾಸು ಆನ್‌ಲೈನ್‌ ಕ್ಲಾಸ್‌ ತೆಗೆದುಕೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಜೊತೆಗೆ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದರು.

ಆನ್‌ಲೈನ್‌ ಕ್ಲಾಸ್‌ಗೂ ಖಾಸಗಿ ಶಾಲೆ, ಕಾಲೇಜುಗಳು ಶುಲ್ಕ ಸಂಗ್ರಹಿಸುತ್ತಿವೆ. ಇದರಿಂದ ಪೋಷಕರಿಗೆ ಹೊರೆಯಾಗಿದೆ. ಅಲ್ಲದೇ, ಆನ್‌ಲೈನ್‌ ಕ್ಲಾಸಿಗಾಗಿಯೇ ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಇಲ್ಲವೇ ಲ್ಯಾಪ್‌ಟಾಪ್‌ ಕೊಡಿಸಬೇಕಾದ ಪರಿಸ್ಥಿತಿ ತಲೆದೋರಿದೆ ಎಂದು ಹೇಳಿದರು.

ಆನ್‌ಲೈನ್‌ ಮೂಲಕವೇ ಬೋಧನೆ ನಡೆದರೆ ಇನ್ನು ಶಾಲೆ, ಕಾಲೇಜುಗಳು ಕೇವಲ ಪರೀಕ್ಷೆ ಬರೆಯಲು, ಸರ್ಟಿಫಿಕೇಟ್‌ ನೀಡಲಷ್ಟಕ್ಕೆ ಸೀಮಿತವಾದಂತಾಗುತ್ತದೆ. ಶಾಲೆ, ಕಾಲೇಜು ಆರಂಭವಾದ ಬಳಿಕ ಹೊಸದಾಗಿಯೇ ಪಾಠ, ಪ್ರವಚನಗಳು ಎಂದಿನಂತೆ ನಡೆಯುವಂತಾಗಬೇಕು ಎಂದು ಅವರು ಆಗ್ರಹಿಸಿದರು.

‘ಆನ್‌ಲೈನ್‌ ತರಗತಿ ಆಶಾದಾಯಕ’
ಆನ್‌ಲೈನ್‌ ತರಗತಿಗಳು ಶಾಲಾ, ಕಾಲೇಜು ಕೊಠಡಿಯೊಳಗೆ ನಡೆಯುವ ನೈಜ ತರಗತಿಗಳಂತಲ್ಲ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಇದು ಯಶಸ್ವಿಯಾಗುತ್ತದೆ ಎಂದು ನಿರೀಕ್ಷಿಸಲಾಗದು. ಆದರೆ, ಆನ್‌ಲೈನ್‌ ತರಗತಿಗಳು ಲಾಕ್‌ಡೌನ್‌ ಸಮಯದಲ್ಲಿ ಒಂದಷ್ಟು ಆಶಾದಾಯಕವಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪ್ರತಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಓಂಕಾರ ಕಾಕಡೆ ‘ಪ್ರಜಾವಾಣಿ’ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ನೆಟ್‌ವರ್ಕ್‌ ಸಮಸ್ಯೆಯಿಂದ ಆನ್‌ಲೈನ್‌ ತರಗತಿಯಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೆ ನೆರವಾಗಲು ನಮ್ಮ ವಿಶ್ವವಿದ್ಯಾಲಯದಿಂದ ನೋಟ್ಸ್‌ ಪಿಡಿಎಫ್‌, ಪಿಪಿಟಿ, ವಾಯ್ಸ್‌ ರೆಕಾರ್ಡರ್‌, ವಿಡಿಯೊವನ್ನು ವಿದ್ಯಾರ್ಥಿಗಳ ವಾಟ್ಸ್‌ಆ್ಯಪ್‌, ಇ–ಮೇಲ್‌ಗಳಿಗೆ ಕಳುಹಿಸಲಾಗಿದೆ ಎಂದು ಹೇಳಿದರು.

ಆನ್‌ಲೈನ್‌ ತರಗತಿ ಮೂಲಕ ಶೇ 60ರಷ್ಟು ವಿದ್ಯಾರ್ಥಿಗಳಿಗೆ ತಲುಪಿದ್ದೇವೆ. ಹೀಗಾಗಿ ತರಗತಿಗಳು ಆರಂಭವಾದ ಬಳಿಕ ಪುನರ್‌ ಮನನ ತರಗತಿ ನಡೆಸಲಾಗುವುದು ಎಂದರು.

‘ವಿದ್ಯಾರ್ಥಿಗಳ ಕಾಲಹರಣ ತಪ್ಪಿದೆ’
ಲಾಕ್‌ಡೌನ್‌ ಅವಧಿಯಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿ ಸುಮ್ಮನೇ ಕೂತು ಕಾಲಹರಣ ಮಾಡುವುದನ್ನು ಆನ್‌ಲೈನ್‌ ಕ್ಲಾಸ್‌ ತಪ್ಪಿಸಿದೆ. ನಮ್ಮ ಸಂಸ್ಥೆ ನಡೆಸುತ್ತಿರುವ ಆನ್‌ಲೈನ್‌ ತರಗತಿಗೆ ಶೇ 70ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ಏಕ್ಸಲೆಂಟ್‌ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ ತಿಳಿಸಿದರು.

ವಿದ್ಯಾರ್ಥಿಗಳು ಒಮ್ಮೆ ಶೈಕ್ಷಣಿಕ ಚಟುವಟಿಕೆಗಳಿಂದ ಸಂಪರ್ಕ ಕಡಿತಗೊಂಡರೆ ಮತ್ತೆ ಅವರನ್ನು ಕರೆತರಲು ಸಾಕಷ್ಟು ಸಮಯ ಬೇಕಾಗುತ್ತಿತ್ತು. ಆದರೆ, ಆನ್‌ಲೈನ್‌ ತರಗತಿ ಮೂಲಕ ಎರಡು ತಿಂಗಳಿಂದ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಲು ಅನುಕೂಲವಾಗಿದೆ ಎಂದು ಹೇಳಿದರು.

ನೆಟ್‌ವರ್ಕ್‌ ಸಮಸ್ಯೆಯಿಂದ ಎಲ್ಲ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಆನ್‌ಲೈನ್‌ ಕ್ಲಾಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಶಾಲಾ, ಕಾಲೇಜು ಆರಂಭವಾದ ಬಳಿಕ ಆನ್‌ಲೈನ್‌ನಲ್ಲಿ ಮಾಡಿರುವ ಪಾಠಗಳನ್ನು ಪುನರ್‌ ಬೋಧನೆ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT