ಗುರುವಾರ , ಫೆಬ್ರವರಿ 2, 2023
27 °C
ವಿಡಿಯೊ ಕಾಲ್‌ ಮಾಡಿ ವ್ಯಕ್ತಿಯನ್ನು ಬೆತ್ತಲೆಗೊಳಿಸಿ, ಹಣ ದೋಚಿದ ದಂಪತಿ!

ಆನ್‍ಲೈನ್‌ನಲ್ಲಿ ಹಣ ವಂಚನೆ: ಮಹಿಳೆ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಆನ್‍ಲೈನ್ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಸಿಂದಗಿ ತಾಲ್ಲೂಕಿನ ಬಗಲೂರ ಗ್ರಾಮದ ಪರಮೇಶ್ವರ ಹಿಪ್ಪರಗಿ ಎಂಬುವವರಿಗೆ ಫೇಸ್‌ಬುಕ್‌ ಮೂಲಕ ಪರಿಚಯವಾದ  ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದಾಸರಹಳ್ಳಿ ಗ್ರಾಮದ ಮಹಿಳೆ ಮಂಜುಳಾ ಕೆ.ಆರ್.(30) ಎಂಬುವವರು ತಾನು ಐಎಎಸ್ ಪಾಸ್ ಮಾಡಿದ್ದು, ಮುಂದೆ ಡಿ.ಸಿ. ಆಗುತ್ತೇನೆ, ನಿನ್ನನ್ನೆ ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾಳೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪರಮೇಶ್ವರ ಅವರಿಗೆ ವಿಡಿಯೊ ಕಾಲ್‌ ಮಾಡಿ ಬೆತ್ತಲೆಯಾಗಿ ಸ್ನಾನ ಮಾಡುವಂತೆ ಒತ್ತಾಯಿಸಿ ಅವನು ಸ್ನಾನ ಮಾಡುವಾಗ ವಿಡಿಯೊ ಕಾಲ್‍ನ ಸ್ಕ್ರಿನ್‍ಶಾಟ್ ಪಡೆದು, ಹಣ ಕೊಡು ಇಲ್ಲದಿದ್ದರೆ ನಿನ್ನ ಬೆತ್ತಲೆ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಿನ್ನ ಮಾನ ಮರ್ಯಾದೆ  ಹಾಳು ಮಾಡುತ್ತೇನೆ ಎಂದು ಹೆದರಿಸಿದ್ದಾಳೆ ಎಂದರು.

ಪರಮೇಶ್ವರನ ಕಡೆಯಿಂದ ₹39,04,870  ಅನ್ನು ತನ್ನ ಫೆಡೆರಲ್ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ಆನಲೈನ್ ಮೂಲಕ ಮಂಜುಳಾ ವಂಚನೆ ಮಾಡಿದ್ದಳು ಎಂದು ತಿಳಿಸಿದರು.

ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು ಎಂದು ಹೇಳಿದರು.

ತನಿಖಾ ತಂಡವು ಆರೋಪಿತರ ಮೊಬೈಲ್ ಲೊಕೇಶನ್ ಹಾಗೂ ಮೊಬೈಲ್ ಸಿಮ್ ಮಾಹಿತಿ ಹಾಗೂ ಬ್ಯಾಂಕ್ ಕೆ.ವೈ.ಸಿ. ಮಾಹಿತಿ ಕಲೆ ಹಾಕಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಆರೋಪಿ ಮಂಜುಳಾಗೆ ಸಹಕಾರ ನೀಡಿದ ಆಕೆಯ ಪತಿ ಸ್ವಾಮಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಿರುವುದಾಗಿ ತಿಳಿಸಿದರು.

ಆಪಾದಿತ ಮಹಿಳೆ ಮತ್ತು ಅವಳ ಗಂಡ ಸ್ವಾಮಿ ಇಬ್ಬರೂ ಕೂಡಿಯೇ ಈ ರೀತಿ ಯೋಜನೆ ರೂಪಿಸಿ, ಆನಲೈನ್ ಮೂಲಕ ವಂಚನೆ ಮಾಡಿರುವುದು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದರು.

ಆರೋಪಿಗಳು ವಂಚನೆ ಮಾಡಿ ಸಂಪಾದಿಸಿದ ಹಣದಲ್ಲಿ 100 ಗ್ರಾಂ ಬಂಗಾರದ ಆಭರಣಗಳನ್ನು, ಒಂದು ಸೆಕೆಂಡ್ ಹ್ಯಾಂಡ್ ಕಾರು ಹಾಗೂ ಬೈಕ್‌ ಖರೀದಿ ಮಾಡಿದ್ದಾರೆ ಎಂದರು.

ದಾಸರಹಳ್ಳಿ ಗ್ರಾಮದಲ್ಲಿ ಎರಡು ಅಂತಸ್ತಿನ ಐಷಾರಾಮಿ ಮನೆ ನಿರ್ಮಿಸುತ್ತಿದ್ದಾರೆ ಮತ್ತು ಆರೋಪಿ ಮಹಿಳೆಯು ತನ್ನ ಗಂಡನೊಂದಿಗೆ ಕೂಡಿ ‘ಸ್ವಾಮಿ ಫೈನಾನ್ಸ್’ ಎಂಬ ಹೆಸರಿನ ಫೈನಾನ್ಸ್ ಕಂಪನಿ ತೆರೆದು ಸಾರ್ವಜನಿಕರಿಗೆ ಸಾಲ ನೀಡಿದ್ದಾರೆ ಎಂದು ಹೇಳಿದರು.

ವಂಚನೆ ಹಣದಲ್ಲಿ ಖರೀದಿ ಮಾಡಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮಹಿಳೆಯ ಫೆಡೆರಲ್ ಬ್ಯಾಂಕ್ ಖಾತೆಯನ್ನು
ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಬ್ಯಾಂಕ್‌ ಖಾತೆಯಲ್ಲಿ ಇದ್ದ ₹ 6 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಈ ಪ್ರಕರಣದಲ್ಲಿ ವಂಚನೆ ಮಾಡಿದ ಬಹುಪಾಲು ಹಣವನ್ನು ಹಾಗೂ ಬಂಗಾರದ ಆಭರಣಗಳನ್ನು ತೆಗೆದುಕೊಂಡು ತಲೆಮರೆಸಿಕೊಂಡು ಪರಾರಿಯಾಗಿರುವ ಸ್ವಾಮಿಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು