ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಾಂತ್ವನ ಕೇಂದ್ರ ಸ್ಥಗಿತಕ್ಕೆ ವಿರೋಧ

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ಪ್ರತಿಭಟನೆ
Last Updated 8 ಸೆಪ್ಟೆಂಬರ್ 2021, 13:34 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರಗಳನ್ನು ಮುಂದುವರಿಸಿಕೊಂಡು ಹೋಗಲು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ(ಎಐಎಂಎಸ್‍ಎಸ್) ವಿಜಯಪುರ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಮಹಿಳಾ ಸಾಂತ್ವಾನ ಕೇಂದ್ರಗಳು 20 ವರ್ಷಗಳಿಂದ ನೊಂದ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ, ಆರ್ಥಿಕ ನೆರವು, ಶಿಕ್ಷಣ, ಉದ್ಯೋಗ, ಉಚಿತ ಕಾನೂನು ಸಲಹೆ ನೀಡುವ ಮೂಲಕ ಈ ಕೇಂದ್ರಗಳು ಆತ್ಮಸ್ಥೈರ್ಯವನ್ನು ನೀಡುತ್ತಾ ಬಂದಿವೆ. ಇವುಗಳನ್ನು ಇನ್ನೂ ಉತ್ತಮ ಪಡಿಸಬೇಕಾದ ತುರ್ತು ಅವಶ್ಯಕತೆ ಇಂದಿನ ಸಮಾಜಕ್ಕೆ ಅಗತ್ಯವಿದೆ. ಆದರೆ, ಸರ್ಕಾರ ಹಲವಾರು ಸಮಸ್ಯೆಗಳ ನೆಪವೊಡ್ಡಿ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲು ಹೊರಟಿರುವುದು ಅಪಾಯಕಾರಿಯಾಗಿದೆ. ಇದು ಅತ್ಯಂತ ಖಂಡನೀಯ ಎಂದರು.

ಆರ್ಥಿಕ ಬಿಕ್ಕಟ್ಟು ಹಾಗೂ ಸಾಂಸ್ಕೃತಿಕ ಅಧಃಪತನದಿಂದಾಗಿ ಸಮಾಜದಲ್ಲಿ ದಿನೇ ದಿನೇ ಕೌಟುಂಬಿಕ ಕಲಹಗಳು ಹೆಚ್ಚುತ್ತಿವೆ. ತಾಲ್ಲೂಕು ಕೇಂದ್ರಗಳಲ್ಲಿ ಒಂದು ವರ್ಷಕ್ಕೆ ಸುಮಾರು 10 ಸಾವಿರಕ್ಕೂ ಹೆಚ್ಚು ಕೌಟುಂಬಿಕ ದೌರ್ಜನ್ಯ ಪ್ರಕರಣಗಳೂ ವರದಿಯಾಗಿವೆ. ಜಿಲ್ಲಾವಾರು ಜನಸಂಖ್ಯೆಗೆ 25 ರಿಂದ 35 ಆಪ್ತ ಸಮಾಲೋಚನಾ ಕೇಂದ್ರಗಳು ಅವಶ್ಯಕವಾಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಕೇಂದ್ರಗಳ ಸ್ಥಗಿತದ ನಿರ್ಧಾರವನ್ನು ಕೈಬಿಡುವುದು ಅತ್ಯಂತ ಸೂಕ್ತವಾಗಿದೆ ಎಂದರು.

ಎಷ್ಟೋ ಬಾರಿ ಕೌಟುಂಬಿಕ ಕಲಹಗಳು ಪೊಲೀಸ್ ಠಾಣೆ ಅಥವಾ ನ್ಯಾಯಾಲಯಕ್ಕೆ ಹೋಗದೆ ಕೇವಲ ಆಪ್ತ ಸಮಾಲೋಚನೆಯ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಕೇಂದ್ರಗಳು ಸಹಾಯವಾಗುತ್ತವೆ ಎಂದು ಹೇಳಿದರು.

ನಿರ್ಗತಿಕ ಮಹಿಳೆಯರಿಗೆ ಆಶ್ರಯ ನೀಡುವಲ್ಲಿ ಸಹಕರಿಸಿವೆ, ಬಡ ಮಹಿಳೆಯರಿಗೆ ಕಾನೂನು ನೆರವು ಪಡೆಯಲು 2 ಸಾವಿರ ನ್ಯಾಯಾಧೀಶರ ಶುಲ್ಕದ ಸಹಾಯವನ್ನು ಮಾಡುತ್ತವೆ. ಸಂತ್ರಸ್ತೆಯ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆಯನ್ನು ಸಹ ಮಾಡುತ್ತವೆ. ಅಬಲೆಯರಿಗೆ ನೆರವಾಗಿದ್ದ ಸಾಂತ್ವಾನ ಕೇಂದ್ರಗಳನ್ನು ಸ್ಥಗಿತಗೊಳಿಸುವುದು ಮಹಿಳಾ ವಿರೋಧಿ ಧೋರಣೆಯಾಗಿದೆ ಎಂದು ಆರೋಪಿಸಿದರು.

2001ರಿಂದ ರಾಜ್ಯದಾದ್ಯಂತ 194 ಸಾಂತ್ವಾನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 20 ವರ್ಷಗಳಿಂದ ಈ ಕೇಂದ್ರಗಳಲ್ಲಿ 800 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಸ್ಥಗಿತದ ನಿರ್ಧಾರದಿಂದ 800 ಕುಟುಂಬಗಳು ಬೀದಿ ಪಾಲಾಗುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಐಎಂಎಸ್‍ಎಸ್ ಜಿಲ್ಲಾ ಘಟಕದಿಂದ ಸಂಚಾಲಕರಾದ ಶಿವಬಾಳಮ್ಮ ಕೊಂಡಗೂಳಿ, ಶಿವರಂಜನಿ ಕೆ, ಸುರೇಖಾಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

***

ಮಹಿಳೆಯರ, ಸಾಂತ್ವಾನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಹಿತವನ್ನು ಗಮನದಲ್ಲಿರಿಸಿಕೊಂಡು ಸಾಂತ್ವನ ಕೇಂದ್ರಗಳನ್ನು ಮುಂದುವರಿಸಿಕೊಂಡು ಹೋಗಬೇಕು

-ಶಿವರಂಜನಿ ಕೆ.
ಸಂಚಾಲಕಿ, ಜಿಲ್ಲಾ ಘಟಕ,ಎಐಎಂಎಸ್‍ಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT