ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್ ಇನ್‌ ಕಾರ್ಯಕ್ರಮ: ಸಿಸಿ ರಸ್ತೆ, ಎಲ್ಇಡಿ ಬೀದಿ ದೀಪ, ನೀರು ಪೂರೈಕೆಗೆ ಆದ್ಯತೆ

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ಭರವಸೆ
Last Updated 21 ಜುಲೈ 2020, 13:46 IST
ಅಕ್ಷರ ಗಾತ್ರ

ವಿಜಯಪುರ: ಮಳೆ ನಿಂತ ಬಳಿಕ ನಗರದ ಎಲ್ಲ ರಸ್ತೆಗಳ ಅಭಿವೃದ್ಧಿ, ಸೆಪ್ಟೆಂಬರ್‌ ಅಂತ್ಯದೊಳಗೆ 24X7 ಕುಡಿಯುವ ನೀರು ಪೂರೈಕೆ ಯೋಜನೆ ಪೂರ್ಣ, ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಸೇರಿದಂತೆ ನಗರದ ಮೂಲಸೌಲಭ್ಯ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ತಿಳಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ‘ಫೋನ್‌ ಇನ್‌ ಕಾರ್ಯಕ್ರಮ’ದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸದ್ಯ ಕೋವಿಡ್‌ ಮತ್ತು ಮಳೆಗಾಲ ಇರುವುದರಿಂದ ಬಹುತೇಕ ಕಾಮಗಾರಿಗಳು ವಿಳಂಬವಾಗಿವೆ ಎಂದು ಹೇಳಿದರು.

ಫೋನ್‌ ಇನ್‌ ಕಾರ್ಯಕ್ರಮದ ಆಯ್ದ ಪ್ರಶ್ನೋತ್ತರಗಳು ಇಂತಿವೆ.
* ವಿಜಯ್‌ ಜಿ.ಜೋಶಿ, ಅರವಿಂದ ಸಬರದ, ಅಜೀತ ಮಸಬಿನಾಳ, ಎಸ್‌.ಎಸ್‌.ಕೋರಿ, ಶಕ್ತಿಸಿಂಗ್‌, ಸೂರ್ಯಕಾಂತ ಕಲಗೇರಿ, ಜಾವೀದ್‌ ಶೇಖ್, ಬಾಬುಲಾಲ್‌ ಆಸಂಗಿ, ಆರೀಫ್‌ ನಿರ್ದೆ: ನಗರದ ಬಹುತೇಕ ರಸ್ತೆಗಳು ಗುಂಡಿಬಿದ್ದು, ಹದಗೆಟ್ಟಿವೆ. ಜನ, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ, ಆದಷ್ಟು ಶೀಘ್ರ ರಸ್ತೆಗಳನ್ನು ದುರಸ್ತಿಗೊಳಿಸಿ.

–ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ₹70 ಕೋಟಿ ಅನುದಾನದಲ್ಲಿ ನಗರದ ಎಲ್ಲ ವಾರ್ಡ್‌ಗಳ ಆಂತರಿಕ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಸದ್ಯ ಆರ್ಥಿಕ ಇಲಾಖೆಯು ಟೆಂಡರ್‌ ತಡೆಹಿಡಿದಿದ್ದು, ಒಪ್ಪಿಗೆ ಕೊಟ್ಟ ಬಳಿಕ ಕಾಮಗಾರಿ ಆರಂಭವಾಗಲಿದೆ. ಮುಖ್ಯ ರಸ್ತೆಗಳನ್ನು ದುರಸ್ತಿ ಮಾಡಿಸಲು ಶಾಸಕ ಯತ್ನಾಳ ಅವರು ಉಪ ಮುಖ್ಯಮಂತ್ರಿ ಕಾರಜೋಳ ಅವರಿಗೆ ಮನವಿ ಮಾಡಿದ ಮೇರೆಗೆ ಲೋಕೋಪಯೋಗಿ ಇಲಾಖೆಯಿಂದ ₹ 17ಕೋಟಿ ಮೊತ್ತದಲ್ಲಿ ಡಾಂಬರೀಕರಣ ಮಾಡಲು ಕ್ರಮಕೈಗೊಂಡಿದ್ದಾರೆ. ಟೆಂಡರ್‌ ಪ್ರಕ್ರಿಯೆ ನಡೆದಿದೆ. ಮಳೆ ಮುಗಿದ ಬಳಿಕ ಎಲ್ಲ ರಸ್ತೆ ಡಾಂಬರೀಕರಣ ಮಾಡಲಾಗುವುದು. ಇಟಗಿ ಪೆಟ್ರೋಲ್‌ ಪಂಪ್‌ನಿಂದ ಅಲ್‌ ಅಮಿನ್‌ ವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದ್ದು, ಶೀಘ್ರ ಚತುಷ್ಪಥ ರಸ್ತೆಯಾಗಲಿದೆ.

* ಕಾಶಿಬಾಯಿ ವಾಗ್ಮೋರೆ, ಲೀಲಾವತಿ ಸಜ್ಜನ, ಮೃತ್ಯುಂಜಯ ಪೂಜಾರಿ, ಆರ್‌.ಎಫ್‌.ಬಸರಗಿ: ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. 24X7 ಕುಡಿಯುವ ನೀರು ಪೂರೈಕೆ ಯೋಜನೆ ಯಾವಾಗ ಪೂರ್ಣವಾಗಲಿದೆ.

– 24X7 ಕುಡಿಯುವ ನೀರು ಪೂರೈಕೆ ಯೋಜನೆ ಸೆಪ್ಟಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಲು ಜೈನ್ ಏಜನ್ಸಿಗೆ ಈಗಾಗಲೇ ಡೆಡ್‌ಲೈನ್‌ ಕೊಡಲಾಗಿದೆ. ಅಷ್ಟರೊಳಗೆ ಪೂರ್ಣಗೊಳಿಸದಿದ್ದರೆ ಏಜನ್ಸಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಿರ್ಧರಿಸಲಾಗಿದೆ.

* ಶರಣಬಸು ಕೋನಳ್ಳಿ, ಚೇತನ್‌ ದೇವಣಗಾವ, ಶಿವಲಿಂಗ ಕಲಬುರ್ಗಿ, ಶ್ರೀಕಾಂತ ಪರಮಶೆಟ್ಟಿ, ತೌಹಿದ್‌ ಹುಟಗಿ, ಬಸನಗೌಡ ಬಿರಾದಾರ, ರಾಜೇಂದ್ರ ಸಿಂಗ್‌ ಹಜೇರಿ: ಬೀದಿ ದೀಪಗಳು ಬೆಳಗುತ್ತಿಲ್ಲ. ರಾತ್ರಿ ವೇಳೆ ಸಂಚಾರಕ್ಕೆ ಸಮಸ್ಯೆಯಾಗಿದೆ.

–ನಗರದಲ್ಲಿ ಈಗಿರುವ 18 ಸಾವಿರ ಬೀದಿ ದೀಪಗಳನ್ನು ತೆರವುಗೊಳಿಸಿ 26 ಸಾವಿರ ಎಲ್‌ಇಡಿ ವಿದ್ಯುತ್‌ ಬಲ್ಬ್‌ ಅಳವಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಎಲ್‌ಇಡಿ ಬಲ್ಬ್‌ ಅಳವಡಿಕೆಯಾದ ಬಳಿಕ ಮಹಾನಗರ ಪಾಲಿಕೆಗೆ ಶೇ 60ರಷ್ಟು ವಿದ್ಯುತ್‌ ಬಿಲ್‌ ಉಳಿತಾಯವಾಗಲಿದೆ.

* ಶೋಭಾ ವಾಲಿಕಾರ, ಸುನೀತಾ ಮೋರೆ, ಜಾಯಿಬಾ ಸಿಂದಗಿ, ದಸ್ತಗೀರ ಉಕ್ಕುಲಿ, ಶಿವಶರಣ ಒಣಕೇರಿ, ಚಂದ್ರಶೇಖರ ಗುರಣಾಪುರ: ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಅಲ್ಲದೇ, ಕಸ ವಿಲೇವಾರಿಯೂ ಆಗದೇ ಸಮಸ್ಯೆಯಾಗಿದೆ.

–ಸ್ವಚ್ಛ ಭಾರತ ಮಿಷನ್‌ ಅಡಿ ಕೈಗೊಂಡಿರುವ ಸುಧಾರಣಾ ಕ್ರಮಗಳಿಂದ ಸದ್ಯ ಜಿಲ್ಲೆ 200 ರ‍್ಯಾಂಕ್‌ ಒಳಗೆ ಬಂದಿದೆ. ಇದುವರೆಗೆ 11 ಸಾವಿರ ವೈಯಕ್ತಿಕ ಶೌಚಾಲಯ, 63 ಸಾರ್ವಜನಿಕ ಶೌಚಾಲಯ ಮತ್ತು 18 ಸಮುದಾಯ ಶೌಚಾಲಯ ನಿರ್ಮಾಣ ಮಾಡಲಾಗಿದೆ. ನಿರ್ವಹಣೆ ಇಲ್ಲದೇ ಸಮಸ್ಯೆಯಾಗಿರುವ ಖ್ವಾಜಾ ಅಮಿನ್‌ ದರ್ಗಾ ಮತ್ತು ಅಳವಿ ಮಸೀದಿ ಬಳಿ ಇರುವ ಸಾರ್ವಜನಿಕ ಶೌಚಾಲಯಗಳನ್ನು ಸೂಕ್ತ ನಿರ್ವಹಣೆಗೆ ತಕ್ಷಣ ಕ್ರಮಕೈಗೊಳ್ಳಲಾಗುವುದು.

* ಡಾ.ಚಂದ್ರಕಾಂತ, ಅಭಿಷೇಕ ನಗರ: ಹಂದಿ, ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮಕೈಗೊಳ್ಳಿ.

–ನಗರದಲ್ಲಿ ಈಗಾಗಲೇ 2500 ಹಂದಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಲಾಗಿದೆ. ಸದ್ಯ ಕೋವಿಡ್‌ ಕಾರಣದಿಂದ ಹಂದಿ ಹಿಡಿಯುವ ತಮಿಳುನಾಡಿನ ತಂಡ ಬಂದಿಲ್ಲ. ಸುಮಾರು 1500 ಬೀದಿ ನಾಯಿಗಳಿದ್ದು, ಸದ್ಯ 125 ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇನ್ನುಳಿದ ನಾಯಿಗಳಿಗೂ ಈ ಚಿಕಿತ್ಸೆ ಮಾಡಲು ಸದ್ಯ ಹಣಕಾಸು ಕೊರತೆ ಇದೆ.

* ವೀರಣ್ಣ ಸೂರೇಬಾನ, ಮಲ್ಲಿಕಾರ್ಜುನ ಜುಗುತಿ, ಪಿ.ಬಿ.ಚೌಧರಿ, ಸುರೇಶ ಕಲಾಲ್‌, ಅರುಣ ಕಾಂಬಳೆ, ಸಿಕಂದರ ಮುಜಾವರ, ಅನೀಲಕುಮಾರ ಥುಬ್ಬಿ: ಯುಜಿಡಿ ಕಾಮಗಾರಿ ಪೂರ್ಣವಾಗಿಲ್ಲ. ಸಮಸ್ಯೆಯಾಗಿದ್ದು, ಸರಿಪಡಿಸಿ.

–16ನೇ ಹಣಕಾಸು ಯೋಜನೆಯಡಿ ಯುಜಿಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಹೊಸ ಪ್ರದೇಶದಲ್ಲಿ ಯುಜಿಡಿ ಕಾಮಗಾರಿ ಕೈಗೊಳ್ಳಲು ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿ ಇದ್ದೇವೆ.

* ಜಿ.ಜಿ.ಗಾಂಧಿ, ಸಿದ್ಧೇಶ್ವರ ನಗರ, ಅಥಣಿ ರಸ್ತೆ: ನಗರದ ಬಹುತೇಕ ಕಡೆ ರಸ್ತೆ ಅತಿ ಅಕ್ರಮಿಸಿ ಗ್ರಿಲ್‌ ಹಾಕಿ ಗಿಡಗಳನ್ನು ನೆಟ್ಟಿದ್ದಾರೆ. ಇನ್ನು ಕೆಲವರು ಕಾರು ನಿಲ್ಲಿಸಲು ಶೆಡ್‌ ಹಾಕಿದ್ದಾರೆ. ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗಿದ್ದು, ತೆರವುಗೊಳಿಸಿ.

– ಜನ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲವಾದರೆ ಪಾಲಿಕೆಯಿಂದ ರಸ್ತೆ ಒತ್ತುವರಿ ತೆರವಿಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು.

* ಮೀನಾಕ್ಷಿ ಸಿಂಗೆ, ಶಾ ಪೇಟೆ, ಯಲ್ಲಮ್ಮನಗುಡಿ: ಪೌರಕಾರ್ಮಿಕರು ಗಟಾರ ಸ್ವಚ್ಛಗೊಳಿಸಿದ ಬಳಿಕ ತ್ಯಾಜ್ಯವನ್ನು ತೆಗೆದುಕೊಂಡು ಹೋಗದೇ ಅಲ್ಲಿಯೇ ಬಿಡುತ್ತಿದ್ದು, ಸಮಸ್ಯೆಯಾಗಿದೆ.

–ಕಸ ವಿಲೇವಾರಿಗೆ ಪೌರಕಾರ್ಮಿಕರಿಗೆ ಸೂಕ್ತ ನಿರ್ದೇಶನ ನೀಡುತ್ತೇನೆ.

* ಶಕೀಲ್‌ ಚಿರಲದಿನ್ನಿ, ಮಹಿಬೂಬ್‌ ನಗರ, ಅಮೃತ ಪಲ್ಲೇದ ಆಶ್ರಮ ರಸ್ತೆ: ಮನೆ ಎದುರು ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ನಿರಂತರ ಕುಡಿಯುವ ನೀರಿನ ಪೈಪ್‌ ಹಾಳಾಗಿದ್ದರಿಂದ ನೀರು ನಿಂತು ಸಮಸ್ಯೆ ಆಗುತ್ತಿದೆ. ಖಾಲಿ ಜಾಗದಲ್ಲಿ ಕಸಕಡ್ಡಿ ಹಾಕುವುದನ್ನು ತಡೆಯಬೇಕು

– ಕಸ ಕಡ್ಡಿ ಹಾಕುವುದು ತಡೆಯಲು ಕ್ರಮ ಕೈಗೊಳ್ಳಲಾಗುವುದು

* ಎನ್‌.ಡಿ.ಮಮದಾಪುರ, ಇಟ್ಟಗಿ ಪೆಟ್ರೋಲ್ ಪಂಪ್‌: ಚರಂಡಿ ಇಲ್ಲದಿರುವುದರಿಂದ ಎನ್‌ಎ ಪ್ಲಾಟ್‌ ಇರುವ 8 ರಿಂದ 10 ಮನೆಗಳು ಮಳೆ ಬಂದಾಗ ಜಲಾವೃತ್ತವಾಗುತ್ತಿದ್ದು, ಸಮಸ್ಯೆ ನಿವಾರಿಸಿ.

–ಎಂಜಿನಿಯರ್‌ಗಳಿಗೆ ಸೂಚನೆ ನೀಡಿ ಸದ್ಯ ತಾತ್ಕಾಲಿಕವಾಗಿ ಸರಿಪಡಿಸಿ, ನಂತರ ದಿನಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು.

* ಡಾ.ಆನಂದ ಕುಲಕರ್ಣಿ, ಪ್ರಾಧ್ಯಾಪಕ, ಅಕ್ಕಮಹಾದೇವಿ ಮಹಿಳಾ ವಿವಿ, ಶಾಸ್ತ್ರಿ ನಗರ: ವಿಜಯಪುರ ನಗರದ ಕೆಲ ಬಡಾವಣೆಗಳ ಐತಿಹಾಸಿಕ ಹೆಸರನ್ನು ಒಂದು ಜನರು ತಪ್ಪಾಗಿ ಉಚ್ಛರಿಸುತ್ತಾರೆ. ಇದು ಅನರ್ಥಕ್ಕೆ ಕಾರಣವಾಗಿದ್ದು, ಸರಿಪಡಿಸಲು ಪಾಲಿಕೆ ಕ್ರಮಕೈಗೊಳ್ಳಬೇಕು. ಉದಾಹರಣೆಗೆ ಜೋಹಾರಪುರವನ್ನು ಜನರು ಜೋರಾಪುರ ಎಂದು ಹೇಳುತ್ತಾರೆ.

–ಒಳ್ಳೆಯ ವಿಚಾರ ಹೇಳಿದ್ದೀರಿ. ಐತಿಹಾಸಿಕ ಹೆಸರುಗಳ ಸರಿಯಾದ ಬಳಿಕೆ ಕುರಿತು ತಾವು ಅಗತ್ಯ ಮಾಹಿತಿ ನೀಡಿದರೆ. ಪ್ರಮಾದವನ್ನು ಸರಿಪಡಿಸಲಾಗುವುದು.

* ಅಲೋಕ್‌ ಇಂಗಳೇಶ್ವರ, ಅಭಿಷೇಕ ನಗರ: ನಗರದಲ್ಲಿ ಗಿಡ ನೆಡಲು ಪಾಲಿಕೆಯಿಂದ ಒತ್ತು ನೀಡಿ.

–ಈಗಾಗಲೇ ಬಗೆಬಗೆಯ ಗಿಡಗಳನ್ನು ಬೇಕಾಬಿಟ್ಟಿ ನೆಡಲಾಗಿದೆ. ಇನ್ನು ಮುಂದೆ ನಗರದ ವಾತಾವರಣಕ್ಕೆ ಹೊಂದಿಕೊಳ್ಳುವ ಮತ್ತು ಕಡಿಮೆ ನೀರು ಅಗತ್ಯವಿರುವ ಮತ್ತು ಅಧಿಕ ನೆರಳು ನೀಡುವಂತ ಗಿಡಗಳನ್ನು ಬೆಳಸಲು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕ್ರಮಕೈಗೊಳ್ಳಲಾಗುವುದು.

* ಎಸ್‌.ಐ.ಸುರಪುರ, ಆದರ್ಶನಗರ: ಪಾಲಿಕೆ ಕಾಂಪ್ಲೆಕ್ಸ್‌ ಶಿಥಿಲವಾಗಿದೆ. ಅಪಾಯವಾಗುವ ಮೊದಲು ದುರಸ್ತಿ ಮಾಡಿಸಿ.

–ನಗರದ ಎಲ್‌ಬಿಎಸ್‌ ಮಾರ್ಕೆಟ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಆದರ್ಶನಗರ ಕಾಂಪ್ಲೆಕ್ಸ್‌ ಕೂಡ ದುರಸ್ತಿ ಮಾಡಲಾಗುವುದು.

ಫೋನ್‌ ಇನ್‌ ಕಾರ್ಯಕ್ರಮ ನಿರ್ವಹಣೆ:ಬಸವರಾಜ್‌ ಸಂಪಳ್ಳಿ, ಬಾಬುಗೌಡ ರೋಡಗಿ, ಸಾಯಿಕುಮಾರ್‌ ಕೊಣ್ಣೂರಕರ್‌, ಬಸಪ್ಪ ಮಗದುಮ್. ಚಿತ್ರ: ಸಂಜೀವ ಅಕ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT