ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ‘ಬಿತ್ತನೆ ಬೀಜ, ಗೊಬ್ಬರ ಕೊರತೆ ಇಲ್ಲ; ಆತಂಕ ಬೇಡ’: ಶಿವಕುಮಾರ್‌

Last Updated 26 ಜೂನ್ 2020, 12:50 IST
ಅಕ್ಷರ ಗಾತ್ರ

ವಿಜಯಪುರ: ‘ಪ್ರಸಕ್ತ ಮುಂಗಾರು ಮಳೆ ಉತ್ತಮವಾಗಿ ಆಗಲಿರುವುದಾಗಿ ಹವಾಮಾನ ಇಲಾಖೆ ಆಶಾಭಾವ ವ್ಯಕ್ತಪಡಿಸಿರುವುದರಿಂದ ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆ ಮೀರಿ ಬಿತ್ತನೆ ಕಾರ್ಯ ನಡೆದಿದೆ. ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ; ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಮಾಡಲಾಗುವುದು. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ...’

‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ಫೋನ್‌ ಇನ್‌ ಕಾರ್ಯಕ್ರಮ’ದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್‌ ಅವರು ರೈತರ ಫೋನ್‌ ಕರೆಗಳನ್ನು ‘ಜೈ ಕಿಸಾನ್‌’ ಎಂದು ಹೇಳುತ್ತಲೇ ಸ್ವೀಕರಿಸಿ, ಸಾವಧಾನದಿಂದ ಉತ್ತರಿಸಿದರು.

‘ವಿಜಯಪುರ ಜಿಲ್ಲೆಯಲ್ಲಿ ಸದ್ಯ ತೊಗರಿ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಸೇರಿದಂತೆ 10,244 ಕ್ವಿಂಟಲ್‌ ವಿವಿಧ ಬಿತ್ತನೆ ಬೀಜ ದಾಸ್ತಾನಿದ್ದು, ರೈತ ಸಂಪರ್ಕ ಕೇಂದ್ರದ ಮೂಲಕ ಮಾರಾಟವಾಗುತ್ತಿದೆ. ಅದೇ ರೀತಿ ಡಿಎಪಿ, ಎಂಎಪಿ, ಕಾಂಪೋಸ್ಟ್‌, ಯೂರಿಯಾ ಸೇರಿದಂತೆ 19,782 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು ಇದೆ. ಯಾವುದೇ ಕೊರತೆ ಇಲ್ಲ’ ಎಂದು ಅವರು ರೈತರಲ್ಲಿ ಭರವಸೆ ಮೂಡಿಸಿದರು.

ಕೃಷಿ ಇಲಾಖೆ ಮಾತ್ರವಲ್ಲದೇ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಹಾಗೂ ನೆರೆಯ ಬಾಗಲಕೋಟೆ, ಕಲಬುರ್ಗಿ ಜಿಲ್ಲೆಯ ರೈತರ ಕರೆಗಳಿಗೂ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದರು.

ಫೋನ್‌ ಇನ್‌ ಕಾರ್ಯಕ್ರಮದ ಆಯ್ದ ಪ್ರಶ್ನೋತ್ತರಗಳು ಇಂತಿವೆ

*ರಾಮು ಯಳಮೇಲಿ, ಬಂದ್ಯಾಳ, ಸಿಂದಗಿ, ಬಸವರಾಜ ಗದ್ಯಾಳ, ಕಳ್ಳಕವಟಗಿ, ವಿಜಯಪುರ: ಜಿಲ್ಲೆಯಲ್ಲಿ ಸದ್ಯ ಮಳೆ ಕೊರತೆ ಇರುವುದರಿಂದ ಈ ಅವಧಿಯಲ್ಲಿ ಬಿತ್ತನೆ ಮಾಡುವುದು ಸೂಕ್ತವೇ?

ಮಳೆಯಾಶ್ರಿತ ತೊಗರಿ, ಸೂರ್ಯಕಾಂತಿ, ಸಜ್ಜೆ ಬಿತ್ತನೆಗೆ ಜುಲೈ 15ರವರೆಗೂ ಅವಕಾಶ ಇದೆ. ಇನ್ನೊಂದು ಮಳೆಯಾದರೆ ಬಿತ್ತನೆಗೆ ಯೋಗ್ಯ. ಮೇ, ಜೂನ್‌ನಲ್ಲಿ 95 ಮಿ.ಮೀ.ಮಳೆಯಾಗಬೇಕಿತ್ತು. ಸದ್ಯ 81 ಮಿ.ಮೀ.ಆಗಿದೆ.

*ಅಮರೇಶ ಯತ್ನಾಳ, ಶಂಕರಯ್ಯ ಮೂಲೇದಮಠ, ಬನಹಟ್ಟಿ: ರೈತರಿಗೆ ಸಹಾಯಧನದ ಅಡಿ ಯಾವೆಲ್ಲ ಸೌಲಭ್ಯ ಸಿಗಲಿವೆ?

ಕೃಷಿ ಯಂತ್ರೋಪಕರಣ ಹಾಗೂ ಬಿತ್ತನೆ ಬೀಜ, ರಸಗೊಬ್ಬರವನ್ನು ಸಹಾಯಧನದಲ್ಲಿ ನೀಡಲಾಗುವುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅನುದಾನ ಆಧರಿಸಿ ಫಲಾನುಭವಿಗಳಿಗೆ ಯಂತ್ರೋಪಕರಣ ನೀಡಲಾಗುವುದು.

*ಸಂತೋಷ ಕಳಸರೆಡ್ಡಿ, ದಾದಾಮಟ್ಟಿ, ಬಾಗಪ್ಪಗೌಡ ಪಾಟೀಲ, ಆಹೇರಿ, ಸಿಂದಗಿ: ಕೃಷಿ ಹೊಂಡಗಳ ಅವಶ್ಯಕತೆಯಿದ್ದು, ಯೋಜನೆ ಯಾವಾಗ ಆರಂಭಗೊಳ್ಳಲಿದೆ? ಈಗಾಗಲೇ ಕೆಲ ರೈತರು ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಾರೆ. ಇದುವರೆಗೂ ಬಿಲ್‌ ಬಿಡುಗಡೆಯಾಗಿಲ್ಲ?

ಸದ್ಯ ಕೃಷಿ ಹೊಂಡ ನಿರ್ಮಾಣ ಯೋಜನೆ ಚಾಲ್ತಿಯಲ್ಲಿಲ್ಲ. ಯೋಜನೆ ಮುಂದುವರಿಸುವಂತೆ ರೈತರು, ಶಾಸಕರು, ಜನಪ್ರತಿನಿಧಿಗಳಿಂದ ಬೇಡಿಕೆ ಹೆಚ್ಚಾಗಿದೆ. ಯೋಜನೆ ಮುಂದುವರಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.

*ವಿಠಲ ಯಂಕಂಚಿ, ಬಿ.ಎಸ್‌.ಪಟ್ಟಣ, ಬಿಜ್ಜರಗಿ, ತಿಕೋಟಾ: ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಲು ಹೋದರೆ ಸ್ವೀಕರಿಸದೇ ಏಜೆಂಟ್‌ ಮೂಲಕ ಅರ್ಜಿ ಸ್ವೀಕರಿಸುತ್ತಾರೆ? ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ಬಿತ್ತನೆ ಬೀಜ ಸಿಗುತ್ತಿಲ್ಲ? ಅಲ್ಲದೇ, ರಸಗೊಬ್ಬರ, ಔಷಧ ಅಂಗಡಿಗಳಲ್ಲಿ ದರಪಟ್ಟಿ ಪ್ರದರ್ಶಿಸುತ್ತಿಲ್ಲ?

ನಿರ್ದಿಷ್ಟವಾಗಿ ಯಾವ ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ದೂರು ನೀಡಿದರೆ ಅಂತಹ ಕೇಂದ್ರದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಗೊಬ್ಬರ, ಔಷಧ ಅಂಗಡಿಗಳಲ್ಲಿ ದರಪಟ್ಟಿ ಪ್ರಕಟಿಸುವುದು ಕಡ್ಡಾಯ. ದರಪಟ್ಟಿ ಪ್ರದರ್ಶಿಸದ ಅಂಗಡಿಗಳಿಗೆ ಈಗಾಗಲೇ ನೋಟಿಸ್‌ ನೀಡಿದ್ದೇವೆ. ಶಿಸ್ತು ಕ್ರಮ ಕೈಗೊಳ್ಳಲಾಗುವುದು.

*ಅಪ್ಪಣ್ಣ ನಿಂಗನೂರು, ಮಲಘಾಣ, ರುದ್ರಗೌಡ ಬಿರಾದಾರ, ಸಾರವಾಡ, ಮಾಯಪ್ಪ ಸಾರವಾಡ, ಸುರೇಶ ಅರವತ್ತಿ, ಲಚ್ಯಾಣ, ಇಂಡಿ, ರವಿ ದೇವರಹಿಪ್ಪರಗಿ: 2017–18ನೇ ಸಾಲಿನ ಬೆಳೆ ವಿಮೆ ಯೋಜನೆ ಹಣ ಇನ್ನೂ ಬಂದಿಲ್ಲ?

ಶೇ 95ರಷ್ಟು ರೈತರಿಗೆ ಬೆಳೆ ವಿಮೆ ಹಣ ಸಂದಾಯವಾಗಿದೆ. ಕೆಲವು ರೈತರ ಬ್ಯಾಂಕ್‌ ಖಾತೆ ನಂಬರ್‌ ಮತ್ತು ಆಧಾರ್‌ ನಂಬರ್‌ ಹೊಂದಾಣಿಕೆಯಾಗದೆ ತಾಂತ್ರಿಕ ತೊಂದರೆ ಇರುವುದರಿಂದ ಸಂದಾಯವಾಗಿಲ್ಲ. ಅದನ್ನು ಸರಿಪಡಿಸುವ ಕಾರ್ಯ ನಡೆದಿದ್ದು, ಬಳಿಕ ಅರ್ಹ ಫಲಾನುಭವಿ ರೈತರ ಖಾತೆಗೆ ಸಂದಾಯವಾಗಲಿದೆ.

*ಸಚ್ಚಿನ್‌ ಬಾಲಗೊಂಡ, ಕೊಲ್ಹಾರ: ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ಸರಿಯಾದ ಧಾರಣೆ ಸಿಗುತ್ತಿಲ್ಲ. ಸರ್ಕಾರ ನೆರವಿಗೆ ಬರಬೇಕು.

ಕೋವಿಡ್‌ ಹಿನ್ನೆಲೆಯಲ್ಲಿ ಮಾರುಕಟ್ಟೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ರೈತರ ಬೆಳೆಗೆ ಸರಿಯಾದ ಧಾರಣೆ ಸಿಗದೆ ಸಮಸ್ಯೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಿಹೋಗಲಿದೆ. ಮಾರುಕಟ್ಟೆ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ರೈತ ಉತ್ಪಾದಕ ಸಂಘ ಆರಂಭಕ್ಕೆ ಉತ್ತೇಜನ ನೀಡುತ್ತಿದ್ದು, ರೈತರು ಉತ್ಪಾದಕ ಸಂಘ ಮಾಡಿಕೊಳ್ಳಲು ಆದ್ಯತೆ ನೀಡಬೇಕು. ಆಗ ಉತ್ತಮ ಮಾರುಕಟ್ಟೆ ಮತ್ತು ಬೆಲೆ ಸಿಗಲಿದೆ. ಅಲ್ಲದೇ, ಎಪಿಎಂಸಿ ವ್ಯವಸ್ಥೆಯಲ್ಲೂ ಸರ್ಕಾರ ಬದಲಾವಣೆ ತಂದಿದೆ.

*ಮಹಾಂತೇಶ ಉಪ್ಪಿನ, ಸಿಂದಗಿ: ಹನಿನೀರಾವರಿ ಮೂಲಕ ತೊಗರಿ, ಹತ್ತಿ ಬೆಳೆ ಬೆಳೆಯುತ್ತಿದ್ದೇನೆ. ಜಿಲ್ಲೆಯ ರೈತರು ಈ ವಿಧಾನ ಅಳವಡಿಸಿಕೊಳ್ಳಲು ಇಲಾಖೆಯಿಂದ ಮಾರ್ಗದರ್ಶನ ನೀಡಬಹುದೇ?

–ವೈಜ್ಞಾನಿಕ ಪದ್ಧತಿ ಅನುಸರಿಸಿಕೊಂಡು ಕೃಷಿ ಮಾಡುತ್ತಿರುವ ನಿಮ್ಮ ಕೆಲಸ ಪ್ರಶಂಸನೀಯ. ನಿಮ್ಮ ಹೊಲಕ್ಕೆ ಖುದ್ದು ಭೇಟಿ ನೀಡಿ ವೀಕ್ಷಿಸುತ್ತೇನೆ. ನಿಮ್ಮ ಅನುಭವ, ಸಲಹೆಯನ್ನು ಇತರೆ ರೈತರಿಗೂ ಇಲಾಖೆ ಮೂಲಕ ತಲುಪಿಸಲಾಗುವುದು.

*ಆಶಿಫ್‌ ಕಲಾವಂತ್‌, ಐರಸಂಗ, ಇಂಡಿ: ರೈತ ಉತ್ಪಾದಕ ಕಾರ್ಡ್‌ ನೀಡಿದ್ದಾರೆ. ಇದರ ಪ್ರಯೋಜನವೇನು?

ರೈತರಿಗೆ ಗ್ರೀನ್‌ ಕಾರ್ಡ್‌ ಅಥವಾ ರೈತ ಉತ್ಪಾದಕ ಕಾರ್ಡ್‌ ನೀಡಲು ಸರ್ಕಾರ ಯೋಜಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ರೈತರು ಬೆಳೆ ವಿಮೆ, ಬೆಳೆ ಪರಿಹಾರ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಬಳಕೆಗೆ ಬರಲಿದೆ.

*ಮಲ್ಲಣ್ಣ ಬಿರಾದಾರ, ಕಲ್ಲದೇವನಹಳ್ಳಿ, ತಾಳಿಕೋಟೆ: ಕೃಷಿ ಇಲಾಖೆಯಿಂದ ಕೊಳವೆಬಾವಿ ಕೊರೆಸಲು ಸೌಲಭ್ಯ ಇದೆಯೇ?

ಕೊಳವೆಬಾವಿ ಕೊರೆಯಿಸುವುದು ಕೃಷಿ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ.

*ಜಗದೀಶ ಪಾಟೀಲ, ಕೊಂಡಗುಳಿ,ದೇವರಹಿಪ್ಪರಗಿ: ಬೀಜ ಖರೀದಿಯಲ್ಲಿ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೀಜ ವಿತರಣೆಗೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಿ

ವಿತರಣಾ ಕೇಂದ್ರಗಳ ಸಂಖ್ಯೆ ಹೆಚ್ಚಿಸುವ ಅಧಿಕಾರ ನಮಗಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು. ನೂತನ ತಾಲ್ಲೂಕು ಆಗಿರುವುದರಿಂದ ಮುಂಬರುವ ದಿನಗಳಲ್ಲಿ ಹೋಬಳಿಗಳ ಸಂಖ್ಯೆ ಹೆಚ್ಚಾಗಲಿದ್ದು, ಆಗ ಈ ಸಮಸ್ಯೆ ಬಗೆಹರಿಯಲಿದೆ.

*ಸುದೇಶ ಬೆಲ್ಲದ, ತಾಂಬಾ,ಇಂಡಿ: ಮಡ್ಡಿ ಜಮೀನಿನಲ್ಲಿ ನಿಂಬೆ ಮತ್ತು ದಾಳಿಂಬೆ ಈ ಎರಡಲ್ಲಿ ಯಾವುದು ಬೆಳೆಯುವುದು ಸೂಕ್ತ?

ಎರಡು ಬೆಳೆ ಬೆಳೆಯಬಹುದು. ಮಣ್ಣಿನ ಗುಣಧರ್ಮ ತಕ್ಕಂತೆ ಹಾಗೂ ಮಾರುಕಟ್ಟೆ ಗಮನದಲ್ಲಿಟ್ಟುಕೊಂಡು ಸೂಕ್ತ ಬೆಳೆದರೆ ಒಳ್ಳೆಯದು. ಸಮಗ್ರ ಕೃಷಿ ಅಳವಡಿಸಿಕೊಂಡರೆ ರೈತರಿಗೆ ಅನುಕೂಲ ಹೆಚ್ಚು.

*ದಾನಪ್ಪ ಕುರಿ, ನಾಲತವಾಡ, ಮುದ್ದೇಬಿಹಾಳ: ಹನಿ ನೀರಾವರಿಗಾಗಿ ಅರ್ಜಿ ಸಲ್ಲಿಸಿ, ಹಣ ತುಂಬಿದ್ದೇವೆ. ಯಾವಾಗ ಪೈಪ್‌ಗಳು ಬರಲಿವೆ?

ಈ ವರ್ಷದ ಯೋಜನೆಗಳು ಆರ್ಥಿಕ ಇಲಾಖೆಗೆ ಹೋಗಿವೆ. ಅನುಮತಿಯ ನಿರೀಕ್ಷೆಯಲ್ಲಿದ್ದೇವೆ. ಆದಷ್ಟು ಶೀಘ್ರ ವಿತರಿಸಲಾಗುವುದು.

*ಮಾದೇವಿ ಹಿರೇಮಠ, ಹಂಗರಗಾದ, ಜೇವರಗಿ: ಐದಾರು ವರ್ಷಗಳಿಂದ ತೊಗರಿ ಬೆಳೆಯಲಾಗುತ್ತಿದೆ. ಬೆಳೆ ಬದಲಾವಣೆ ಆಗಬೇಕಾ?

ಪ್ರತಿ ವರ್ಷ ಒಂದೇ ಬೆಳೆಗೆ ಸೀಮಿತವಾಗಬಾರದು. ಇದರಿಂದ ಕೀಟ, ರೋಗ ಬಾಧಿಸಬಹುದು. ಬದಲಾವಣೆ ಮಾಡಿದರೆ ಒಳ್ಳೆಯದು. ತೊಗರಿ ಜತೆ ಮಿಶ್ರ ಬೆಳೆ ಬೆಳೆಯಬೇಕು.

*ಸಂಜೀವಕುಮಾರ್‌ ಬೈರಶೆಟ್ಟಿ, ಅಧ್ಯಕ್ಷ, ಇಂಡಿ ಪಿಕೆಪಿಎಸ್‌, ಎಸ್‌.ಟಿ.ಪಾಟೀಲ, ನಾದ ಬಿ.ಕೆ., ಮಧುಮತಿ ವಿಠಲ ಮಹೇಂದ್ರಕರ, ಧನಶೆಟ್ಟಿ ತಾಂಡಾ, ಇಂಡಿ, ಬಸವರಾಜ ಮಾದನಶೆಟ್ಟಿ, ಬಸವನ ಬಾಗೇವಾಡಿ: ಜಿಲ್ಲೆಯಲ್ಲಿ ಬೆಳೆ ವಿಮೆ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಇಲ್ಲ. ಬೆಳೆ ಜಿಪಿಎಸ್‌ ದಾಖಲೀಕರಣ ಸಂದರ್ಭದಲ್ಲಿ ಲೋಪವಾಗುತ್ತಿದೆ. ರೈತರ ನಿರ್ದಿಷ್ಟ ಬೆಳೆಯನ್ನು ಹೆಸರಿಸದೇ, ಬೇರೆ, ಬೇರೆ ಬೆಳೆಯನ್ನು ದಾಖಲಿಸಲಾಗುತ್ತಿದೆ. ತೊಗರಿ ಬದಲು ಕಡಲೆ, ಕಡಲೆ ಬದಲು ತೊಗರಿ ಎಂದು ನಮೂದಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವಿಮೆ ಕಂತು ಕಟ್ಟಲು ರೈತರು ಹೋದರೆ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಹೀಗಾಗಿ ಪಿಕೆಪಿಎಸ್‌ನಲ್ಲಿ ಬೆಳೆ ವಿಮೆ ಕಂತು ಕಟ್ಟಲು ಅವಕಾಶ ನೀಡಿ.

ಬೆಳೆ ವಿಮೆ ಬಗ್ಗೆ ಇಲಾಖೆಯಿಂದ ರೈತರಿಗೆ ಸಾಕಷ್ಟು ಅರಿವು ಮೂಡಿಸಲಾಗಿದೆ. ಪರಿಣಾಮ ಕಳೆದ ಬಾರಿ ಇಡೀ ರಾಜ್ಯದಲ್ಲೇ ಹೆಚ್ಚು ಅಂದರೆ, ₹ 256 ಕೋಟಿ ಮುಂಗಾರು ಬೆಳೆ ವಿಮೆ ರೈತರಿಗೆ ಪಾವತಿಯಾಗಿದೆ. ಜಿಪಿಎಸ್‌ ಮೂಲಕ ಬೆಳೆ ಸಮೀಕ್ಷೆ ಚೆನ್ನಾಗಿ ನಡೆಯುತ್ತಿದೆ. ಪರಿಣಾಮ ರೈತರಿಗೆ ಶೀಘ್ರ ಬೆಳೆವಿಮೆ, ಪರಿಹಾರ ಲಭಿಸುತ್ತಿದೆ. ಜಿಪಿಎಸ್‌ನಲ್ಲಿ ಯಾವುದೇ ತೊಂದರೆ ಆದರೂ ಸರಿಪಡಿಸಲಾಗುವುದು

‘ಬೆಳೆದರ್ಶಕ’ ಆ್ಯಪ್‌ ಮೂಲಕ ರೈತರೇ ತಾವು ಬೆಳೆದ ಬೆಳೆಯನ್ನು ಅಪ್‌ಲೋಡ್‌ ಮಾಡಲು ಅವಕಾಶ ಇದೆ. ರಾಷ್ಟ್ರೀಕೃತ ಬ್ಯಾಂಕ್‌, ಡಿಸಿಸಿ ಬ್ಯಾಂಕ್‌, ಸೇವಾಸಿಂಧು ಕೇಂದ್ರಗಳಲ್ಲಿ ರೈತರು ಬೆಳೆ ವಿಮೆ ಕಂತು ಪಾವತಿಸಲು ಅವಕಾಶ ಇದೆ. ರೈತರು ತಮ್ಮ ಹೆಸರು, ಪಹಣಿ, ಆಧಾರ್‌ ಮತ್ತು ಬ್ಯಾಂಕ್‌ ಖಾತೆ ನಂಬರ್‌ ಅನ್ನು ಸರಿಯಾಗಿ ನೋಂದಾಯಿಸಬೇಕು. ಇಲ್ಲವಾದರೆ ಮುಂದೆ ಸಮಸ್ಯೆಯಾಗಲಿದೆ. ಸದ್ಯ ಪಿಕೆಪಿಎಸ್‌ಗಳಲ್ಲಿ ವಿಮಾ ಕಂತು ತುಂಬಲು ಅವಕಾಶವಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು.

ಫೋನ್‌ ಇನ್‌ ಕಾರ್ಯಕ್ರಮ ನಿರ್ವಹಣೆ: ಬಸವರಾಜ್‌ ಸಂಪಳ್ಳಿ, ಬಾಬುಗೌಡ ರೋಡಗಿ, ಬಸಪ್ಪ ಮಗದುಮ್‌, ಸಾಯಿಕುಮಾರ್ ಕೊಣ್ಣೂರಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT