ಬುಧವಾರ, ಜೂನ್ 16, 2021
27 °C
ಗ್ರಾಮ ಪಂಚಾಯಿತಿ ಕೋವಿಡ್ ಕಾರ್ಯಪಡೆ ಅಧ್ಯಕ್ಷರು, ಸದಸ್ಯರೊಂದಿಗೆ ಸಂವಾದ

ಹಳ್ಳಿಗಳಲ್ಲಿ ಕೋವಿಡ್‌ ಹರಡದಂತೆ ಕ್ರಮಕ್ಕೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಕೋವಿಡ್ ಎರಡನೇ ಅಲೆ ಗ್ರಾಮಮಟ್ಟದಲ್ಲಿ ವ್ಯಾಪಕವಾಗಿ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಯ ಕೋವಿಡ್ ಕಾರ್ಯಪಡೆಯ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ  ಕೋವಿಡ್ ವಾರಿಯರ್ಸ್‌ಗಳೊಂದಿಗೆ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಯುಟ್ಯೂಬ್ ಚಾನಲ್ ಮುಖಾಂತರ ಶನಿವಾರ ಸಂವಾದ ನಡೆಸಿದರು.

ಕೋವಿಡ್ ಅಲೆಯು ಹರಡದಂತೆ ಸರಪಳಿಯನ್ನು ತುಂಡರಿಸಲು ಈಗಾಗಲೇ ಸರ್ಕಾರದಿಂದ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಿ ಆದೇಶಿಸಲಾಗಿದೆ. ಪ್ರಸ್ತುತ ಕೋವಿಡ್ ಪ್ರಕರಣಗಳು ನಗರ-ಪಟ್ಟಣ ಮಟ್ಟದಿಂದ ಗ್ರಾಮಮಟ್ಟದಲ್ಲಿ ವೇಗವಾಗಿ ಹರಡುತ್ತಿದ್ದು ಇದರ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಮಾಸ್ಕ್‌ ಧರಿಸುವುದು, ಅಂತರವನ್ನು ಕಾಯ್ದುಕೊಳ್ಳುವುದು, ಸುಚಿತ್ವ ಕಾಪಾಡುವ ಮೂಲಕ ಜಿಲ್ಲೆಯ ಪ್ರತಿಯೊಂದು ಗ್ರಾಮಗಳನ್ನು ಕೋವಿಡ್ ಮುಕ್ತ ಗ್ರಾಮಗಳನ್ನಾಗಿ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋವಿಂದ ರೆಡ್ಡಿ ರವರು ಮಾತನಾಡಿ, ಕೋವಿಡ್- 19 ಕುರಿತು ಗ್ರಾಮಸ್ಥರಿಗೆ ಈಗಾಗಲೇ ಸಾಕಷ್ಟು ತಿಳಿವಳಿಕೆ ಇದ್ದರೂ ಸಹ ಮಾಸ್ಕ್‌ ಧರಿಸದೇ ಇರುವುದು ಮತ್ತು  ಅಂತರವನ್ನು ಕಾಪಾಡಿಕೊಳ್ಳದೆ ಇರುವುದರಿಂದ ಗ್ರಾಮೀಣ ಮಟ್ಟದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಇದೊಂದು ಅತ್ಯಂತ ಕಷ್ಟ ಕಾಲವಾಗಿದೆ. ಇಂತಹ ಸಮಯದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಪಡೆಯ ಅಧ್ಯಕ್ಷರು ಹಾಗೂ ಸದಸ್ಯರು ಪ್ರತಿ ಮನೆ ಮನೆ ತೆರಳಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ 15ನೇ ಹಣಕಾಸು ಯೋಜನೆಯಡಿ ಇರುವ ಅನುದಾನವನ್ನು ನಿಯಮಾನುಸಾರ ಬಳಸಿಕೊಂಡು ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಔಷಧೀಯ ಕಿಟ್‌ಗಳನ್ನು ಖರೀದಿಸಲು ಅಗತ್ಯ ಕ್ರಮವಹಿಸಲು ಗ್ರಾಮ ಪಂಚಾಯಿತಿ ಕಾರ್ಯಪಡೆಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಗೋವಿಂದ ರೆಡ್ಡಿ ತಿಳಿಸಿದರು.

ನೆಗಡಿ, ಕೆಮ್ಮು, ಜ್ವರ ಇನ್ನಿತರೆ ಕೋವಿಡ್ ಲಕ್ಷಣಗಳು ಕಂಡು ಬಂದ ಕೂಡಲೇ ಗ್ರಾಮಸ್ಥರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದುಕೊಂಡು ಔಷಧಿಯನ್ನು ತೆಗೆದುಕೊಳ್ಳಲು ಗ್ರಾಮಸ್ಥರಿಗೆ ಸೂಕ್ತ ತಿಳಿವಳಿಕೆ ನೀಡಲು ಡಾ.ಮುಕುಂದ ಗಲಗಲಿ, ಡಾ.ಲಕ್ಕಣ್ಣವರ್ ಹಾಗೂ ಡಾ. ಮದರಕಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.