ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಘ್ನನಿವಾರಕ’ ವಿನಾಯಕನ ಆರಾಧನೆಗೆ ಸಜ್ಜು

ಕೋವಿಡ್‌ ನಿರ್ಬಂಧಗಳ ನಡುವೆಯೇ ಹಬ್ಬದ ಸಂಭ್ರಮ
Last Updated 9 ಸೆಪ್ಟೆಂಬರ್ 2021, 16:27 IST
ಅಕ್ಷರ ಗಾತ್ರ

ವಿಜಯಪುರ: ‘ವಿಘ್ನನಿವಾರಕ’ ವಿನಾಯಕನ ಆರಾಧನೆಗೆ ನಗರ ಸೇರಿದಂತೆ ಜಿಲ್ಲೆಯದ್ಯಂತ ಮನೆ, ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ಭರದ ಸಿದ್ಧತೆ ನಡೆದಿದೆ.

ಹಬ್ಬದ ಮುನ್ನಾ ದಿನವಾದ ಗುರುವಾರ ಮಾರುಕಟ್ಟೆಯಲ್ಲಿ ಗಣಪತಿ ಮೂರ್ತಿಗಳ ಮಾರಾಟ,ಪೂಜಾ ಸಾಮಾನು, ಆಲಂಕಾರಿಕ ವಸ್ತುಗಳು, ಹಣ್ಣು–ಹಂಪಲು, ಬಾಳೆಗಿಡಗಳು, ತೋರಣ ಸೇರಿದಂತೆ ಮತ್ತಿತರರ ವಸ್ತುಗಳ ಖರೀದಿ ಜೋರಾಗಿತ್ತು. ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿತ್ತು.

ಒಂದು ಅಡಿ ಮಣ್ಣಿನ ಗಣಪನ ಮೂರ್ತಿಗೆ ₹250, ಅದಕ್ಕಿಂತ ಚಿಕ್ಕವುಗಳಿಗೆ ₹100 ರಿಂದ ₹150 ಹಾಗೂ 4 ರಿಂದ 5 ಅಡಿ ಅಡಿ ಎತ್ತರದ ಗಣಪನ ಮೂರ್ತಿಗಳು ₹5 ಸಾವಿರದ ವರೆಗೆ ಮಾರಾಟವಾಗುತ್ತಿದ್ದವು. ಮೂರ್ತಿ ಖರೀದಿಸಿ ವಾದ್ಯ ಮೇಳ, ಪಟಾಕಿ ಸದ್ದಿನೊಂದಿಗೆ ಕೊಂಡೊಯ್ಯುವ ದೃಶ್ಯ ಕಂಡುಬಂದಿತು.

ವಿಜಯಪುರ ನಗರವೊಂದರಲ್ಲೇ ಸುಮಾರು 400ಕ್ಕೂ ಅಧಿಕ ಹಾಗೂ ಜಿಲ್ಲೆಯ ವಿವಿಧ ಪಟ್ಟಣ, ಹಳ್ಳಿಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಗಣಪನ ಪ್ರತಿಷ್ಠಾಪಿಸಿ ಮೂರು, ಐದು, ಏಳು ದಿನಗಳ ಕಾಲ ಪೂಜಿಸಲಿದ್ದಾರೆ.

ನಗರ, ಪಟ್ಟಣ ಹಾಗೂ ಗ್ರಾಮಗಳ ಪ್ರಮುಖ ವೃತ್ತ, ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗಾಗಿ ಮೂರ್ನಾಲ್ಕು ದಿನಗಳಿಂದ ಟೆಂಟ್‌ ಹಾಕಿ, ಆಲಂಕಾರ ಮಾಡುವಲ್ಲಿ ಮಕ್ಕಳು, ಯುವಕರು, ಹಿರಿಯರು ತೊಡಗಿಕೊಂಡಿರುವುದು ಕಂಡುಬಂದಿತು. ಅಲ್ಲದೇ, ಮನೆ, ಕಚೇರಿಗಳಿಗೆ ತೆರಳಿ ಗಣಪತಿ ಪ್ರತಿಷ್ಠಾಪನೆಗಾಗಿ ದೇಣಿಗೆ, ಚಂದಾ ಸ್ವೀಕಾರ ಮಾಡಿದ್ದಾರೆ.

ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ನಿರ್ಬಂಧ ಹೇರಿದ್ದರೂ ಅತ್ಯಾಕರ್ಷ ಪಿಒಪಿ ಮೂರ್ತಿಗಳ ಮಾರಾಟವೇ ಎಲ್ಲೆಡೆ ಹೇರಳವಾಗಿ ಕಂಡುಬಂದಿತು. ಮಣ್ಣಿನ ಗಣಪನ ಮೂರ್ತಿಗಳು ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ.

ಕೋವಿಡ್‌ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೇವಲ ಐದು ದಿನದ ಉತ್ಸವಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ. ಆದರೆ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆಗೆ ನಿರ್ಬಂಧಗಳನ್ನು ವಿಧಿಸಿದೆ.

‘ಮನೆಯಲ್ಲಿ ತಯಾರಿಸಿದ ಮಣ್ಣಿನ ಗಣೇಶ ಮೂರ್ತಿಗಳ ಜೊತೆಗೆ ಪರ ಸ್ಥಳದಿಂದ ತಂದಿರುವ ಮಣ್ಣಿನ ಗಣೇಶ ಮೂರ್ತಿಗಳೊಂದಿಗೆ ಮಂಟಪ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೇನೆ. ಜನರು ಗಣೇಶ ಮೂರ್ತಿಗಳನ್ನು ಚೌಕಾಸಿ ಮಾಡಿ ಖರೀದಿಸುತ್ತಿದ್ದಾರೆ. ಆದರೆ, ಮಂಟಪಗಳ ಅಲಂಕಾರಿಕ ವಸ್ತುಗಳ ಖರೀದಿಗೆ ಮುಂದಾಗುತ್ತಿಲ್ಲ. ಅಲಂಕಾರಿಕ ವಸ್ತುಗಳಿಗೆ ಹಾಕಿದ ಬಂಡವಾಳ ಮರಳಿ ಬರುತ್ತದೋ, ಇಲ್ಲವೋ ಎಂಬ ಆತಂಕವಿದೆ’ ಎಂದು ಬಸವನ ಬಾಗೇವಾಡಿಯಲ್ಲಿ ಗಣೇಶ ಮೂರ್ತಿ ಹಾಗೂ ಅಲಂಕಾರಿಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದಮಂಜು ಬಡಿಗೇರ ಹೇಳಿದರು.

‘ಈ ವರ್ಷ ಎತ್ತರದ ಗಣಪತಿ ಮೂರ್ತಿಗಳನ್ನು ತಯಾರಿಸಿಲ್ಲ. ಎರಡು ಅಡಿಗಿಂತ ಕಡಿಮೆ ಎತ್ತರದ ಮೂರ್ತಿ ಮಾಡಿದ್ದೇವೆ. ಅದರಲ್ಲೂ ಮಣ್ಣಿನ ಗಣಪತಿ ಮಾಡಲು ಉತ್ಸಾಹ ತೋರಿದ್ದೇವೆ. ಕೊರೊನಾದಿಂದಾಗಿ ಮಾರಾಟಕ್ಕೆ‌ ಭಾರಿ ಹೊಡೆತ ಬಿದ್ದಿದೆ. ಮುಂಗಡ ಬುಕ್ಕಿಂಗ್ ಆಗಿಲ್ಲ, ಮನೆಯಲ್ಲಿ ಕೂರಿಸುವ ಗಣಪತಿ ವಿಗ್ರಹ ತಯಾರಿಸಲಾಗಿದೆ’ ಎಂದು ಆಲಮೇಲದಸಂಗಯ್ಯ ಮುಳಮಠ ಹೇಳಿದರು.

ಸಿಂದಗಿ: ಕಾಣದ ಹಬ್ಬದ ಉತ್ಸಾಹ

ಪಟ್ಟಣದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಅಷ್ಟಾಗಿ ಉತ್ಸಾಹ ಕಾಣುತ್ತಿಲ್ಲ. ಆದಾಗ್ಯೂ ಶಾಂತೇಶ್ವರ ಚೌಕ, ಸೋಮಲಿಂಗೇಶ್ವರ ಚೌಕ, ಬಸವೇಶ್ವರ ವೃತ್ತ ಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗಾಗಿ ವೇದಿಕೆ ಸಿದ್ಧತಾ ಕಾರ್ಯ ಕಂಡು ಬಂದಿತು.

ಇಲ್ಲಿಯ ತೋಂಟದ ಡಾ.ಸಿದ್ಧಲಿಂಗ ಶ್ರೀಗಳ ಮುಖ್ಯರಸ್ತೆಯಲ್ಲಿ 5-6 ಸ್ಥಳಗಳಲ್ಲಿ ಪ್ರತ್ಯೇಕವಾಗಿ ಗಣೇಶ ಮೂರ್ತಿ ಮಾರಾಟ ನಡೆದಿತ್ತು. ಖರೀದಿಸುವ ಜನರು ಅಷ್ಟಾಗಿ ಕಾಣಲಿಲ್ಲ. ಗಣೇಶನ ಪ್ರತಿಷ್ಠಾಪನೆ ದಿನವೇ ಖರೀದಿಸಲು ಬಂದರೂ ಬರಬಹುದು ಎಂದು ಮಾರಾಟಗಾರರಿಂದ ಕೇಳಿ ಬಂದಿತು.

ಇದೇ ವರ್ಷ ಗಣೇಶ ಮೂರ್ತಿ ಮಾರಾಟ ಮಾಡಬೇಕು ಎಂದು ಸೋಲಾಪೂರದಿಂದ ಮೂರ್ತಿಗಳನ್ನು ಖರೀದಿಸಿ ತಂದರೆ ಮಾರಾಟ ಆಗ್ತಿಲ್ಲ. ₹ 10 ಸಾವಿರ ಕಿಮ್ಮತ್ತಿನ 5 ಅಡಿ ಗಣೇಶ ಮೂರ್ತಿಯನ್ನು ₹ 5 ಸಾವಿರಕ್ಕೆ ಕೇಳಿ ಹೋಗ್ತಿದ್ದಾರೆ ಎನ್ನುತ್ತಾರೆ ಲಕ್ಷ್ಮೀ ಹಾವಳಗಿ.

ಒಂದು ತಿಂಗಳಿಂದ ಕಷ್ಟಪಟ್ಟು ಸಿದ್ಧಪಡಿಸಿ ಮಾರಾಟಕ್ಕೆ ತಂದ 200 ಮಣ್ಣಿನ ಗಣಪತಿ ಮೂರ್ತಿ ಖರೀದಿಸಲು ಜನ ಬರುತ್ತಿಲ್ಲ. ₹100ರಿಂದ ₹400ರ ವರೆಗೆ ಪರಿಸರ ಸ್ನೇಹಿ ಗಣಪ ಮೂರ್ತಿ ಕೊಡಲು ಮುಂದಾದರೂ ಕೊಳ್ಳುವವರೇ ಇಲ್ಲದಾಗಿದೆ ಎನ್ನುತ್ತಾರೆ ಕಲಬುರ್ಗಿ ಜಿಲ್ಲೆಯ ಕುಳಗೇರಿಯ ಯುವ ಕಲಾವಿದ ಸಿದ್ದು ಪತ್ತಾರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT