ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೊಲಕ್ಕೆ ನೀರು ಹರಿಸಲು ಆದ್ಯತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊರ್ತಿ– ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಶಂಕು ಸ್ಥಾಪನೆ
Last Updated 9 ಮಾರ್ಚ್ 2023, 16:20 IST
ಅಕ್ಷರ ಗಾತ್ರ

ವಿಜಯಪುರ: ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಮೊದಲ ಹಂತ ಮುಗಿಯುವ ಒಳಗಾಗಿ ಎರಡನೇ ಹಂತಕ್ಕೆ ಮಂಜೂರಾತಿ ನೀಡುತ್ತೇವೆ. ಈ ಯೋಜನೆಯನ್ನು ನಾವೇ ಪೂರ್ಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಹೊರ್ತಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಹಂತ 1 ಹಾಗೂ ಇಂಡಿ ತಾಲ್ಲೂಕಿನ 16 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಯೋಜನೆಗೆ ಶಂಕುಸ್ಥಾಪನೆ ಮಾಡಿರುವ ಬಗ್ಗೆ ತೃಪ್ತಿ ಇದೆ. ಆದರೆ, ನಮಗೆ ಸಂತೃಪ್ತಿ, ಸಮಾಧಾನ ಆಗಲ್ಲ. ನೀರು ರೈತನ ಹೊಲಕ್ಕೆ ಬರುವವರೆಗೂ ವಿಶ್ರಮಿಸುವುದಿಲ್ಲ ಎಂದರು.

ಈ ಎರಡು ಮಹತ್ವದ ಯೋಜನೆಗಳ ಅನುಷ್ಠಾನದಿಂದ ವಿಜಯಪುರ ಜಿಲ್ಲೆಯಲ್ಲಿ ದೊಡ್ಡ ಬದಲಾವಣೆ ಮಾಡಲಿದೆ. ರೈತರಿಗೆ ದೊಡ್ಡ ಪ್ರಮಾಣದಲ್ಲಿ ಪುಷ್ಠಿ ಸಿಗಲಿದೆ ಎಂದರು.

ಯುಕೆಪಿ ಮೂರನೇ ಹಂತಕ್ಕೆ ಸಂಬಂಧಿಸಿದ ಸಂತ್ರಸ್ತರಿಗೆ ಪರಿಹಾರ ನೀಡುವುದರಿಂದ ಆಲಮಟ್ಟಿ ಜಲಾಶಯದ ಎತ್ತರವನ್ನು ಈಗಿನ 519 ಮೀಟರ್‌ನಿಂದ 524 ಮೀಟರ್‌ಗೆ ಎತ್ತರಿಸಲು ಅನುಕೂಲವಾಗಲಿದೆ. ಅಲ್ಲದೇ, 80 ಟಿಎಂಸಿ ನೀರು ವಿಜಯಪುರಕ್ಕೆ ಲಭಿಸುವ ದಿನ ದೂರವಿಲ್ಲ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಆರಂಭಿಸಿದ್ದು ಮೊದಲಿಗೆ ನಾನು. ಸ್ಕೀಮ್ ಎ ಮತ್ತು ಬಿ ನೆಪದಲ್ಲಿ ಅಧಿಕಾರಿಗಳು ಬಿ ಸ್ಕೀಮ್‌ ಮಾಡಲು ಬರುವುದಿಲ್ಲ ಎಂದು ತಡೆ ಒಡ್ಡುತ್ತಿದ್ದರು. ಆದರೆ, ಬೇರೆ ರಾಜ್ಯಗಳಲ್ಲಿ ಇರದ ಸ್ಕೀಮ್ ‘ಬಿ’ ನಮ್ಮಲ್ಲಿ ಏಕೆ ಎಂದು ಪ್ರಶ್ನಿಸಿದೆ. ಇದಕ್ಕೆ ಅಧಿಕಾರಿಗಳಿಂದ ಉತ್ತರ ಸಿಗಿಲ್ಲ ಎಂದರು.

ರಾಜಕಾರಣದಲ್ಲಿ ಎರಡು ಬಗೆ ಇದೆ. ಒಂದನೆಯದು ಅಧಿಕಾರಕ್ಕಾಗಿ ರಾಜಕಾರಣ, ಎರಡನೆಯದು ಜನಪರ ರಾಜಕಾರಣ. ನಾನು ಜನಪರ ರಾಜಕಾರಣ ಮಾಡುವವ. ಜನಪರ ರಾಜಕಾರಣದ ಮೂಲಕ ಅಧಿಕಾರ ರಾಜಕಾರಣ ಮಾಡುವವನು ಎಂದು ಹೇಳಿದರು.

ಕೆಲವರು ನನ್ನಿಂದಲೇ ಎಂದು ಹೇಳಿಕೊಳ್ಳುವವರು ಇದ್ದಾರೆ. ಇನ್ನು ಮುಂದೆ ಜನ ಕಲ್ಯಾಣಕ್ಕೆ ವಿರುದ್ಧವಾಗಿ ರಾಜಕಾರಣ ಮಾಡುವವರು ಎಚ್ಚರಿಕೆಯಿಂದ ಇರಬೇಕು. ಜನರ ಬಗ್ಗೆ ಭಯ, ಭಕ್ತಿ ಇರಬೇಕು. ಆದರೆ, ಮೂರನ್ನು ಬಿಟ್ಟು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದರು.

ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಅವಳಿ ಜಿಲ್ಲೆಗೆ ₹ 10 ಸಾವಿರ ಕೋಟಿ ನೀಡಿದ್ದೇನೆ ಎಂದರು.

ಬೊಮ್ಮಾಯಿ ಅವರಿಂದಲೇ ಈ ಯೋಜನೆ ಉದ್ಘಾಟಿಸುತ್ತೇವೆ. ಈ ಭಾಗದ ರೈತರು ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡಬೇಕು ಎಂದರು.

ಯಶವಂತ ರಾಯಗೌಡ ಪಾಟೀಲ ಮಾತನಾಡಿ, ಗುತ್ತಿ ಬಸವಣ್ಣ, ಚಿಮ್ಮಲಗಿ, ಮುಳುವಾಡ, ಇಂಡಿ ಕಾಲುವೆಯ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ, ಕಾಲುವೆಯ ಕೊನೇ ಭಾಗದ ರೈತರ ಹೊಲಕ್ಕೂ ನೀರು ಬರುವಂತೆ ಕ್ರಮಕೈಗೊಳ್ಳಬೇಕು ಎಂದರು.

ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಮುಖಂಡರಾದ ಡಾ.ಗೋಪಾಲ ಕಾರಜೋಳ, ದಯಾಸಾಗರ ಪಾಟೀಲ, ಅಪ್ಪಸಾಹೇಬ ಪಟ್ಟಣಶೆಟ್ಟಿ, ಚಂದ್ರಶೇಖರ ಕವಟಗಿ, ಎಂ.ಎಸ್. ರುದ್ರಗೌಡ ಪಾಟೀಲ, ಹೊರ್ತಿ ಗ್ರಾ.ಪಂ.ಅಧ್ಯಕ್ಷ ರೇವಣಸಿದ್ದ ತೇಲಿ, ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕೃಷ್ಣಮೂರ್ತಿ ಬಿ.ಕುಲಕರ್ಣಿ, ಕೆಬಿಜಿಎನ್ ಎಲ್ ಮುಖ್ಯ ಎಂಜಿನಿಯರ್ ಎಚ್.ಸುರೇಶ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಇದ್ದರು.

***

ನಾಲ್ಕು ವರ್ಷ ನಿದ್ರೆ ಮಾಡಿ, ಈಗ ಚುನಾವಣೆಗಾಗಿ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದಾರೆ ಎಂಬ ಆರೋಪ ಸುಳ್ಳು. ರೈತರು, ಜನರ ಬಗ್ಗೆ ಕಳಕಳಿಯಿಂದ ಯೋಜನೆ ಮಾಡಿದ್ದೇನೆಯೇ ಹೊರತು, ಚುನಾವಣೆಗಾಗಿ ಅಲ್ಲ.
–ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

***

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು 519ರಿಂದ 524 ಮೀಟರ್‌ಗೆ ಎತ್ತರಿಸಿ, ಯೋಜನೆ ಸಂಪೂರ್ಣ ಮಾಡಬೇಕು, ನಮ್ಮ ಪಾಲಿನ 130 ಟಿಎಂಸಿ ನೀರು ಬಳಕೆಗೆ ಆದ್ಯತೆ ನೀಡಬೇಕು.
–ಯಶವಂತರಾಯಗೌಡ ಪಾಟೀಲ, ಶಾಸಕ, ಇಂಡಿ

***

ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೂ ಅಗತ್ಯ ಅನುದಾನ ಮಂಜೂರಾತಿ ನೀಡಿ, ಅನುಷ್ಠಾನಕ್ಕೆ ಆದ್ಯತೆ ನೀಡಬೇಕು.
–ರಮೇಶ ಜಿಗಜಿಣಗಿ, ಸಂಸದ

***

ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದವರು ಗೋವಿಂದ ಕಾರಜೋಳ. ಅನೇಕರು ನಾನು ಮಾಡಿದ್ದೆ ಎಂದು ಸುಳ್ಳು ಹೇಳುತ್ತಾರೆ.
–ಬಸನಗೌಡ ಪಾಟೀಲ ಯತ್ನಾಳ, ಶಾಸಕ, ವಿಜಯಪುರ

***

ರೈತರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಆದರೆ, ಎಲ್ಲ ರಾಜಕೀಯ ಪಕ್ಷಗಳು ರೈತರಿಗೆ ಸೇರಿವೆ ಎಂಬುದನ್ನು ಯಾರೂ ಮರೆಯಬಾರದು. ರೈತರ ವಿಷಯದಲ್ಲಿ ರಾಜಕಾರಣ ಮಾಡಬಾರದು.
–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT