ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಧರ್ಮವೇ ಹೊರತು, ಜಾತಿಯಲ್ಲ: ಪ್ರೊ.‌ಎಸ್.ಜಿ.ಸಿದ್ದರಾಮಯ್ಯ

Published 27 ಜುಲೈ 2023, 12:55 IST
Last Updated 27 ಜುಲೈ 2023, 12:55 IST
ಅಕ್ಷರ ಗಾತ್ರ

ವಿಜಯಪುರ: ‘ಶರಣ ಅಥವಾ ವಚನ ಎಂಬುದು ಧರ್ಮವೇ ಹೊರತು, ಜಾತಿಯಲ್ಲ. ಇದನ್ನು ಜಾತಿಯನ್ನಾಗಿ ಗುರುತಿಸುವುದು ಬಸವಣ್ಣಗೆ ಮಾಡಿದ ಅವಮಾನವಾಗುತ್ತದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.‌ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ.ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಚಿಂತನ ಸಾಂಸ್ಕೃತಿಕ ಬಳಗ ಗುರುವಾರ ಆಯೋಜಿಸಿದ್ದ ಡಾ. ಫ.ಗು. ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ. ಬಿ. ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ‘ವಚನ ಧರ್ಮ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

‘ಇಸ್ಲಾಂ ಧರ್ಮ, ಜೈನ ಧರ್ಮ, ಬೌದ್ದ ಧರ್ಮ, ಕ್ರೈಸ್ತ ಧರ್ಮಗಳಿಗೆ ಅವುಗಳದೇ ಆದ ಧರ್ಮ ಗ್ರಂಥಗಳಿವೆ. ಅದೇ ರೀತಿ ವಚನಗಳು ಸಹ ಶರಣ ಧರ್ಮದ ಧಾರ್ಮಿಕ ಗ್ರಂಥವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ವಚನ ಧರ್ಮ ಎಂಬುದು ಕನ್ನಡದ ಅಸ್ಮಿತೆಯಾಗಿದೆ. ಜಗತ್ತಿನ ಇತರೆ ಎಲ್ಲ ಸಾಹಿತ್ಯ ಏಕ ವ್ಯಕ್ತಿಯಿಂದ ರಚನೆಯಾಗಿದ್ದರೇ ವಚನ ಸಾಹಿತ್ಯ ಚಳವಳಿಯ ಮೂಲಕ ಸಾಮೂಹಿಕವಾಗಿ ಹುಟ್ಟಿಬೆಳೆದಿದೆ. ಶರಣ ಚಳವಳಿಯಲ್ಲಿ ಹುಟ್ಟಿದ ಉಪ ಉತ್ಪನ್ನವೇ ವಚನವಾಗಿದೆ’ ಎಂದರು.

‘ವೇದ, ಆಗಮಗಳನ್ನು ಅನಿಷ್ಟ ಎಂದು ಭಾವಿಸಿ, ಅವುಗಳನ್ನು ತಿರಸ್ಕರಿಸಿ, ದಯೆ ಇಲ್ಲದ ವೈದಿಕ ಧರ್ಮದ ಅಸಮಾನತೆ ವಿರುದ್ಧ ಹುಟ್ಟಿದ ಧರ್ಮವೇ ಶರಣ ಧರ್ಮವಾಗಿದೆ. ದಯೆಯೇ ಧರ್ಮದ ಮೂಲವಾಗಿ ಇಟ್ಟುಕೊಂಡಿರುವುದು ವಚನ ಧರ್ಮವಾಗಿದೆ’  ಎಂದರು.

‘ಕಾಯಕ ತತ್ವ ಆಧರಿಸಿದ ಧರ್ಮ‌ ಶರಣ ಧರ್ಮವಾಗಿದೆ. ವಚನ ಧರ್ಮ ವೈಚಾರಿಕ ಮತ್ತು ವೈಜ್ಞಾನಿಕವಾಗಿದೆ. ಪ್ರಜಾಪ್ರಭುತ್ವದ ನಿಲುವು ವಚನ ಧರ್ಮದ್ದಾಗಿದೆ‘ ಎಂದರು. 

ಸಾನ್ನಿಧ್ಯ ವಹಿಸಿದ್ದ ಇಳಕಲ್ ಚಿತ್ತರಗಿಮಠದ ಗುರು ಮಹಾಂತ ಸ್ವಾಮೀಜಿ ಮಾತನಾಡಿ, ‘ಮನುಷ್ಯನಿಗೆ ಹೊಟ್ಟೆ ಹಸಿವು ಎಷ್ಟು ಮುಖ್ಯನೋ, ದೇವರ ಹಸಿವು ಅಷ್ಟೇ ಮುಖ್ಯ. ಈ ಹಿಂದೆ ದೇವರ‌ ಕಾಣಲು ಮನೆ, ಮಠ, ಸಂಸಾರ ಬಿಟ್ಟು ಕಾಡು ಸೇರಿ ಘೋರ ತಪಸ್ಸು ಮಾಡುತ್ತಿದ್ದರು. ಋಷಿ–ಮುನಿಗಳಿಗೆ ಇದೊಂದು ಸಂಪ್ರದಾಯವಾಗಿತ್ತು. ಬಸವಣ್ಣ ಈ ಸಂಪ್ರದಾಯದ ಬದಲಾವಣೆಗೆ ಮುಂದಾದ. ಮನೆ ಬಿಡುವ ಅಗತ್ಯವಿಲ್ಲ‌ ಎಂದು ಹೊಸ ಮಾರ್ಗ ಕಂಡುಕೊಂಡ’ ಎಂದರು.

‘ಕಾಡಿಗೆ ಹೋಗದೇ ಮನೆ, ಕುಟುಂಬದಲ್ಲಿ ಇದ್ದುಕೊಂಡೇ ಧ್ಯಾನ ಮಾಡಲು ಇಷ್ಟ ಲಿಂಗದ ಪರಿಕಲ್ಪನೆ ನೀಡಿದರು. ಇಷ್ಟಲಿಂಗ ನೋಡುತ್ತಾ ಮನಸ್ಸನ್ನು ಕೇಂದ್ರೀಕರಿಸಲು ಸೂಚಿಸಿದರು. ಇಷ್ಟಲಿಂಗ ದೇವರಲ್ಲ, ಅದು ಈ ಪ್ರಪಂಚದ ಸಂಕೇತವಾಗಿದೆ. ಈ ಮೂಲಕ ಮನಸ್ಸು ಕೇಂದ್ರೀಕರಿಸುವಂತೆ ಮಾಡಿದರು. ಭ್ರಮೆಯಿಂದ ಹೊರ‌ಬರುವಂತೆ ಮಾಡಿದರು. ಅರಿವಿನಿಂದ ದೇವರನ್ನು ಕಾಣಬೇಕು’ ಎಂದು ಪ್ರತಿಪಾದಿಸಿದರು.

‘ವಚನಗಳ ಸಂಗ್ರಹದ ಮೂಲಕ ಫ.ಗು.ಹಳಕಟ್ಟಿ ಅವರು ಕಳೆದುಹೋಗಿದ್ದ ಬಸವಣ್ಣನನ್ನು ಬದುಕಿಸಿದ್ದಾರೆ. ಅದೇ ರೀತಿ ಫ.ಗು. ಹಳಕಟ್ಟಿಯವರನ್ನು ಎಂ.ಬಿ.ಪಾಟೀಲ ನಾಡಿಗೆ ಪರಿಚಯಿಸಿ, ಶಾಶ್ವತಗೊಳಿಸಿದ್ದಾರೆ’ ಎಂದರು.

ಸಚಿವ ಎಂ.ಬಿ.ಪಾಟೀಲ, ಚಿಂತನ ಸಾಂಸ್ಕೃತಿಕ ಬಳಗದ ಕಾರ್ಯದರ್ಶಿ ಮಹಾಂತೇಶ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT