ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತಪರ ಕಾಳಜಿಯಿಂದ ಯೋಜನೆ ಜಾರಿ: ಕಾರಜೋಳ

ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿಗೆ ಶಂಕುಸ್ಥಾಪನೆ
Last Updated 10 ಮಾರ್ಚ್ 2023, 11:13 IST
ಅಕ್ಷರ ಗಾತ್ರ

ವಿಜಯಪುರ: ಯಾವುದೇ ಚುನಾವಣೆ ದೃಷ್ಟಿಯನ್ನು ಇಟ್ಟುಕೊಳ್ಳದೇ ನನ್ನಲಿರುವ ಜನಪರ, ರೈತಪರ ಕಾಳಜಿಯಿಂದಾಗಿ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿದ್ದೇನೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದರು.

ಜಲಸಂಪನ್ಮೂಲ ಇಲಾಖೆ, ಕೃಷ್ಣಾಭಾಗ್ಯ ಜಲ ನಿಗಮ ನಿಯಮಿತದ ಸಹಯೋಗದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಹಂತ-1 ಹಾಗೂ ಇಂಡಿ ತಾಲ್ಲೂಕಿನ 16 ಕೆರೆ ತುಂಬುವ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮವರೇ ನೀರಾವರಿ ಮಂತ್ರಿಯಾಗಿದ್ದರೂ ಹೊರ್ತಿ ಏತ ನೀರಾವರಿ ಯೋಜನೆಗೆ ಆದ್ಯತೆ ಸಿಗಲಿಲ್ಲ, ನಿಮ್ಮಿಂದಲಾದರೂ ಯೋಜನೆ ಜಾರಿಗೆ ಆದ್ಯತೆ ನೀಡಿ ಎಂದು ಇಂಡಿ ಶಾಸಕ ಯಶವಂತ ರಾಯಗೌಡ ಪಾಟೀಲ ಸದನದಲ್ಲಿ ಪ್ರಶ್ನೆ ಎತ್ತಿದ್ದರು. ಸಂಸದ ರಮೇಶ ಜಿಗಜಿಣಗಿ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಮಾಡಿದ್ದರು. ರೈತ ಮುಖಂಡ ಅಣ್ಣಪ್ಪ ಸಾಹುಕಾರ ಖೈನೂರ ನೇತೃತ್ವದಲ್ಲಿ ಅನೇಕರು ಈ ಯೋಜನೆಗಾಗಿ ಹೋರಾಟ ನಡೆಸಿದ್ದರು. ಈ ಎಲ್ಲದರ ಫಲವಾಗಿ ಇಂದು ಯೋಜನೆ ಅನುಷ್ಠಾನವಾಗಿದೆ ಎಂದರು.

ಜಲಸಂಪನ್ಮೂಲ ಖಾತೆ ಕೇವಲ ಒಂದು ವರ್ಷ ಮಾತ್ರ ನನಗೆ ಸಿಕ್ಕಿದೆ. ಒಂದು ವೇಳೆ ಐದು ವರ್ಷ ಲಭಿಸಿದ್ದರೇ ಈ ಭಾಗವನ್ನು ಸಂಪೂರ್ಣ ನೀರಾವರಿ ಮಾಡುತ್ತಿದ್ದೆ. ಆದರೂ, ಸಿಕ್ಕ ಅತ್ಯಲ್ಪ ಅವಧಿಯಲ್ಲಿ ಅವಳಿ ಜಿಲ್ಲೆಯ ನೀರಾವರಿ ಯೋಜನೆಗೆ ₹ 10 ಸಾವಿರ ಕೋಟಿ ಅನುದಾನ ನೀಡಿದ್ದೇನೆ ಎಂದು ಹೇಳಿದರು.

ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಯನ್ನು ಮೂರು ಹಂತದಲ್ಲಿ ಅನುಷ್ಠಾನ ಮಾಡಲು ನಿರ್ಧರಿಸಿ, ₹2638 ಕೋಟಿ ಮೊತ್ತದ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಮೊದಲನೇ ಹಂತದಲ್ಲಿ ಮುಖ್ಯ ಸ್ಥಾವರದ ಕಾಮಗಾರಿ ಹಾಗೂ ರೈಸಿಂಗ್ ಮೇನ್ ಕಾಮಗಾರಿಯಗಾಗಿ ₹ 812 ಕೋಟಿ ಮೊತ್ತದ ಟೆಂಡರ್ ಅನುಮೋದನೆ ನೀಡಿ, ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಅತಿ ಎತ್ತರದ ಪ್ರದೇಶದವಾದ, ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಪ್ರದೇಶವು ನೀರಾವರಿ ಯೋಜನೆಯಿಂದ ವಂಚಿತವಾಗಿದ್ದು, ಹೊರ್ತಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ನುಡಿದಂತೆ ಇಂದು ಅಡಿಗಲ್ಲು ಸಮಾರಂಭ ನೆರವೇರಿಸಲಾಗಿದೆ ಎಂದರು.

ಈ ಯೋಜನೆಯ ಮೊದಲನೇ ಹಂತ ಮುಗಿಯುವುದರೊಳಗೆ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ಎರಡನೇ ಹಂತದ ಕಾಮಗಾರಿ ನಾವೇ ಮಾಡುತ್ತೇವೆ. ಈ ಯೋಜನೆ ಅನುಷ್ಠಾನಕ್ಕೆ ಜನರ ಸಹಕಾರವೂ ಅಷ್ಟೇ ಮುಖ್ಯವಾಗಿದೆ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT